ADVERTISEMENT

ಸಮರ್ಪಕ ಕೃಷಿಸಾಲ ನೀತಿ ರೂಪಿಸಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 9:52 IST
Last Updated 25 ಅಕ್ಟೋಬರ್ 2017, 9:52 IST
ಯಾದಗಿರಿಯ ಸಪ್ನಾ ಮೈದಾನದಲ್ಲಿ ಮಂಗಳವಾರ ಸಾಲಮನ್ನಾ ಅರ್ಜಿ ಸಲ್ಲಿಕೆ ಆಂದೋಲನದ ಅಂಗವಾಗಿ ಹಮ್ಮಿಕೊಂಡಿದ್ದ ರೈತರ ಬಹಿರಂಗ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು
ಯಾದಗಿರಿಯ ಸಪ್ನಾ ಮೈದಾನದಲ್ಲಿ ಮಂಗಳವಾರ ಸಾಲಮನ್ನಾ ಅರ್ಜಿ ಸಲ್ಲಿಕೆ ಆಂದೋಲನದ ಅಂಗವಾಗಿ ಹಮ್ಮಿಕೊಂಡಿದ್ದ ರೈತರ ಬಹಿರಂಗ ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು   

ಯಾದಗಿರಿ: ‘ರಾಜ್ಯದಲ್ಲಿ ಈಗಿರುವ ರೈತರ ₹2,500 ಕೋಟಿ ಕೃಷಿ ಸಾಲವನ್ನು ಸರ್ಕಾರ ಸಂಪೂರ್ಣ ಮನ್ನಾ ಮಾಡಿ ತಕ್ಷಣ ಸಮರ್ಪಕ ಕೃಷಿಸಾಲ ನೀತಿ ರೂಪಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರವನ್ನು ಒತ್ತಾಯಿಸಿದರು. ನಗರದ ಸಪ್ನಾ ಮೈದಾನದಲ್ಲಿ ಮಂಗಳವಾರ ಸಾಲಮನ್ನಾ ಅರ್ಜಿ ಸಲ್ಲಿಕೆ ಆಂದೋಲನದ ಅಂಗವಾಗಿ ಹಮ್ಮಿಕೊಂಡಿದ್ದ ರೈತರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಆಹಾರ ಭದ್ರತೆಯಂತಹ ಬೃಹತ್‌ ಸಮಸ್ಯೆ ತಲೆದೋರಿದಾಗ ಹೈಬ್ರಿಡ್ ಬಿತ್ತನೆ ಬೀಜ, ಕೀಟನಾಶಕ, ಕೃಷಿ ಪರಿಕರ, ಸಾಲ ಕೊಟ್ಟು ಕೃಷಿಗೆ ಪ್ರೋತ್ಸಾಹ ನೀಡಿದ ಸರ್ಕಾರಗಳು ಇಂದು ದೇಶಕ್ಕೆ ಅನ್ನ ಕೊಡುವ ರೈತರನ್ನು ಸಂಪೂರ್ಣ ಸಾಲಗಾರರನ್ನಾಗಿಸಿವೆ’ ಎಂದು ಆರೋಪಿಸಿದರು.

‘ಸ್ವಾತಂತ್ರ್ಯ ನಂತರ ಆಹಾರ ಧಾನ್ಯ ಆಮದಿಗೆ ಭಾರತ ವಿದೇಶಗಳನ್ನೇ ಸಂಪೂರ್ಣ ಅವಲಂಬಿಸಿತ್ತು. 1965ರಲ್ಲಿ ಉಂಟಾದ ಹಸಿರು ಕ್ರಾಂತಿ ದೇಶದ ರೈತರನ್ನು ಕೃಷಿ ಮಾಡುವಂತೆ ಉತ್ತೇಜಿಸಿತು. ಖ್ಯಾತ ಕೃಷಿ ವಿಜ್ಞಾನಿ ಸ್ವಾಮಿನಾಥನ್ ಅವರೇ ಆಗ ರೈತರಿಗೆ ಹೈಬ್ರಿಡ್ ತಳಿ ಬೆಳೆಯುವಂತೆ ಘೋಷಣೆ ಕೂಗಿದ್ದರು.

ADVERTISEMENT

ಅಂದು ಅವರು ಮಾಡಿರುವ ತಪ್ಪು ತಿದ್ದಿಕೊಳ್ಳಲು ಈಚೆಗೆ ಸರ್ಕಾರಕ್ಕೆ ಒಂದಷ್ಟು ರೈತಪರ ಶಿಫಾರಸು ವರದಿ ನೀಡಿದ್ದಾರೆ. ಆದರೆ, ಅವು ಇದುವರೆಗೂ ಜಾರಿಯಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬ್ಯಾಂಕುಗಳು ನೀಡುವ ಅಲ್ಪವಧಿ, ದೀರ್ಘಾವಧಿ ಸಾಲ ಪಡೆದ ರೈತರು ಸಾಲವನ್ನು ಕೃಷಿಗೆ ವಿನಿಯೋಗಿಸುತ್ತಾರೆ. ಆದರೆ, ಬರ, ಅತಿವೃಷ್ಟಿ, ಪ್ರಕೃತಿ ವಿಕೋಪ ಹೀಗೆ ಒಂದಲ್ಲ ಒಂದು ಕಾರಣಕ್ಕೆ ಕೃಷಿ ನಷ್ಟ ಸಂಭವಿಸುತ್ತಿದೆ. ಜತೆಗೆ ಕೃಷಿ ಉತ್ಪನ್ನಗಳಿಗೆ ಸಿಗದ ವೈಜ್ಞಾನಿಕ ದರ, ಬೆಲೆ ನಿಯಂತ್ರಣಗಳಿಂದಲೂ ಸರ್ಕಾರಗಳು ರೈತರ ಮೇಲೆ ಪ್ರಹಾರ ನಡೆಸುತ್ತಿವೆ. ಇಂತಹ ಸ್ಥಿತಿಯಲ್ಲಿ ರೈತರು ಕೃಷಿ ಸಾಲ ಮರು ಪಾವತಿ ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಕೇಂದ್ರ ಮತ್ತು ರಾಜ್ಯಗಳು ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುತ್ತಿವೆ. ಒಂದು ಕ್ವಿಂಟಲ್ ತೊಗರಿ ಬೆಳೆಯಲು ಕನಿಷ್ಠ ₹5 ಸಾವಿರ ವೆಚ್ಚವಾಗುತ್ತದೆ. ಅದರ ಅರ್ಧವೆಚ್ಚವಾಗಿ ಬೆಂಬಲ ಬೆಲೆ ನೀಡಬೇಕು. ಆದರೆ, ಕನಿಷ್ಠ ಬೆಂಬಲ ಬೆಲೆ ನೀಡುತ್ತಿರುವುದರಿಂದ ರೈತರಿಗೆ ಕ್ವಿಂಟಲ್ ತೊಗರಿ ಬೆಳೆಗೆ ಕೇವಲ ₹5,500 ಸಿಗುತ್ತಿದೆ. ಅಂದರೆ ವೈಜ್ಞಾನಿಕ ದರ ನಿಗದಿಯಾಗದೇ ಇರುವುದರಿಂದ ರೈತರಿಗೆ ಕ್ವಿಂಟಲ್‌ ಗೆ ಕನಿಷ್ಠ ₹2,500ದಷ್ಟು ಕೃಷಿನಷ್ಟ ಸಂಭವಿಸುತ್ತಿದೆ. ಆದ್ದರಿಂದ ವೈಜ್ಞಾನಿಕ ದರ ಹಾಗೂ ಸಮರ್ಪಕ ಕೃಷಿ ಸಾಲ ನೀತಿಯನ್ನು ಸರ್ಕಾರ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

‘ಕೃಷಿ ಸಾಲ ಮರುಪಾವತಿ ಹೊಣೆ ಕೇವಲ ರೈತರದ್ದಲ್ಲ; ರೈತ ಬೆಳೆದ ಅನ್ನ ತಿನ್ನುವ ಪ್ರತಿಯೊಬ್ಬರದ್ದಾಗಿದೆ. ಉತ್ತಿ ಬಿತ್ತಿ ಅಕ್ಕಿ ಬೆಳೆದ ರೈತರು ಸಾಲಗಾರರಾಗಬೇಕು; ತಿನ್ನುವವರು ಮಾತ್ರ ಸುಖಃವಾಗಿರಬೇಕು ಎಂದರೆ ಹೇಗೆ? ದೇಶದಲ್ಲಿ ಯುಜಿಸಿ ವೇತನ ಆಯೋಗದ ಮಾದರಿಯಲ್ಲಿ ಕೃಷಿ ಉತ್ಪನ್ನ ಬೆಲೆ ನಿಗದಿಯಾಗಬೇಕು. ಅಲ್ಲಿಯವರೆಗೂ ರೈತರ ಕೃಷಿಸಾಲ ಮರುಪಾವತಿಯನ್ನು ಮುಂದೂಡೋಣ’ ಎಂದು ಸಲಹೆ ನೀಡಿದರು.

ಸಂಘದ ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಕೋಲಾರ, ರಾಜ್ಯ ಸಂಚಾಲಕ ಸುಭಾಷ್ ಐಕೂರ್, ರಾಜ್ಯ ಸಮಿತಿ ಸದಸ್ಯ ನಾಗಣ್ಣ ಬನ್ನೇರುಘಟ್ಟ, ಜಿಲ್ಲಾಧ್ಯಕ್ಷ ಬಸನಗೌಡ, ರಾಮನಗೌಡ ಸಾಲಿಮನಿ, ಸೋಮಶೇಖರ ಮಣ್ಣೂರ್, ಶರಣಗೌಡ ಹುಲಕಲ್, ಪ್ರಾಣೇಶ ಹುಲಕಲ್, ಮಡಿವಾಳ ಸರಸಾಂಬ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.