ADVERTISEMENT

ಹಣ ಖರ್ಚಾದರೂ ಹನಿ ನೀರಿಗೆ ಪರದಾಟ!

​ಪ್ರಜಾವಾಣಿ ವಾರ್ತೆ
Published 13 ಮೇ 2014, 6:41 IST
Last Updated 13 ಮೇ 2014, 6:41 IST
ಹಣ ಖರ್ಚಾದರೂ ಹನಿ ನೀರಿಗೆ ಪರದಾಟ!
ಹಣ ಖರ್ಚಾದರೂ ಹನಿ ನೀರಿಗೆ ಪರದಾಟ!   

ಹುಣಸಗಿ: ಕೊಡೇಕಲ್ಲ ಸಮೀಪದ ಬರದೇವನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಉಪ್ಪಲದಿನ್ನಿ  ನವ ಗ್ರಾಮದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

2009 ರಲ್ಲಿ ಉಂಟಾದ ಪ್ರವಾಹದಿಂದಾಗಿ ಕೃಷ್ಣಾ ನದಿ ಮತ್ತು ಡೋಣಿಯ ನೀರು ಉಪ್ಪಲದಿನ್ನಿ ಗ್ರಾಮಕ್ಕೆ ನುಗ್ಗಿ ಅಪಾರ ಪ್ರಮಾಣದ ನಷ್ಟವನ್ನು ಮಾಡಿತ್ತು. ಅಂದಿನ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಎಚ್ಚೆತ್ತು ನೆರವಿಗೆ ಬಂದು ಈ ಗ್ರಾಮದಲ್ಲಿ ವಾಸಮಾಡುವುದು ಸೂಕ್ತವಲ್ಲ, ಎಂದು ಬೇರೆಡೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಎತ್ತರ ಪ್ರದೇಶದಲ್ಲಿ ದಾನಿಗಳ ಸಹಾಯದೊಂದಿಗೆ ಸುಮಾರು 120 ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಯಿತು.

ಅಂದಿನಿಂದ ನಿಧಾನಗತಿಯಲ್ಲಿ ಸಾಗಿದ ಮನೆ ನಿರ್ಮಾಣ ಕಾಮಗಾರಿ ಸಂಪೂರ್ಣ ಮುಗಿಯದೇ ಕೇವಲ 92 ಮನೆಗಳನ್ನು ನಿರ್ಮಿಸಲಾಗಿದೆ. ಅವು ಕಳಪೆ ಗುಣಮಟ್ಟದಿಂದ ಕೂಡಿವೆ. ಬಾಗಿಲು, ಕಿಟಕಿ ಕಿತ್ತು ಹೋಗಿವೆ.  ಮೇಲ್ಛಾವಣಿ ಸೋರುತ್ತಿವೆ. ಆಯಿಲ್ ಮಿಶ್ರಿತ ಡಾಂಬರ್ ಬಳಸಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಮುಖ್ಯವಾಗಿ  ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.

‘ಮನೆಗಳು ನಿರ್ಮಾಣವಾಗಿ ಸುಮಾರು ಮೂರು ವರ್ಷವಾದರೂ, ಜಿಲ್ಲಾಡಳಿತ ನಮ್ಮ ಸಮಸ್ಯೆ ಪರಿಹಸಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ’ ಎಂದು  ಬಸಣ್ಣ ಮಾಲಿಗೌಡರ್, ಅಂಬ್ರಪ್ಪಗೌಡ ಬಿರಾದಾರ, ಯಮನಪ್ಪ ಗಡ್ಡಿ  ಹೇಳುತ್ತಾರೆ.

ಅಂದಾಜು 91 ಕುಟುಂಬಗಳ ಸುಮಾರು 450 ಜನ ವಾಸಿಸುತ್ತಿರುವ ಈ ಆಶ್ರಯ ಕಾಲೊನಿಯಲ್ಲಿ ಜನತೆ ನೀರಿಗಾಗಿ ನಿತ್ಯ ಪರದಾಡುವ ಪರಿಸ್ಥಿತಿ ಇದೆ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ. ಜಿಲ್ಲಾ ಪಂಚಾಯಿತಿ ಅನುದಾನದ ಅಂದಾಜು ₨7.50 ಲಕ್ಷ ವೆಚ್ಚದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಕೈಗೆತ್ತಿಕೊಂಡು, ಶಾಶ್ವತ ನೀರು ಒದಗಿಸುವ ಹಿತದೃಷ್ಟಿಯಿಂದ 5 ಗುಮ್ಮಿಗಳನ್ನು ಕೂಡಿಸಿ ಬರದೇವನಾಳ ಹತ್ತಿರದ ಹಳ್ಳದಲ್ಲಿ ಕೊಳವೆ ಬಾವಿ ಕೊರೆದು ಪೈಪ್ ಲೈನ್ ಮಾಡಿದೆ. ಆದರೆ, ಪ್ರತ್ಯೇಕ ಟಿಸಿ ಮತ್ತು ವಿದ್ಯುತ್‌ ಸಮಸ್ಯೆಯಿಂದಾಗಿ ನಮಗೆ ಕುಡಿಯುವ ನೀರು ಬಿಸಿಲುಗುದುರೆಯಂತಾಗಿದೆ ಎಂದು ರಾಚಪ್ಪಗೌಡ ಪೊಲೀಸ್ ಪಾಟೀಲ್ ಹಾಗೂ ಭೀಮಣ್ಣ ಹುಲಿಕೇರಿ ಅಸಮಧಾನ ವ್ಯಕ್ತಪಡಿಸುತ್ತಾರೆ.

ಬೆಳಗಾದರೆ ಸಾಕು ನೀರಿಗಾಗಿ ಪರದಾಟ ತಪ್ಪಿಲ್ಲ. ದೂರದ ಏಕೈಕ ಕೊಳವೆ ಬಾವಿ ನೆಚ್ಚಿಕೊಂಡಿದ್ದು, ನಮ್ಮ ಗೋಳು ಯಾರು ಕೇಳುತ್ತಿಲ್ಲ. ಇದರಿಂದಾಗಿ ಜಾನುವಾರುಗಳಿಗೂ ತೊಂದರೆಯಾಗಿ ಹನಿ ನೀರು ಸಿಗುತ್ತಿಲ್ಲ. ಬಟ್ಟೆಬರಿ ತೊಳೆಯಲು ಸುತ್ತಲಿನ ಹಳ್ಳದಲ್ಲಿಯೂ ನೀರಿಲ್ಲ. ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಿ  ಎಂದು ಬಸಯ್ಯ ಹಿರೇಮಠ, ಶರಣಪ್ಪ ಗಡ್ಡಿ, ಬಸಣ್ಣ ಕಂಬಾರ ನೊಂದು ನುಡಿಯುತ್ತಾರೆ.  

‘ನೀರಿಗೆ ಪಾಳಿ ಹಚ್ಚಬೇಕು’
‘ಅಧಿಕಾರಿಗಳ ಮಾತು ಕೇಳಿ ನವಗ್ರಾಮದಲ್ಲಿ ವಾಸಿಸುತ್ತಿದ್ದೇವೆ. ಆದರೆ, ಇಲ್ಲಿ ನೀರೇ ಇಲ್ಲ, 5 ಗುಮ್ಮಿಗಳನ್ನು ಕೂಡಿಸಿದ್ದು ಕೇವಲ ನೋಡುವುದಕ್ಕಾಗಿ ಎಂಬಂತಾಗಿದೆ. ಇರುವ ಒಂದೇ ಕೊಳವೆ ಬಾವಿಯಲ್ಲಿ ತಾಸುಗಟ್ಟಲೆ ಪಾಳಿ ಹಚ್ಚಿ ನಿಲ್ಲಬೇಕು.’
– ಅಲವಪ್ಪ ಹೊಸಹಳ್ಳಿ, ನಿವಾಸಿ

‘ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ’
‘ಜಾನುವಾರುಗಳಿಗೆ ನೀರು ಸಿಗುತ್ತಿಲ್ಲ. ನೀರಿನ ಯೋಜನೆಗಳು ಹಳ್ಳ ಹಿಡಿದಿವೆ. ಒಂದು ಟಿ.ಸಿ ಕೂಡಿಸಿ ನೀ ಸರಬರಾಜು ಮಾಡಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳೂ ನಮ್ಮ ಹಳ್ಳಿಯತ್ತ ಮುಖ ಮಾಡಿಲ್ಲ. ಪಂಚಾಯಿತಿ ಇದ್ದೂ ಇಲ್ಲದಂತಿದೆ. ನಮಗೆ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ’.
– ದ್ಯಾಮಣ್ಣ ಯರಕಿಹಾಳ, ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT