ಯಾದಗಿರಿ: ‘ಮೊದಲ ಬಿಸಿಲಿನ ನಾಡ ನಮ್ಮದು. ಇಲ್ಲೇ ಬರಬೇಕಾದಾಗ ಮಳಿ ಬರೂದುಲ್ಲ. ಬ್ಯಾಡ ಅಂದಾಗ ಬರತೈತಿ. ಮುಂಗಾರ್‍ಯಾಗ ಮಳೆ ಕೈಕೊಟ್ಟಿತು. ಈಗ ಜ್ವಾಳಾ, ಹತ್ತಿ ಕೈಗೆ ಬರೋ ಟೈಮ್‌ದಾಗ ಮಳಿ ಬಂದೈತಿ. ಆಗ ಮಳಿ ಬರದ ಹಾಳಾದ್ವಿ. ಈಗ ಮಳಿ ಬಂದ ಹಾಳಾಗೇವಿ. ಬೆಳದ ಕಾಳಿಗೂ ಧಾರಣಿ ಇಲ್ದಂಗ ಆಗೇತಿ. ಮಳಿಲಿಂದ ರೈತರ ಜೀವನಾನ ಹಾಳಾತ್ರಿ. ಏನ್ ಮಾಡೋದು ಅಂತ ತಿಳಿವಾಲ್ತ ನೋಡ್ರಿ’
ಭಾನುವಾರ ಯಾದಗಿರಿ ತಾಲ್ಲೂಕಿನ ಪರಮೇಶಪಲ್ಲಿ, ಮಸ್ಲೇಪಲ್ಲಿ, ಮಿನಾಸ್ಪುರ, ನಜರಾಪುರ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಪ್ರಸನ್ನ ಸಾಲಿಯನ್, ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆ ನಿರ್ದೇಶಕ ಕಾಲಸಿಂಗ್ ಅವರನ್ನು ಒಳಗೊಂಡ ತಂಡದ ಎದುರು ರೈತರು ತೋಡಿಕೊಂಡ ಗೋಳಿನ ಪರಿ ಇದು.
‘ಹೊಲದಾಗ ಬೆಳಿ ಛೋಲೋ ಐತಿ ಅಂತ ಖುಷಿ ಆಗಿತ್ತು. ಆದ್ರ ಮಳಿ ಬಂದ, ಎಲ್ಲಾ ಹಾಳ ಮಾಡಿತು. ಇನ್ನ ಬ್ಯಾಸಿಗಿ ಚಾಲೂ. ಬಿತ್ತಂಗಿಲ್ಲ, ಬಿಡಂಗಿಲ್ಲ. ಮುಂದಿನ ಜೀವನಕ್ಕ ಏನ್ ಮಾಡೋದು ಅಂತ ತಿಳಿದ್ಹಂಗ ಆಗೇತಿ. ನೀವ ಏನಾದ್ರು, ಪರಿಹಾರ ಕೊಡಸ್ರಿ’ ಎಂದು ಮನವಿ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಒಂದೆಡೆ ಮಳೆಯಿಂದ ಆಗಿರುವ ಹಾನಿಯ ಬಗ್ಗೆ ಅಳಲು ತೋಡಿಕೊಂಡರೆ, ಇನ್ನೊಂದೆಡೆ ವಿತರಿಸುವ ಪರಿಹಾರದಲ್ಲೂ ಹಣ ಕೇಳಲಾಗುತ್ತಿದೆ ಎನ್ನುವ ಆರೋಪಗಳು ಗ್ರಾಮಸ್ಥರಿಂದ ಕೇಳಿ ಬಂದವು. ಕುಡಿಯುವ ನೀರು ಕೊಡಿ ಎಂದು ಕೆಲವರು ಕೇಳಿದರೆ, ಇನ್ನು ಕೆಲವರು ಪರಿಹಾರದ ಹಣವನ್ನು ನೇರವಾಗಿ ಕೊಟ್ಟರೆ ಒಳ್ಳೆಯದು ಎನ್ನುವ ಬೇಡಿಕೆ ಮುಂದಿಟ್ಟರು.
ಹಾನಿಗೆ ಒಳಗಾದ ಮನೆಗಳಿಗೆ ನೀಡುವ ಪರಿಹಾರ ಮೊತ್ತದಲ್ಲಿ ₨600 ತೆಗೆದುಕೊಂಡು ವಿತರಿಸಲಾಗಿದೆ ಎಂದು ಮಸಲೇಪಲ್ಲಿ ಗ್ರಾಮದ ನಬೂಮಾ ಎಂಬ ಮಹಿಳೆ ಜಿಲ್ಲಾಧಿಕಾರಿಗಳ ಎದುರೇ ದೂರಿದರು. ಈ ಕುರಿತು ಪರಿಶೀಲಿಸಿ, ತಕ್ಷಣ ಸರಿಪಡಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಸೂಚಿಸಿದರು.
ಪರಿಹಾರ ಸಾಲುದುಲ್ರಿ: ‘ಮಳಿಗೆ ಮನಿ ಬಿದೈತಿ. ಅದನ್ನ ರಿಪೇರಿ ಮಾಡಿಸಲಾಕ್ 20ಸಾವಿರ ಖರ್ಚು ಆಗ್ಲಾಕತೈತಿ. ಸರ್ಕಾರದಿಂದ ಬರೇ ₨2 ಸಾವಿರ ಕೊಡ್ತಾರ. ಅದು ಅಕೌಂಟ್ ಪೇ ಚೆಕ್ ಕೊಟ್ಟಾರರಿ. ಅಕೌಂಟ್ ತೆಗಿಸಲಾಕ್ ₨1ಸಾವಿರ ಖರ್ಚು ಬರೈತರಿ.
ಇನ್ನ ಉಳ್ಯಾದ ಒಂದ ಸಾವಿರ. ಅಷ್ಟರಾಗ ಏನ್ ಮಾಡ್ಲಾಕ ಆಗತೈತಿ ನೀವ ಹೇಳ್ರಿ. ಅದನ್ನು ಕೊಡ್ದ ಇದ್ರ ಭಾಳ ಛೋಲೋ ನೋಡ್ರಿ’ ಎಂದು ಮುಸ್ಲೇಪಲ್ಲಿ ಗ್ರಾಮದ ನಿವಾಸಿ ಬಸವರಾಜ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಮಾಹಿತಿ ಕೇಳಿದ ಕೇಂದ್ರ ತಂಡದ ಸದಸ್ಯರಿಗೆ ಉತ್ತರಿಸಿದ ಸಹಾಯಕ ಆಯುಕ್ತ ಬಿ.ಪಿ. ವಿಜಯ, ಭಾಗಶಃ ಹಾನಿಗೆ ಒಳಗಾದ ಮನೆಗಳಿಗೆ ₨ 2–3ಸಾವಿರ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಬೆಳೆ ಹಾನಿ ಸಮೀಕ್ಷೆ ನಡೆಸಿದ ತಂಡ, ರಸ್ತೆ ಬದಿಯ ತೋಟದಲ್ಲಿ ಹಾನಿಗೀಡಾದ ಟೊಮ್ಯಾಟೋ, ಈರುಳ್ಳಿ, ಜೋಳದ ಬೆಳೆಯನ್ನು ಪರಿಶೀಲಿಸಿತು. ಈ ಸಂದರ್ಭದಲ್ಲಿ ಹಾಜರಿದ್ದ ರೈತರು, ಶೇ 70 ರಷ್ಟು ಬೆಳೆ ಹಾನಿಯಾಗಿದ್ದು, ಎಕರೆಗೆ ₨ 1.75ಲಕ್ಷ ಹಾನಿ ಆಗಿದೆ ಎಂದು ತಿಳಿಸಿದರು.
‘ನಮ್ಮೂರಾಗಿನ ನೀರ ಕುಡದ್ರ ವಿಷ ಕುಡಿದ್ಹಂಗ ಆಗ್ಲಾಕತ್ತೈತಿ. ಯಾರೂ ನಮ್ಮೂರಿಗೆ ಬಂದಿಲ್ಲ. 2–3 ದಿನಕೊಮ್ಮೆ ಕರೆಂಟ್ ಬರತದ. ಕುಡ್ಯೋ ನೀರ ಅರೇ ಛೋಲೋದ ಕೋಡ್ರಿ’ ಎಂದು ಪರಮೇಶಪಲ್ಲಿ ಗ್ರಾಮದ ಬಾಬು ಕೊಂಡಾಸ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಸ್ಥಳದಲ್ಲಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಜೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ, 3 ದಿನದಲ್ಲಿ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ.ಜಿಲಾನಿ, ತಹಶೀಲ್ದಾರ ಶಿವಶರಣಪ್ಪ ಕಟೋಳಿ, ಗುರು ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಾಲರಾಜ ರಂಗರಾವ್, ಜೆಸ್ಕಾಂ ಅಧಿಕಾರಿ ರಾಘವೇಂದ್ರ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.