ADVERTISEMENT

ಹಸಿರು ಇಲ್ಲದಿದ್ದರೆ ಉಸಿರೇ ಇಲ್ಲ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 9:55 IST
Last Updated 6 ಜುಲೈ 2012, 9:55 IST

ಸುರಪುರ: ಹಸಿರು ಮಾನವ ಜೀವನಕ್ಕೆ ಬಹಳ ಮುಖ್ಯ. ಜಗತ್ತೆಲ್ಲ ಹಸಿರು ಮಯವಾಗಿದ್ದರೆ ಸಧೃಢ ಆರೋಗ್ಯ ನಮ್ಮದಾಗುತ್ತದೆ. ಎಲ್ಲಿ ನೋಡಿದರಲ್ಲಿ ಗಿಡ ಮರಗಳ ಸಂಪತ್ತು ಅಧಿಕವಾಗಿರಬೇಕು. ನಮಗೆ ಆಮ್ಲಜನಕ ನೀಡುವ ವನ ಸಂಪತ್ತೆ ಇಲ್ಲದಿದ್ದರೆ ಜೀವನ ನಶ್ವರ. ಹಸಿರು ಇಲ್ಲದಿದ್ದರೆ ಉಸಿರೇ ನಿಂತು ಹೋಗುತ್ತದೆ ಎಂದು ಯಾದಗಿರಿ ಉಪವಿಭಾಗದ ಅರಣ್ಯಾಧಿಕಾರಿ ಕಲ್ಲಪ್ಪ ಸಿಂದಗಿ ಎಚ್ಚರಿಸಿದರು.


ಇಲ್ಲಿನ ಪ್ರಿಯದರ್ಶಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಅರಣ್ಯ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ `ಮಗುವಿಗೊಂದು ಮರ ಶಾಲೆಗೊಂದು ವನ~ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಸಿಗಳನ್ನು ವಿತರಿಸಿ ಮಾತನಾಡಿದರು.

ಪರಿಸರ ಸುಧಾರಿಸಿದರೆ ನಮ್ಮ ಜೀವನ ಮಟ್ಟವೂ ಸುಧಾರಿಸುತ್ತದೆ. ನಮ್ಮ ಸರ್ವಾಂಗೀಣ ಅಭಿವೃದ್ಧಿಯೂ ಆಗುತ್ತದೆ. ಶಿಕ್ಷಕರು ಮಕ್ಕಳಿಗೆ ಮರಗಳ ಅವಶ್ಯಕತೆ ಬಗ್ಗೆ ವಿವರಿಸಬೇಕು. ಚಿಕ್ಕಂದಿನಿಂದಲೆ ಅವರಿಗೆ ಸಸಿ ನೆಡುವುದು ಮತ್ತು ಸಂರಕ್ಷಣೆಯ ಬಗ್ಗೆ ಪ್ರೋತ್ಸಾಹ ನೀಡಬೇಕು. ಇದರಿಂದ ದೇಶ ಸಮೃದ್ಧವಾಗುತ್ತದೆ ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ತಾಲ್ಲೂಕು ಅರಣ್ಯಾಧಿಕಾರಿ ಬಿ. ಎಸ್. ಡಾಂಗೆ ಮಾತನಾಡಿ, ಅನಾವೃಷ್ಟಿಗೆ ಮರಗಳ ಹಾನಿಯೆ ಕಾರಣ. ವನ ಸಂಪತ್ತು ಅಧಿಕವಾಗಿದ್ದಲ್ಲಿ ಮಳೆ ಸಮೃದ್ಧವಾಗಿ ಬರುತ್ತದೆ. ಸರ್ಕಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಸಾಕಷ್ಟು ಹಣ ಒದಗಿಸುತ್ತಿದೆ. ಮಕ್ಕಳು ಸಸಿಗಳನ್ನು ತಮ್ಮ ಮನೆಯಲ್ಲಿ ನೆಟ್ಟು ಪೋಷಿಸಿರಿ ಎಂದು ಕರೆ ನೀಡಿದರು. ಇದಕ್ಕೂ ಮೊದಲು `ಶಾಲೆಗಾಗಿ ನಾವೂ ನೀವು~ ಕಾರ್ಯಕ್ರಮದಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಕ್ಕಳಿಂದ ಪ್ರಭಾತಪೇರಿ ನಡೆಸಲಾಯಿತು. 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ.

ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಇತರ ಘೋಷಣೆಗಳನ್ನು ಕೂಗಿ ಜನರಲ್ಲಿ ಜಾಗ್ರತೆ ಮೂಡಿಸಲಾಯಿತು.
ಮುಖ್ಯ ಗುರು ಪ್ರಕಾಶ ಬಾವೂರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಸಿದ್ರಾಮಪ್ಪ ಮಕ್ಕಳ ಪ್ರಾಥಮಿಕ ಶಿಕ್ಷಣದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.

ಶಿಕ್ಷಕರಾದ ನಾಗಮ್ಮ ಕಲ್ಮಠ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಆಂದೇಲಿ ಸ್ವಾಗತಿಸಿದರು. ಸಣ್ಣಸಾಹೇಬರೆಡ್ಡಿ ಇಟಗಿ ನಿರೂಪಿಸಿದರು. ಮೋತಿಲಾಲ ಚವ್ಹಾಣ ವಂದಿಸಿದರು. ಸಾಹೇಬಗೌಡ ದೀವಳಗುಡ್ಡ, ಅಶೋಕ ರಾಠೋಡ, ಸಾಹೇದಬೇಗಂ, ಮಕ್ಕಳು, ಪಾಲಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT