ADVERTISEMENT

19 ಹಳ್ಳಿಗಳಲ್ಲಿ ಆರ್ಸೆನಿಕ್‌ಯುಕ್ತ ನೀರು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 5:10 IST
Last Updated 12 ಆಗಸ್ಟ್ 2012, 5:10 IST

ಯಾದಗಿರಿ: ಜಿಲ್ಲೆಯಲ್ಲಿ ಎರಡು ನದಿಗಳು ಹರಿಯುತ್ತಿದ್ದರೂ, ಜನರು ಕುಡಿಯುವ ನೀರಿಗಾಗಿ ಪರದಾಡುವುದು ಮಾತ್ರ ತಪ್ಪಿಲ್ಲ. ಇರುವ ಕೊಳವೆಬಾವಿ, ತೆರೆದ ಬಾವಿಗಳಿಂದ ನೀರನ್ನು ತಂದು ಜೀವನ ಸಾಗಿಸುತ್ತಿರುವ ಜನರಿಗೆ, ಅದು ಎಷ್ಟರ ಮಟ್ಟಿಗೆ ಕುಡಿಯಲು ಯೋಗ್ಯವಾಗಿದೆ ಎಂಬುದೂ ತಿಳಿದಿಲ್ಲ. ಜಿಲ್ಲೆಯ ಸುಮಾರು 400 ಜಲಮೂಲಗಳಲ್ಲಿ ವಿವಿಧ ರಾಸಾಯನಿಕಗಳು ಇರುವುದು ಪತ್ತೆಯಾಗಿದ್ದು, ಜನರು ಅನಿವಾರ್ಯವಾಗಿ ಇಂತಹ ನೀರನ್ನೇ ಸೇವಿಸಬೇಕಾಗಿದೆ.

ಪಂಚಾಯತ್‌ರಾಜ್ ಎಂಜಿನಿಯರಿಂಗ್‌ನಿಂದ ಪ್ರತಿಬಾರಿ ನಡೆಸುವ ಜಲಮೂಲಗಳ ಮಾದರಿ ಪರೀಕ್ಷೆಯಿಂದ ವಿವಿಧ ರಾಸಾಯನಿಕಗಳು ಇರುವುದು ಪತ್ತೆಯಾಗಿದೆ. ಕಳೆದ ವರ್ಷ ವಿಜಾಪುರದ ಏಪ್ಸ್ ಸಂಸ್ಥೆ ವತಿಯಿಂದ ಜಿಲ್ಲೆಯ 2718 ಜಲಮೂಲಗಳ ಮಾದರಿಯನ್ನು ಪರೀಕ್ಷಿಸುವ ಮೂಲಕ ನೀರಿನ ಸುರಕ್ಷತೆ ಅಧ್ಯಯನ ನಡೆಸಿತ್ತು. ಆ ಸಂದರ್ಭದಲ್ಲಿ ಸುಮಾರು 383 ಜಲಮೂಲಗಳು ರಾಸಾಯನಿಕ ಪದಾರ್ಥಗಳನ್ನು ಹೊಂದಿರುವ ಅಂಶ ಬೆಳಕಿಗೆ ಬಂದಿತ್ತು

ಈ ಬಾರಿ ನಡೆಸಿದ ಅಧ್ಯಯನದಲ್ಲೂ ರಾಸಾಯನಿಕ ಅಂಶವನ್ನು ಹೊಂದಿರುವ ಜಲಮೂಲಗಳ ಸಂಖ್ಯೆ ಹೆಚ್ಚಾಗಿದೆ. ಹಾನಿಕಾರಕ ಆರ್ಸೆನಿಕ್ ಅಂಶವಿರುವ ನೀರು 19 ಗ್ರಾಮಗಳಲ್ಲಿ ಇರುವುದು ಪತ್ತೆಯಾಗಿದೆ. 300 ರಲ್ಲಿ ನೈಟ್ರೇಟ್, 18 ರಲ್ಲಿ ಫ್ಲೋರೈಡ್ ಅಂಶವಿದೆ ಎಂಬ ಮಾಹಿತಿ ಅಧ್ಯಯನದಿಂದ ಸ್ಪಷ್ಟವಾಗಿದೆ.

ಆರ್ಸೆನಿಕ್ ಪೀಡಿತ ಸುರಪುರ: ಆರ್ಸೆನಿಕ್‌ಯುಕ್ತ ನೀರನ್ನು ಹೊಂದಿರುವ ಗ್ರಾಮಗಳ ಪಟ್ಟಿಯಲ್ಲಿ ಸುರಪುರ ತಾಲ್ಲೂಕಿಗೆ ಅಗ್ರಸ್ಥಾನವಿದೆ. 19 ಗ್ರಾಮಗಳ ನೀರಿನಲ್ಲಿ ಆರ್ಸೆನಿಕ್ ಅಂಶ ಇರುವುದು ಪತ್ತೆಯಾಗಿದ್ದು, ಮಾಲಗತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5 ಹಳ್ಳಿಗಳಲ್ಲಿ ಅರ್ಸೇನಿಕ್ ಅಂಶವಿದೆ. ಚಿಗರಿಹಾಳ, ಗೊಡ್ಗಿಹಾಳ, ಹೆಗ್ಗಣದೊಡ್ಡಿ, ಮಾವಿನಮಟ್ಟಿ, ಜೈನಾಪುರ ಗ್ರಾಮಗಳು ಅರ್ಸೇನಿಕ್‌ಯುಕ್ತ ನೀರು ಹೊಂದಿವೆ.

ಸುರಪುರ ತಾಲ್ಲೂಕಿನ ಮರನಾಳ, ಗೌಡಗೇರಾ, ಮಂಗೀಹಾಳ, ನಾಗರಾಳ, ಕಿರದಳ್ಳಿ, ಪರಸನಳ್ಳಿ, ಅರಕೇರಾ ಕೆ, ಬಿಜಾಸ್ಪುರ, ರಾಮಪುರ, ಕೆ. ತಳ್ಳಳ್ಳಿ, ಹಳೆ ಅಮ್ಮಾಪುರ, ಮಂಗಳೂರು, ಗುಡಿಹಾಳ ಜೆ, ಗ್ರಾಮಗಳ ನೀರಿನಲ್ಲಿಯೂ ಅರ್ಸೇನಿಕ್ ಅಂಶ ಇದೆ ಎಂಬ ಮಾಹಿತಿಯನ್ನು ಪಂಚಾಯತ್ ರಾಜ್ ಎಂಜಿನಿಯರಿಂಗ್‌ನ ಅಧಿಕಾರಿಗಳು ನೀಡಿದ್ದಾರೆ.

ಈಗಾಗಲೇ ಸುರಪುರ ತಾಲ್ಲೂಕಿನ ಕಿರದಳ್ಳಿ ತಾಂಡಾ ಹಾಗೂ ಜೈನಾಪುರ ಗ್ರಾಮಗಳ ನೀರಿನಲ್ಲಿ ಆರ್ಸೆನಿಕ್ ಪ್ರಮಾಣ ಹೆಚ್ಚಾಗಿ ಇರುವುದು ಸಾಬೀತಾಗಿದೆ.

ರೋಗಗಳಿಗೆ ಆಹ್ವಾನ: ಅರ್ಸೆನಿಕ್ ಹಾಗೂ ಫ್ಲೋರೈಡ್ ಅಂಶ ಹೊಂದಿದ ನೀರು ಸೇವನೆಯಿಂದ ಹಲವಾರು ರೋಗಗಳು ಬರುತ್ತಿರುವುದು ಈಗಾಗಲೇ ಅಧ್ಯಯನದಿಂದ ತಿಳಿದಿದೆ. ಫ್ಲೋರೈಡ್ ನೀರಿನಿಂದ ಜನರ ಎಲುಬು, ಹಲ್ಲುಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇನ್ನೊಂದೆಡೆ ಆರ್ಸೆನಿಕ್‌ಯುಕ್ತ ನೀರಿನಿಂದ ಚರ್ಮದ ಕ್ಯಾನ್ಸರ್‌ನಂತಹ ಭೀಕರ ಕಾಯಿಲೆ ಆವರಿಸುತ್ತಿದೆ.

ಕಿರದಳ್ಳಿ ತಾಂಡಾದ ನೀರಿನಲ್ಲಿ ಇರುವ ಆರ್ಸೆನಿಕ್‌ನಿಂದಾಗಿ ಅಲ್ಲಿನ ಜನರಿಗೆ ಚರ್ಮದ ಕ್ಯಾನ್ಸರ್ ತಗುಲಿದೆ. ಈ ವಿಷಯ ಸರ್ಕಾರದ ಗಮನಕ್ಕೂ ಬಂದಿದ್ದು, ಸಚಿವ ರೇವು ನಾಯಕ ಬೆಳಮಗಿ ಕೂಡ ತಾಂಡಾಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲಮಪ್ರಭು ಪಾಟೀಲರು ವಿಧಾನಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ಸರ್ಕಾರ ನೀಡಿರುವ ಉತ್ತರ ದಾಖಲೆಗಷ್ಟೇ ಸೀಮಿತವಾಗಿದೆ ಎನ್ನುವುದು ಬಿಎಸ್ಸಾರ್ ಕಾಂಗ್ರೆಸ್ ಮುಖಂಡ ಶಂಕ್ರಣ್ಣ ವಣಿಕ್ಯಾಳರ ಆಕ್ರೋಶ. 

ಅಲ್ಲಿನ ಜನರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ತಾಂಡಾದ ಜನರಿಗೆ ಯಾವುದೇ ಚಿಕಿತ್ಸೆಯಾಗಲಿ, ಔಷಧಿಯಾಗಲಿ ಸಿಗುತ್ತಲೇ ಇಲ್ಲ. ಈಗಾಗಲೇ ಚರ್ಮದ ಕ್ಯಾನ್ಸರ್‌ನಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ. ಆದರೂ ಸರ್ಕಾರ ಮಾತ್ರ ತಾಂಡಾದ ಸಮಸ್ಯೆಯ ಬಗ್ಗೆ ಗಮನ ನೀಡುತ್ತಿಲ್ಲ ಎಂದು ದೂರುತ್ತಾರೆ.

ಕಿರದಳ್ಳಿ ತಾಂಡಾಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಸಮೀಪದ ಜೈನಾಪುರದಲ್ಲಿ ಕೊರೆಸಲಾಗಿದ್ದ ಕೊಳವೆ ಬಾವಿಯ ನೀರಿನಲ್ಲಿಯೂ ಆರ್ಸೆನಿಕ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇದೆ. ಹೀಗಾಗಿ ಕಿರದಳ್ಳಿ ತಾಂಡಾದ ಜನರಿಗೆ ಆರ್ಸೆನಿಕ್‌ಯುಕ್ತ ನೀರನ್ನೇ ಕುಡಿಯುವುದು ಅನಿವಾರ್ಯವಾಗಿದೆ.

ಕೆಟ್ಟು ನಿಂತ ಘಟಕಗಳು: ಯಾದಗಿರಿ ತಾಲ್ಲೂಕಿನ ಆಶನಾಳ ಗ್ರಾಮದಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಾಗಿದ್ದರಿಂದ 2002ರಲ್ಲಿ ಡಿ-ಫ್ಲೋರೈಡ್ ಘಟಕವನ್ನು ಸ್ಥಾಪಿಸಲಾಗಿತ್ತು.

ಆದರೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿ ಒಂದು ವರ್ಷದಲ್ಲಿಯೇ ಈ ಘಟಕದ ಸ್ಥಗಿತಗೊಂಡಿತು ಎನ್ನುತ್ತಾರೆ ಆಶನಾಳ ಗ್ರಾಮಸ್ಥರು.

ಈಗಲೂ ಆಶನಾಳದ ಜನರು ಫ್ಲೋರೈಡ್‌ಯುಕ್ತ ನೀರನ್ನೇ ಸೇವನೆ ಮಾಡುವುದು ಅನಿವಾರ್ಯವಾಗಿದೆ. ಇನ್ನೊಂದೆಡೆ ಇದೀಗ ಆರ್ಸೆನಿಕ್‌ಯುಕ್ತ ಕಿರದಳ್ಳಿ ಸೇರಿದಂತೆ ಮೂರ‌್ನಾಲ್ಕು ಗ್ರಾಮಗಳಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಲಾಗಿದ್ದು, ಅವುಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದೆ. ಈ ಸಂಸ್ಥೆಗಳು 20 ಲೀಟರ್‌ಗೆ ರೂ.4 ಆಕರಣೆ ಮಾಡುತ್ತಿವೆ. ಮೊದಲೇ ಬಡತನ, ಬರದಿಂದ ತತ್ತರಿಸುವ ಜನರು ಮನೆಯ ಅವಶ್ಯಕತೆಗೆ ಬೇಕಾದಷ್ಟು ನೀರನ್ನು ಹಣಕೊಟ್ಟು ಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ನೀರು ಶುದ್ಧೀಕರಣ ಘಟಕದ ನೀರು ಕೇವಲ ಹಣವಂತರ ಪಾಲಾಗುತ್ತಿದೆ. ಬಡಜನರು ಅದೇ ವಿಷಪೂರಿತ ನೀರನ್ನೇ ಸೇವಿಸುತ್ತಿದ್ದಾರೆ ಎಂದು ಕೆಂಭಾವಿಯ ರಂಗಪ್ಪ ದೂರುತ್ತಾರೆ.

10 ಕೋಟಿ ಬಿಡುಗಡೆ: ಜಿಲ್ಲೆಯ 19 ಗ್ರಾಮಗಳಲ್ಲಿ ಆರ್ಸೆನಿಕ್ ಮುಕ್ತ ನೀರು ಒದಗಿಸುವ ಉದ್ದೇಶದಿಂದ ರೂ.24 ಕೋಟಿ ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅದರಲ್ಲಿ ರೂ.10 ಕೋಟಿ ಅನುದಾನ ಯಾದಗಿರಿ ಜಿಲ್ಲಾ ಪಂಚಾಯಿತಿಗೆ ಬಿಡುಗಡೆಯೂ ಆಗಿದೆ. ಆದರೆ ಯೋಜನೆಗೆ ಮಾತ್ರ ಸರ್ಕಾರದಿಂದ ಈವರೆಗೂ ಆಡಳಿತಾತ್ಮಕ ಮಂಜೂರಾತಿ ದೊರೆತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಆರ್ಸೆನಿಕ್ ಹೊಂದಿದ ನೀರು ಬಳಸುತ್ತಿರುವ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ದೊರೆತ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.