ADVERTISEMENT

`ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ'

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2013, 7:29 IST
Last Updated 28 ಫೆಬ್ರುವರಿ 2013, 7:29 IST
ಯಾದಗಿರಿಯ ಆಫೀಸರ್ಸ್ ಕ್ಲಬ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಸಾವಯವ ನೈಸರ್ಗಿಕ ಕೃಷಿ ತರಬೇತಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎ.ಜಿಲಾನಿ ಉದ್ಘಾಟಿಸಿದರು
ಯಾದಗಿರಿಯ ಆಫೀಸರ್ಸ್ ಕ್ಲಬ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಸಾವಯವ ನೈಸರ್ಗಿಕ ಕೃಷಿ ತರಬೇತಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎ.ಜಿಲಾನಿ ಉದ್ಘಾಟಿಸಿದರು   

ಯಾದಗಿರಿ: ಗ್ರಾಮೀಣ ಭಾಗದ ರೈತರು ಕೃಷಿಯಲ್ಲಿ ಆರ್ಥಿಕ ವೆಚ್ಚಕ್ಕೆ ಕಡಿವಾಣ ಹಾಗೂ ಪರಿಸರ ರಕ್ಷಣೆ ದೃಷ್ಟಿಯಿಂದ ಕಡಿಮೆ ಖರ್ಚಿನ ಸಾವಯುವ ನೈಸರ್ಗಿಕ ಪದ್ಧತಿಯನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಆರ್ಥಿಕವಾಗಿ ಬದಲಾವಣೆ ಕಾಣಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ ಸಲಹೆ ನೀಡಿದರು.

ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ತಾಲ್ಲೂಕು ಪಂಚಾಯಿತಿ ಆಶ್ರಯಲ್ಲಿ ನಗರದ ಆಫೀಸರ್ಸ್ ಕ್ಲಬ್‌ನಲ್ಲಿ ಬುಧವಾರ ತಾಲ್ಲೂಕಿನ ರೈತರಿಗಾಗಿ ಏರ್ಪಡಿಸಿದ್ದ ಸಾವಯುವ ನೈಸರ್ಗಿಕ ಕೃಷಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಗತಿ ಪರ ರೈತ ಬಸಣ್ಣಗೌಡ ಗುಂಜನೂರ ಮಾತನಾಡಿ, ಇಂದಿನ ದಿನಗಳಲ್ಲಿ ರೈತರು ಕೃಷಿ ಕ್ಷೇತ್ರದಲ್ಲಿ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳಿಗಾಗಿ ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ರೈತ ವಿರೋಧಿ ನೀತಿಯಿಂದ ಮಾರುಕಟ್ಟೆಯಲ್ಲಿ ಬೆಳೆಗೆ ಸೂಕ್ತ ವೈಜ್ಞಾನಿಕ ಬೆಲೆ ಸಿಗದೇ ಸಾಲಕ್ಕೆ ಗುರಿಯಾಗಿ ಕೃಷಿಯಿಂದ ದೂರವಾಗುತ್ತಿದ್ದು, ಆತ್ಮಹತ್ಯೆಗೆ ಶರಣಾಗುವಂತಹ ವಾತಾವರಣ ನಿರ್ಮಾಣವಾಗಿರುವುದು ದೇಶದ ದುರಂತ ಎಂದು ಕಳವಳ ವ್ಯಕ್ತಪಡಿಸಿದರು.

ಈ ಭಾಗದಲ್ಲಿ ಸಣ್ಣ ರೈತರು ಹೆಚ್ಚಾಗಿದ್ದಾರೆ. ಅವರು ಒಣ ಬೇಸಾಯವನ್ನೇ ಅವಲಂಬಿಸಿದ್ದಾರೆ. ಅವರಿಗೆ ಕಾಡುತ್ತಿರುವ ಪ್ರಮುಖ ಸಮಸ್ಯೆಗಳು ನೀರು, ವಿದ್ಯುತ್, ಕೂಲಿ ಕಾರ್ಮಿಕರು. ಇದರಿಂದ ಬೇಸತ್ತ ರೈತರು ಉದ್ಯೋಗ ಅರಸಿ ಬೃಹತ್ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಈ ಸಮಸ್ಯೆ ಮುಂದುವರಿದರೆ ದೇಶದಲ್ಲಿ ಆಹಾರ ಸಮಸ್ಯೆ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಕೃಷಿ ಇಲಾಖೆ ಅಧಿಕಾರಿಗಳು ಇಂತಹ ತರಬೇತಿ ಶಿಬಿರಗಳನ್ನು ಪ್ರತಿ ಹೋಬಳಿ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಹಮ್ಮಿಕೊಂಡು ರೈತರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸರ್ಕಾರದ ಯೋಜನೆಗಳ ಲಾಭವನ್ನು ಅವರಿಗೆ  ಪ್ರಾಮಾಣಿಕವಾಗಿ ತಲುಪಿಸಬೇಕು.

ದೇಶದಲ್ಲಿರುವ ಪ್ರಗತಿ ಪರ ರೈತರನ್ನು ಭೇಟಿಯಾಗಿ ಅಗತ್ಯ ಮಾಹಿತಿ ಪಡೆಯಲು ರೈತರ ಪ್ರವಾಸ ಹಮ್ಮಿಕೊಂಡು ಅವರ ಅನುಭಗಳನ್ನು ನಮ್ಮ ರೈತರಿಗೆ ನೀಡಬೇಕು. ಅಂದಾಗ ಮಾತ್ರ ಕೃಷಿ ಬಗ್ಗೆ ಅವರಲ್ಲಿ ಒಲವು ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.

ಭೀಮರಾಯಗುಡಿ ಕೃಷಿ ಮಹಾವಿದ್ಯಾಲಯ ಬೇಸಾಯ ತಜ್ಞರಾದ ಡಾ. ಮಲ್ಲಿಕಾರ್ಜುನ ಅಗನಾಳ ಕೃಷಿಯಲ್ಲಿ ರೈತರು ಕಡಿಮೆ ಖರ್ಚಿನಲ್ಲಿ ಸಾವಯುವ ಪದ್ಧತಿಯನ್ನು ಯಾವ ರೀತಿ ಅಳವಡಿಸಿಕೊಳ್ಳಬೇಕು ಎಂಬುವುದನ್ನು ವಿವರಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಶಿವರಾಮ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ರೈತರಾದ ಸಿದ್ಧಣಗೌಡ ಪಾಟೀಲ್ ಕಡೇಚೂರ, ಕೃಷಿ ಇಲಾಖೆ ನಿರ್ದೇಶಕ ಬಿ.ಸುರೇಶ, ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಶಕ ಶಂಕರಗೌಡ, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಷಣ್ಮುಖ ಸ್ವಾಮಿ ಗೊಂಗಡಿ, ಕಾಶಿನಾಥ ಕನಕೇರಿ, ಮಹಾನಂದ ಸ್ವಾಮಿ, ರಾಜಕುಮಾರ ಮುಂತಾದವರು ಇದ್ದರು.

ಡಾನ್ ಬಾಸ್ಕೋ ಬಾಲ ಕಾರ್ಮಿಕ ಶಾಲೆಯ ಮಕ್ಕಳು ಪುಣ್ಯ ಕೋಟಿ ಹಾಡಿಗೆ ಮಾಡಿದ ನೃತ್ಯ ಗಮನ ಸೆಳೆಯಿತು. ಶಿಬಿರದಲ್ಲಿ ತಾಲ್ಲೂಕಿನ ನೂರಾರು ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.