ADVERTISEMENT

ಸಮರ್ಪಕ ವಿದ್ಯುತ್, ನೀರಿಗೆ ಬರ!

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 6:45 IST
Last Updated 17 ಮಾರ್ಚ್ 2011, 6:45 IST

ಕೆಂಭಾವಿ: ಹಳ್ಳಿಗಳ ಸ್ಥಿತಿ ಸುಧಾರಣೆ ಆಗದ ಹೊರತು ದೇಶದ ಅಭಿವೃದ್ಧಿ ಅಸಾಧ್ಯ ಎಂಬ ಮಾತುಗಳನ್ನು ರಾಜಕೀಯ ಮುಖಂಡರಾದಿಯಾಗಿ ಎಲ್ಲರೂ ಹೇಳುತ್ತಲೇ ಇದ್ದಾರೆ. ಜಗತ್ತು ವೈಜ್ಞಾನಿಕವಾಗಿ ಸಾಕಷ್ಟು ಸಾಧನೆ ಮಾಡಿದ್ದರೂ, ಹಳ್ಳಿಗಳ ಸ್ಥಿತಿ ಮಾತ್ರ ಸುಧಾರಣೆ ಆಗುತ್ತಲೇ ಇಲ್ಲ. ಇದಕ್ಕೊಂದು ಉದಾಹರಣೆ ಎಂಬಂತಿದೆ ಸಮೀಪದ ಮುದನೂರ ಬಿ. ಗ್ರಾಮ.

ಇಪ್ಪತ್ತೊಂದನೇ ಶತಮಾನದಲ್ಲಿಯೂ ವಿದ್ಯುತ್ ಇಲ್ಲದೆ ಜನರು ಜೀವನ ನಡೆಸುತ್ತಿದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಆದರೆ ಸಮೀಪದ ಮುದನೂರು ಬಿ. ಗ್ರಾಮದಲ್ಲಿ 200 ಮನೆಗಳು ನಿರ್ಮಾಣವಾಗಿ ಹಲವಾರು ವರ್ಷಗಳು ಗತಿಸಿದರೂ ಇದುವರೆಗೂ ವಿದ್ಯುತ್ ಸಂಪರ್ಕವನ್ನೇ ಕಂಡಿಲ್ಲ. ವಿದ್ಯುತ್ ಇಲ್ಲದೆ ಅಲ್ಲಿಯ ಜನರು ಕತ್ತಲಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.

ಮುದನೂರು ಬಿ. ಗ್ರಾಮವು ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಇಲ್ಲಿ 5ನೇ ತರಗತಿಯವರೆಗರ ಶಾಲೆಯೂ ಇದೆ. ಗ್ರಾಮದಲ್ಲಿ ಒಟ್ಟಾರೆ 500 ಕ್ಕೂ ಹೆಚ್ಚು ಮನೆಗಳಿದ್ದು, ಅದರಲ್ಲಿ ಸುಮಾರು 200 ಮನೆಗಳಿಗೆ ವಿದ್ಯುತ್ ಹಾಗೂ ನೀರಿನ ಸೌಲಭ್ಯವಿಲ್ಲದೇ ನಾಗರಿಕರು ಪರದಾಡುವಂತಾಗಿದೆ.

ಮುದನೂರು ಕೆ. ಗ್ರಾಮದಲ್ಲಿ ಪಂಚ ತೀರ್ಥಗಳು ವರ್ಷದ 365 ದಿನ ತುಂಬಿ ಹರಿಯುತ್ತವೆ, ಈ ನೀರಿನಿಂದ ನೂರಾರು ಎಕರೆ ಜಮೀನು ನೀರಾವರಿಯಾಗಿದೆ. ಇಲ್ಲಿನ ಜನರಿಗೆ ಕುಡಿಯುವ ನೀರಿನ ತೊಂದರೆ ಮಾತ್ರ ಎದುರಾಗಿಲ್ಲ. ಆದರೆ ಸ್ವಲ್ಪವೇ ಅಂತರದಲ್ಲಿರುವ ಮುದನೂರು ಬಿ. ಗ್ರಾಮಕ್ಕೆ ನೀರಿನ ಕೊರತೆ ಇದೆ. 1.5 ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾದ ಪೈಪ್‌ಲೈನ್ ಕಾಮಗಾರಿಯಿಂದ ಕೇವಲ ಅರ್ಧ ಗ್ರಾಮಕ್ಕೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಅದು ಸ್ವಲ್ಪಮಾತ್ರ.
ಅದಲ್ಲದೇ ಭಾರತ ನಿರ್ಮಾಣ ಯೋಜನೆ ಯಡಿ ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಕೇವಲ ಕೊಳವೆ ಬಾವಿ ತೋಡಿದ ಗುತ್ತಿಗೆ ದಾರರು ಬೋಗಸ್ ಬಿಲ್ ಎತ್ತಿದ್ದಾರೆ ಎಂದು ಗ್ರಾಮದ ವಿಜಯರಡ್ಡಿ ಪಾಟೀಲ ಆರೋಪಿ ಸುತ್ತಾರೆ.

ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಬೇಕಾ ದವರೇ ಈ ರೀತಿ ಹಣ ಲೂಟಿ ಮಾಡಿದರೆ ಜನರಿಗೆ ಸೌಲಭ್ಯ ಸಿಗುವುದು ಯಾವಾಗ ಎನ್ನುವುದು ಪಾಟೀಲರ ಪ್ರಶ್ನೆ.
ನಾರಾಯಣಪುರ ಎಡದಂಡೆ ಕಾಲುವೆಯ ನೀರಾವರಿ ಪ್ರದೇಶಕ್ಕೆ ಒಳಪಡುವುದರಿಂದ, ಇಲ್ಲಿ ಸೊಳ್ಳೆಗಳ ಕಾಟ ಜಾಸ್ತಿ. ಜಾನುವಾರುಗಳಿಗೂ ಸೊಳ್ಳೆ ಪರದೆ ಹಾಕುತ್ತಾರೆ, ಅಂಥದ್ದರಲ್ಲಿ ಇಲ್ಲಿಯ ಜನ ವಿದ್ಯುತ್ ಸೌಲಭ್ಯವಿಲ್ಲದೆ ಜೀವನ ಸಾಗಿಸುತ್ತಿರುವುದು ವಿಪರ್ಯಾಸವೇ ಸರಿ.

ಈ ಹಿಂದಿನ ಚುನಾವಣೆಯಲ್ಲಿ ಮತ ಕೇಳಲು ಬಂದಾಗ ಇಲ್ಲಿಯ ಜನರು ನಮಗೆ ವಿದ್ಯುತ್ ಸೌಲಭ್ಯ ಒದಗಿಸಿ ನಾವು ಮತ ಹಾಕುತ್ತವೆ ಎಂದು ಖಡಾಖಂಡಿತವಾಗಿ ಹೇಳಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಕೇವಲ ವಿದ್ಯುತ್ ಕಂಬಗಳನ್ನು ಹಾಕಿ ನಾಪತ್ತೆಯಾದಿದ್ದಾರೆ. ಚುನಾವಣೆಯಲ್ಲಿ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಎಲ್ಲಿದ್ದವೋ ಇಂದಿಗೂ ಅದೇ ಸ್ಥಳದಲ್ಲಿ ಅನಾಥವಾಗಿ ಬಿದ್ದಿವೆ. ಯಾರೂ ಇತ್ತ ಗಮನ ಹರಿಸುತ್ತಿಲ್ಲ. ಇಲ್ಲಿ ವಾಸಿಸುವ ಕುಟುಂಬಗಳು ಕತ್ತಲಲ್ಲಿಯೇ ಇರುವಂತಾಗಿದೆ. ಸುಳ್ಳಿನ ಕಂತೆ ಕಟ್ಟುವ ರಾಜಕಾರಣಿಗಳನ್ನು ನಂಬಬಾರದು ಎಂದು ಗ್ರಾಮಸ್ಥರು ಶಾಪಿಸುತ್ತಿದ್ದಾರೆ.

ಗ್ರಾಮದಲ್ಲಿ ಒಂದು ಕಿರಿಯ ಪ್ರಾಥಮಿಕ ಶಾಲೆ ಇದ್ದು, ಇಲ್ಲಿ 5 ನೇ ತರಗತಿಯ ವರೆಗೆ ಬೋಧಿಸಲಾಗುತ್ತದೆ. ಆದರೆ ಕೇವಲ ಇಬ್ಬರು ಶಿಕ್ಷಕರು ಮಾತ್ರ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಶಾಲಾ ಆವರಣದಲ್ಲಿರುವ ಕೊಳವೆಬಾವಿ ಕೆಟ್ಟು ವರ್ಷಗಳಾದರೂ ದುರಸ್ತಿ ಮಾಡದಿರುವುದು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ.

ಗ್ರಾಮದಲ್ಲಿ ನೀರಿಗೆ ಯಾವುದೇ ಬರವಿಲ್ಲ. ಆದರೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಬಡಾವಣೆಗಳಿಗೆ ನೀರು ಸರಬರಾಜು ಆಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಪ್ರತಿ ಗ್ರಾಮಗಳಿಗೂ ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳ ಬೇಜ ವಾಬ್ದಾರಿಯಿಂದ ಸುರಪುರ ತಾಲ್ಲೂಕಿನ ಅನೇಕ ಗ್ರಾಮಗಳು ಮೂಲಸೌಲಭ್ಯಗಳಿಂದ ವಂಚಿತ ವಾಗಿವೆ ಎಂದು ಗ್ರಾಮದ ಜನರು ಆರೋಪಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.