ADVERTISEMENT

ಹಾಡು ಹಗಲೇ ಕೊಲೆ ಪ್ರಕರಣ: ತನಿಖೆಗೆ ಕೋರ್ಟ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 9:00 IST
Last Updated 6 ಅಕ್ಟೋಬರ್ 2012, 9:00 IST

ಶಹಾಪುರ: ಯಾದಗಿರಿ ಗಂಜ ಏರಿಯಾದ ವರ್ಚನಹಳ್ಳಿ ಕ್ರಾಸ ಬಳಿ ಹಾಡು ಹಗಲೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನ ವಿಚಾರಣೆಯ ಸಮಯದಲ್ಲಿ ಪೊಲೀಸ್ ತನಿಖೆಯ ನಿರ್ಲಕ್ಷ್ಯದ ಬಗ್ಗೆ ಸೇಷನ್ಸ್ ಕೋರ್ಟ್ ತೀವ್ರ ಅಸಮಧಾನವನ್ನು ತೀರ್ಪಿನಲ್ಲಿ ಉಲ್ಲೇಖಿಸಿದೆ.

ತನಿಖೆಯಲ್ಲಿ ಆದ ಲೋಪದೋಷ ಹಾಗೂ ಕರ್ತವ್ಯ ನಿರ್ಲಕ್ಷ್ಯವನ್ನು ಬೆರಳು ಮಾಡಿ ತೋರಿಸಿ ಮುಂದಿನ ಪ್ರಕರಣಗಳಲ್ಲಿ ತನಿಖೆಯನ್ನು ಎಚ್ಚರವಹಿಸಬೇಕೆಂದು ತೀರ್ಪಿನಲ್ಲಿ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿ ಬೆಂಗಳೂರು ಪೊಲೀಸ ಮಹಾನಿರ್ದೇಶಕರಿಗೆ ಹಾಗೂ ಈಶಾನ್ಯವಲಯ ಮಹಾನಿರ್ದೇಶಕರಿಗೆ ಮತ್ತು ಜಿಲ್ಲಾ ಎಸ್ಪಿಯವರಿಗೆ ತೀರ್ಪಿನ ಪ್ರತಿಗಳನ್ನು ರವಾನಿಸಲಾಗಿದೆ.

ಹಿನ್ನೆಲೆ: ಯಾದಗಿರಿಯ ಚಿನ್ನಾಕಾರ ಗ್ರಾಮದ  ಮಹಿಬೂಬ ಹಜರೇಸಾಬ ದಫೇದಾರ ಎನ್ನುವರು 2011ಅಗಸ್ಟ್10 ಯಾದಗಿರಿ- ಹೈದರಬಾದ ರಾಜ್ಯ ಹೆದ್ದಾರಿಯ ಗಂಜ ಏರಿಯಾದಲ್ಲಿ  ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ತನ್ನ ಪತ್ನಿ ಅಲಿಮಾಬಿಯ ಶೀಲವನ್ನು ಶಂಕಿಸಿ ಅಟೋದಲ್ಲಿದ್ದ ಹರಿತವಾದ ಮಚ್ಚಿನಿಂದ ಹೆಂಡತಿಯನ್ನೇ ಅಟ್ಟಾಡಿಸಿ ಕೊಲೆ ಮಾಡಿದ್ದ. ಯಾದಗಿರಿ ಟೌನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಲಾಗಿತ್ತು. ನಂತರ ಕೋರ್ಟ್ ವಿಚಾರಣೆಯಲ್ಲಿ ಪೊಲೀಸ್ ತನಿಖೆಯ ವೈಫಲ್ಯ ಬಯಲಾಯಿತು.

ರಾಜ್ಯ ಹೆದ್ದಾರಿಯ ಮೇಲೆ ಹಾಡು ಹಗಲೆ ಮಧ್ಯಾಹ್ನ 1ಗಂಟೆಗೆ ನಡೆಯುತ್ತದೆ. ತನಿಖಾಧಿಕಾರಿಯಾದ ಸಿಪಿಐಯವರು ಮರು ದಿವಸ ತೆರಳಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಾರೆ. ನಂತರ ಎಫ್‌ಐಆರ್ ಕೋರ್ಟ್‌ಗೆ ಸಲ್ಲಿಸುವಾಗ ತುಂಬಾ ವಿಳಂಬವಾಗುತ್ತದೆ. ಕೊಲೆಗೀಡಾದ ಮಹಿಳೆಯ ಕಾಲುಂಗರ ಪಾದರಕ್ಷೆ ಭಾವಚಿತ್ರದಲ್ಲಿ ಇವೆ. ಪಂಚನಾಮೆ ಸಂದರ್ಭದಲ್ಲಿ ವಶಪಡಿಸಿಕೊಂಡಿರುವುದಿಲ್ಲ ಅವು ಎಲ್ಲಿ ಹೋದವು ? ಕೊಲೆಗೆ ಬಳಿಸಿದ ಅಸ್ತ್ರದ ಜೊತೆಯಲ್ಲಿ ಬಟ್ಟೆ, ಚೀಲವನ್ನು ಹಾಜರುಪಡಿಸಿರುವುದಿಲ್ಲ. ಪಟ್ಟಣದ ಜನತೆ ಆತಂಕದಲ್ಲಿರುವಾಗ ಕೇಂದ್ರ ಸ್ಥಳದಲ್ಲಿದ್ದರು ಕೂಡಾ  ಜಿಲ್ಲಾ ಎಸ್ಪಿಯವರು ಭೇಟಿ ಕೂಡಾ ನೀಡುವುದಿಲ್ಲವೆಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸ ಅಧಿಕ್ಷಕರು ಅಪರಾಧ ನಡೆದ ಸ್ಥಳದಲ್ಲಿ ಮುಖ್ಯವಾಗಿ ಭೇಟಿ ನೀಡಿ ಅಪರಾಧಗಳ ತನಿಖೆಗಳ ಮೇಲ್ವೀಚಾರಣೆಯಲ್ಲಿ ವಿಶೇಷ ಗಮನಹರಿಸಬೇಕೆಂದು ಅದರಲ್ಲಿ ದರೋಡೆ, ಹೆದ್ದಾರಿಗೆ ಸುಲಿಗೆ, ಕೊಲೆ, ಕೊಲೆ ಏನಿಸಿದ ಅಪರಾಧ ನರಹತ್ಯೆ, ಕೋಲಾಹಲಕಾರಿ ಮನೆ ಮುರಿದು ಮಾಡಿದ ಕಳ್ಳತನ, ಹೇಯ ಸ್ವರೂಪದ ಗೊಂದಲ, ದೊಂಬಿ, ಅಥವಾ ಸಾರ್ವಜನಿಕ ಸ್ಥಳದಲ್ಲಿನ ಜಗಳ, ಭಾವೋದ್ರೇಕ ಕಳ್ಳತನ, ಖೊಟ್ಟಿ ನಾಣ್ಯಗಳ ಮತ್ತು ಖೋಟಾ ನೋಟುಗಳ ಚಲಾವಣೆ ಅಪರಾಧಗಳು ನಡೆದಾಗ ಪೊಲೀಸ್ ಉನ್ನಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕೆಂಬ ಕರ್ನಾಟಕ ಪೊಲೀಸ್ ಮ್ಯಾನವಲ್‌ನಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ತೀರ್ಪಿನಲ್ಲಿ ನಮೂದಿಸಲಾಗಿದೆ.

ಜಿಲ್ಲಾ ಎಸ್ಪಿಯವರು ಕೇಂದ್ರ ಸ್ಥಾನದಲ್ಲಿದ್ದರು ಕೂಡಾ ಭೇಟಿ ನೀಡದೆ ಇರುವುದು ತನಿಖೆಯಲ್ಲಿ ನಿರ್ಲ್ಷ್ಯತನ ಕಾಣುತ್ತದೆ ಎಂದು ಹೇಳಲಾಗಿದೆ.

ತನಿಖೆಯ ವೈಫಲ್ಯವನ್ನು ಆರೋಪಿ ಪರ ವಕೀಲರು ಸಾದರಪಡಿಸಿದಾಗ ಜಿಲ್ಲಾ ಸೇಷನ್ಸ್ ಕೋರ್ಟ್‌ನ ನ್ಯಾಯಾಧೀಶರಾದ ಹಂಚಾಟೆ ಸಂಜೀವಕುಮಾರ ಕೋರ್ಟ್‌ನ ಮುಂದೆ ಖುದ್ದು ಹಾಜರಾಗುವಂತೆ ನಿರ್ದೇಶನ ನೀಡಿದಾಗ ಹೈಕೋರ್ಟ್‌ನಿಂದ ತಡೆಯಾಜ್ಞೆಯನ್ನು ಎಸ್ಪಿಯವರು ಪಡೆದುಕೊಳ್ಳುತ್ತಾರೆ. ಕೋರ್ಟ್ ಅಸಮಧಾನ ವ್ಯಕ್ತಪಡಿಸುತ್ತದೆ.

ಲೋಪದೋಷ ತನಿಖೆ ಇದ್ದರು ಕೂಡಾ ಹಾಡು ಹಗಲೇ ಕೊಲೆ ನಡೆಸಿದ ಆರೋಪಿಯನ್ನು ಬಿಡುಗಡೆಗೊಳಿಸಿದರೆ ದುಷ್ಟಶಕ್ತಿಗಳಿಗೆ ಬಲ ಬಂದಂತೆ ಆಗುತ್ತದೆ. ಯಾವುದೇ ಕಾರಣಕ್ಕೂ ಆರೋಪಿಯನ್ನು ಬಂಧಮುಕ್ತಗೊಳಿಸಲು ಸಾಧ್ಯವಿಲ್ಲ. ಅವರಿಗೆ ಜೀವಾವಧಿ ಶಿಕ್ಷೆಯನ್ನು ಕೋರ್ಟ್ ಪ್ರಕಟಿಸಿದೆ ಎಂದು ತೀರ್ಪಿನಲ್ಲಿ ತಿಳಿಸಿದೆ.ಇಂತಹ ಪರಿವೀಕ್ಷಣೆಯನ್ನು ಕೋರ್ಟ್ ವ್ಯಕ್ತಪಡಿಸಿದೆ ಮುಂದೆ ತನಿಖೆಯಲ್ಲಿ ಲೋಪವಾಗದಂತೆ ಎಚ್ಚರವಹಿಸುವುದು ಅಗತ್ಯವಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.