ADVERTISEMENT

ನೇತಾಜಿ ಯುವಕರಿಗೆ ಪ್ರೇರಕ ಶಕ್ತಿ: ಮುದ್ನಾಳ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 7:30 IST
Last Updated 24 ಜನವರಿ 2018, 7:30 IST
ಯಾದಗಿರಿಯ ಸುಭಾಷಚಂದ್ರ ಬೋಸ್ ವೃತ್ತದಲ್ಲಿ ವಿವಿಧ ಸಂಘಟನೆ, ಬಿಜೆಪಿಯಿಂದ ಮಂಗಳವಾರ ನೇತಾಜಿಯವರ ಜಯಂತಿ ಆಚರಿಸಲಾಯಿತು.(ಎಡಚಿತ್ರ) ಕೂಡ್ಲೂರ ಗ್ರಾಮದಲ್ಲಿ ನೇತಾಜಿ ಸುಭಾಷಚಂದ್ರ ಬೋಸ್‌ ಜಯಂತಿ ಆಚರಿಸಲಾಯಿತು
ಯಾದಗಿರಿಯ ಸುಭಾಷಚಂದ್ರ ಬೋಸ್ ವೃತ್ತದಲ್ಲಿ ವಿವಿಧ ಸಂಘಟನೆ, ಬಿಜೆಪಿಯಿಂದ ಮಂಗಳವಾರ ನೇತಾಜಿಯವರ ಜಯಂತಿ ಆಚರಿಸಲಾಯಿತು.(ಎಡಚಿತ್ರ) ಕೂಡ್ಲೂರ ಗ್ರಾಮದಲ್ಲಿ ನೇತಾಜಿ ಸುಭಾಷಚಂದ್ರ ಬೋಸ್‌ ಜಯಂತಿ ಆಚರಿಸಲಾಯಿತು   

ಯಾದಗಿರಿ:‘ನೇತಾಜಿ ಸುಭಾಷಚಂದ್ರ ಬೋಸ್‌ ಯುವಕರಿಗೆ ಪ್ರೇರಣಾ ಶಕ್ತಿಯಾಗಿದ್ದು, ಅವರ ಮಾರ್ಗದರ್ಶನದಲ್ಲಿ ಯುವಕರು ಸಾಗಬೇಕು’ ಎಂದು ಬಿಜೆಪಿ ಹಿರಿಯ ಡಾ.ವೀರಬಸವಂತರಡ್ಡಿ ಮುದ್ನಾಳ ಹೇಳಿದರು. ನಗರದ ಸುಭಾಷಚಂದ್ರ ವೃತ್ತದಲ್ಲಿ ಮಂಗಳವಾರ ನೇತಾಜಿಯವರ 121ನೇ ಜಯಂತಿ ಪ್ರಯುಕ್ತ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು.

‘ಭಾರತದಲ್ಲಿ ಇದ್ದಷ್ಟು ಯುವಶಕ್ತಿ ಇಡೀ ವಿಶ್ವದಲ್ಲಿ ಇಲ್ಲ. ಅಷ್ಟೊಂದು ಯುವಶಕ್ತಿಯನ್ನು ಹೊಂದಿರುವ ಭಾರತ ಈಗಲೂ ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲಿನಲ್ಲಿ ಇದೆ. ಅತ್ಯಂತ ಕಡಿಮೆ ಯುವಶಕ್ತಿ ಹೊಂದಿರುವ ದೇಶಗಳು ಅಭಿವೃದ್ಧಿ ರಾಷ್ಟ್ರಗಳ ಪಟ್ಟಯಲ್ಲಿವೆ. ಏಕೆಂದರೆ ಅಲ್ಲಿನ ಸರ್ಕಾರಗಳು ದೇಶದಲ್ಲಿನ ಯುವಶಕ್ತಿಯನ್ನು ಸಮರ್ಥವಾಗಿ ದುಡಿಸಿಕೊಳ್ಳುತ್ತಿದೆ. ಆದರೆ, ನಮ್ಮ ಸರ್ಕಾರಗಳು ಆ ನಿಟ್ಟಿನಲ್ಲಿ ಕನಿಷ್ಟ ಪ್ರಯತ್ನ ಕೂಡ ಮಾಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇಶ ಸದೃಢವಾಗಿರಬೇಕಾದರೆ ಯುವ ಜನಾಂಗದಿಂದ ಮಾತ್ರ ಸಾಧ್ಯ ಎಂದು ನೇತಾಜಿ ನಂಬಿದ್ದರು. ಅಲ್ಲದೇ ಸಂಪೂರ್ಣ ಗುರಿ ಯುವಶಕ್ತಿಯಿಂದ ಮಾತ್ರ ಸಾಧ್ಯ ಎಂದು ಹೇಳುತ್ತಿದ್ದರು. ಅಂತಹ ನೇತಾಜಿಯನ್ನು ಇಂದು ಯುವ ಕರು ಅನುಸರಿಸಬೇಕಿದೆ’ ಎಂದರು.. ನೇತಾಜಿ ಸಮಿತಿ ಅಧ್ಯಕ್ಷ ವೆಂಕಟರಡ್ಡಿ ಮುದ್ನಾಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ಮೋಹನಬಾಬು, ಅಯ್ಯಣ್ಣ ಹುಂಡೆಕಾರ್, ಖಂಡಪ್ಪ ದಾಸನ್, ಶರಣಗೌಡ ಬಾಡಿಯಾಳ, ಆರ್.ಮಹಾದೇವಪ್ಪ ಅಬ್ಬೆತುಮಕೂರ, ಬಸವರಾಜ ಮೋಟ್ನಳ್ಳಿ, ಶಿವರಾಜ ವಾರದ, ಸೋಮನಾಥ ಜೈನ್, ಅನಿಲ ಗುರೂಜಿ, ರುದ್ರಗೌಡ, ಬಸವಂತರಾಯಗೌಡ ಮಾಲಿ ಪಾಟೀಲ, ಸೈಯದ್ ಫಾರೂಖ್, ರಾಜು ಹೆಂದೆ, ನಿಜಾಮ ನಾಗರಹಾಳ, ಬಲವಂತ ದಾಸನ್, ಸುರೇಶ ಆಕಳ ಇದ್ದರು.

ಸೈದಾಪುರ ವರದಿ: ‘ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರಯೋಧ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಜೀವನಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು‘ ಎಂದು ಶಿಕ್ಷಕ ಚನ್ನಬಸವ ನಾಯಕ ಸಲಹೆ ನೀಡಿದರು.

ಸಮೀಪದ ಸೈದಾಪುರ ಪಟ್ಟಣದ ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನೇತಾಜಿ ಸುಭಾಶ್ಚಂದ್ರ ಬೋಸ್‌ರವರ 121ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನೇತಾಜಿ ಒಬ್ಬ ಮಹಾನ್ ಕ್ರಾಂತಿಕಾರಿ ಹೋರಾಟಗಾರ ಮಾತ್ರವಲ್ಲದೇ ಅಪಾರ ಪಾಂಡಿತ್ಯ ಪಡೆದ ಮೇಧಾವಿಯಾಗಿದ್ದರು. ಮಹಾನ್ ನಾಯಕರ ತ್ಯಾಗ ಬಲಿದಾನ ಫಲವಾಗಿ ನಾವು ಇಂದು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ. ಸ್ವಾತಂತ್ರ್ಯ ನಂತರದ ಭಾರತದಲ್ಲಿರುವ ನಾವು ದೇಶ ರಕ್ಷಣೆಗಾಗಿ ತೊಡೆತಟ್ಟಿ ನಿಲ್ಲುವ ಮನಸ್ಥಿತಿ ಪ್ರತಿಯೊಬ್ಬರಲ್ಲೂ ಬರಬೇಕಿದೆ’ ಎಂದು ಸಲಹೆ ನೀಡಿದರು.

‘ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರಯೋಧ ನೇತಾಜಿ ಸಾವಿನ ಗುಟ್ಟು ನಿಗೂಢವಾಗಿರುವುದು ದುರದೃಷ್ಟಕರ ಸಂಗತಿ’ ಎಂದರು. ಮುಖ್ಯ ಶಿಕ್ಷಕ ನರಸಪ್ಪ ನಾರಯಣನೊರ್, ಶಿಕ್ಷಕರಾದ ರಾಘವೇಂದ್ರ ನಾಯಕ, ಯಲ್ಲಮ್ಮ ನಾಯಕ ಕೂಡ್ಲೂರು, ಆಂಜನೇಯ ಸೈದಾಪುರ, ಅರುಣಕುಮಾರ ಜೇಗರ, ದೇವೇಂದ್ರಪ್ಪ ಕೂಡ್ಲೂರ, ಶ್ರೀದೇವಿ, ರಿಯಾನ ಬೇಗಂ, ಶ್ರೀದೇವಿ,, ಮಹಿಬೂಬ, ಕಾಶಮ್ಮ ಇದ್ದರು.

ಕೂಡ್ಲೂರ ವರದಿ: ‘ಸುಭಾಷಚಂದ್ರ ಬೋಸ್ ಬ್ರಿಟಿಷರ ಕಪಿಮುಷ್ಠಿಯಲ್ಲಿ ಭರತ ಮಾತೆಯನ್ನು ಬಂಧಮುಕ್ತಗೊಳಿಸಲು ಹೋರಾಡಿದ ಕ್ರಾಂತಿಪುರುಷ ’ ಎಂದು ಮುಖ್ಯ ಶಿಕ್ಷಕ ಸುಲೇಮಾನ್ ಹೇಳಿದರು.

ಸಮೀಪದ ಕೂಡ್ಲೂರ ಗ್ರಾಮದಲ್ಲಿ ಯುವ ಭಾರತ ಕ್ರಾಂತಿದಳ ಸಂಘಟನೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ನಡೆದ ನೇತಾಜಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಎಂಬುದು ಸುಮ್ಮನೆ ಸಿಗಲಿಲ್ಲ. ಬದಲಿಗೆ ರಕ್ತಹರಿಸಿ ಅದನ್ನು ಪಡೆಯಬೇಕಾಯಿತು. ಅದಕ್ಕಾಗಿ‘ನನಗೆ ನೀವು ಶಕ್ತಿ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂಬ ಘೋಷ ವಾಕ್ಯದೊಂದಿಗೆ ರಾಷ್ಟ್ರದ ಜನರನ್ನು ಒಗ್ಗೂಡಿಸಿದ ನೇತಾಜಿ ರಾಷ್ಟ್ರಕ್ಕಾಗಿ ಸರ್ವಸ್ವವನ್ನು ತ್ಯಜಿಸಿದ ಮಹಾನ ಕ್ರಾಂತಿಕಾರಿ ಹೋರಾಟಗಾರರು. ಅಂತಹ ಮಹಾನ್ ನಾಯಕನ ಜೀವನಾದರ್ಶ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು’ ಎಂದರು.

ಇದಕ್ಕೂ ಮುನ್ನ ನೇತಾಜಿ ಸುಭಾಷಚಂದ್ರ ಬೋಸ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಶಿಕ್ಷಕಿ ಶ್ವೇತಾ, ಲಕ್ಷ್ಮಣ ನಾಯಕ, ಭೀಮಯ್ಯ ನಾಯಕ, ದೇವು ನಾಯಕ, ಬಸವಲಿಂಗಪ್ಪ ಕಲಾಲ್ ಇದ್ದರು. ಶೈಲಜಾ ಸಂಗಡಿಗರು ಸ್ವಾಗತಿಸಿದರು. ಶಿಕ್ಷಕಿ ಶ್ರೀದೇವಿ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಮಾಳಮ್ಮ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.