ADVERTISEMENT

371ನೇ ಕಲಂ ಕಾಂಗ್ರೆಸ್ ಕೊಡುಗೆ: ಖರ್ಗೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 10:48 IST
Last Updated 24 ಏಪ್ರಿಲ್ 2013, 10:48 IST

ಸುರಪುರ: ಹೈದರಾಬಾದ್ ಕರ್ನಾಟಕದ ಬಹುದಿನದ ಕನಸಾಗಿದ್ದ ಸಂವಿಧಾನದ 371ನೇ ಕಲಂ ಜಾರಿಗೆ ತಂದಿರುವುದು ಕಾಂಗ್ರೆಸ್ ಕೊಡುಗೆ. ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆ ಅವಶ್ಯವಾಗಿದೆ. ಹೈಕ ಪ್ರದೇಶದಲ್ಲಿ ಹೆಚ್ಚು ಜನ ಕಾಂಗ್ರೆಸ್ ಶಾಸಕರಿರುವುದು ಅನಿವಾರ್ಯ. ಇದರಿಂದ ಈ ಭಾಗ ಅಭೂತಪೂರ್ವವಾಗಿ ಅಭಿವೃದ್ಧಿಯಾಗುತ್ತದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಐದು ದಶಕಗಳಲ್ಲಿ ಏನು ಕೆಲಸ ಮಾಡಿದೆ ಎಂದು ಹೇಳುವ ವಿರೋಧ ಪಕ್ಷದವರಿಗೆ ಮೊದಲು ತಾವು ಏನು ಮಾಡಿದ್ದೇವೆ ಎಂದು ನೋಡಿಕೊಳ್ಳಲಿ. ಕಾಂಗ್ರೆಸ್ ಸಾಧನೆಗಳನ್ನು ವಿವರಿಸಲು ಒಂದು ದಿನ ಸಾಕಾಗುವುದಿಲ್ಲ. ಕೇವಲ ಕುರ್ಚಿಗಾಗಿ ಕಾಲಹರಣ ಮಾಡಿದ ಬಿಜೆಪಿ ಸರ್ಕಾರ, ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಹೆಸರು ಬದಲಿಸಿ ತಮ್ಮದೆಂದು ಬಿಂಬಿಸುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.

ಆಲಮಟ್ಟಿ, ನಾರಾಯಣಪುರ ಜಲಾಶಯ ನಿರ್ಮಾಣ, ಉದ್ಯೋಗ ಖಾತರಿ, ಮಾಶಾಸನಗಳು ಎಲ್ಲವೂ ಕಾಂಗ್ರೆಸ್ ಸಾಧನೆಗಳೆ. ಕಾಲುವೆಗೆ ನೀರು ಬಿಡಿಸದೆ ರೈತರನ್ನು ನಷ್ಟಕ್ಕೀಡು ಮಾಡಿದ್ದು ವಿರೋಧಿಗಳ ಸಾಧನೆ.
ನಮ್ಮ ಸರ್ಕಾರವಿದ್ದಾಗ ಕೋಯ್ನಾದಿಂದ ಕಾಲುವೆಗೆ ನೀರು ಬಿಡಿಸಿ ರೈತರ ಬೆಳೆ ಕಾಪಾಡಿದ್ದೆವು. ಪಕ್ಷಾಂತರವನ್ನೆ ಚಾಳಿ ಮಾಡಿಕೊಂಡಿರುವವರು ಅಭಿವೃದ್ಧಿ ಮಾಡುವುದಿಲ್ಲ. ದುಡ್ಡಿಗಾಗಿ ಪಕ್ಷ ಹುಡುಕಾಡುತ್ತಾರೆ. ಇಂತಹವರನ್ನು ನಂಬಬೇಡಿ ಎಂದು ಕಿವಿ ಮಾತು ಹೇಳಿದರು.

ಜೆಡಿಎಸ್ ಕೇವಲ ಮಂಡ್ಯ, ಮೈಸೂರ, ಹಾಸನದಲ್ಲಿ ಮಾತ್ರ ಪ್ರಬಲವಾಗಿದೆ. ಬಿಜೆಪಿ ಧೂಳೀಪಟವಾಗಲಿದೆ. ಕೆಜೆಪಿ, ಬಿಎಸ್‌ಆರ್ ಇನ್ನು ನೆಲೆ ಕಂಡುಕೊಂಡಿಲ್ಲ. ಇದರಿಂದ ಕಾಂಗ್ರೆಸ್‌ಗೆ ಉತ್ತಮ ಅಲೆ ಇದೆ. ಪ್ರಾಮಾಣಿಕ ರಾಜಕಾರಣಿಯಾಗಿರುವ ಮತ್ತು ಪಕ್ಷದ ನಿಷ್ಟೆ ಹೊಂದಿರುವ ರಾಜಾ ವೆಂಕಟಪ್ಪನಾಯಕ್ ಅವರಿಗೆ ಆಶೀರ್ವದಿಸಿ ಕಾಂಗ್ರೆಸ್ ಬಲ ಪಡಿಸಿ ಎಂದು ವಿನಂತಿಸಿದರು.

ಸಂಸದ ಎನ್. ಧರ್ಮಸಿಂಗ್ ಮಾತನಾಡಿ, ನಾನು ಮತ್ತು ಖರ್ಗೆ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ತಂದು ರಾಜ್ಯದ ಅಭಿವೃದ್ಧಿಗೆ ನಾಂದಿ ಹಾಡಿದ್ದೇವೆ. ರಾಜಾ ವೆಂಕಟಪ್ಪನಾಯಕ್ ಅವರನ್ನು ಆರಿಸಿ ತನ್ನಿ. ಸುರಪುರ ಕ್ಷೇತ್ರವನ್ನು ಮಾದರಿ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕ್ ಮಾತನಾಡಿ, ಖರ್ಗೆ ನಮ್ಮ ನಾಯಕರು. ಅವರ ಆಶೀರ್ವಾದ ಬಲದಿಂದ ಸ್ಪರ್ಧಿಸುತ್ತಿದ್ದೇನೆ. ಖರ್ಗೆ, ಧರ್ಮಸಿಂಗ್ ಅಂತಹ ಮಹಾನ್ ನಾಯಕರು ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಶ್ರೀರಕ್ಷೆ ನಮಗಿದೆ. ಕಾಂಗ್ರೆಸ್ ಗೆಲ್ಲಿಸಿ. ನನಗೆ ನಿಮ್ಮ ಸೇವೆ ಸಲ್ಲಿಸುವ ಸದಾವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.ಅಲ್ಲಂಪ್ರಭು ಪಾಟೀಲ, ಶಿವಣ್ಣ ಮಂಗಿಹಾಳ, ರಾಜಶೇಖರಗೌಡ ಪಾಟೀಲ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಾಜಿ ಸಂಸದ ರಾಜಾ ರಂಗಪ್ಪನಾಯಕ್ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು.
ಆನಂದ ಭಾಸ್ಕರ್, ಮರಿಗೌಡ ಹುಲಕಲ್, ಸೂಲಪ್ಪ ಕಮತಗಿ, ಬಸನಗೌಡ ಯಡಿಯಾಪುರ, ನಿಂಗಣ್ಣ ಚಿಂಚೋಡಿ, ವಿಠಲ ಯಾದವ್, ಪ್ರಭುಗೌಡ ಪಾಟೀಲ ರಾಜನಕೋಳೂರು, ಮಲ್ಲಯ್ಯ ಕಮತಗಿ, ತಿಪ್ಪರಾಜಗೌಡ ಬಾಚಿಮಟ್ಟಿ, ನಿಂಗಯ್ಯ ಬೂದಗುಂಪಿ, ಸೋಮನಾಥ ಡೊಣ್ಣಿಗೇರಿ, ಗುಂಡಪ್ಪ ಸೋಲಾಪುರ, ಅಹ್ಮದ ಪಠಾಣ, ಭಾಗಪ್ಪ ಬಿಲ್ಲವ, ರಾಜಾ ಪಿಡ್ಡನಾಯಕ್, ಮನೋಹರ ಕುಂಟೋಜಿ, ದೇವಿಂದ್ರಪ್ಪ ಕಳ್ಳಿಮನಿ, ಗುರುನಾಥರೆಡ್ಡಿ ಹೆಬ್ಬಾಳ, ನಾಸೀರ ಕುಂಡಾಲೆ, ಅಬ್ದುಲ ಗಫಾರ್ ನಗನೂರಿ, ಪರ್ವತರೆಡ್ಡಿ ಹೆಬ್ಬಾಳ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT