ADVERTISEMENT

₹125 ಕೋಟಿ ಅನುದಾನಕ್ಕೆ ಬೇಡಿಕೆ: ಜಮಾದಾರ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2018, 7:18 IST
Last Updated 12 ಫೆಬ್ರುವರಿ 2018, 7:18 IST

ಗುರುಮಠಕಲ್: ‘ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಲ್ಲಿ ಸದ್ಯ ₹5.25 ಕೋಟಿ ಇದೆ. ₹125 ಕೋಟಿ ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಜಗನ್ನಾಥ ಜಮಾದಾರ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುದಾನ ಖರ್ಚು ಮಾಡುವುದರ ಕಡೆಗೆ ಗಮನಹರಿಸಿ. ಅನುದಾನ ನೀಡಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

‘ನಿಗಮದ ಅಧ್ಯಕ್ಷ ಸ್ಥಾನಕ್ಕಾಗಿ ರಾಜ್ಯದಲ್ಲಿ ಸುಮಾರು 25 ಜನ ಸ್ಪರ್ಧೆಯಲ್ಲಿದ್ದ ಕಾರಣ ಆಯ್ಕೆ ವಿಳಂಬವಾಗಿದೆ. ಇದರಲ್ಲಿ ರಾಜಕೀಯ ಉದ್ದೇಶ ಇಲ್ಲ. ಶಾಸಕ ಬಾಬುರಾವ ಚಿಂಚನಸೂರ ಅವರ ಕೃಪೆಯಿಂದ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಅವರು ನನ್ನ ಮೇಲಿಟ್ಟ ಭರವಸೆಯನ್ನು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಉಳಿಸಿಕೊಳ್ಳುತ್ತೇನೆ’ ಎಂದರು.

ADVERTISEMENT

‘ಗುರುಮಠಕಲ್ ಮತಕ್ಷೇತ್ರದಲ್ಲಿ ಕೋಲಿ ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೇ ನಮ್ಮ ಸಮಾಜದವರೇ ಶಾಸಕರಿದ್ದ ಕಾರಣ ಈ ಭಾಗದ ಜನರಿಗೆ ಹೆಚ್ಚಿನ ಸೌಲಭ್ಯ ನೀಡುವಲ್ಲಿ ವಿಶೇಷ ಮುತುವರ್ಜಿವಹಿಸುತ್ತೇನೆ. 39 ಪರ್ಯಾಯ ಹೆಸರುಗಳಿರುವ ಗಂಗಾಮತ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಲ್ಲಿ ಶಾಸಕ ಬಾಬುರಾವ ಚಿಂಚನಸೂರ ಅವರ ಕೈಜೋಡಿಸಿ ದುಡಿಯುತ್ತೇನೆ’ ಎಂದು ಹೇಳಿದರು.

ಗಂಗಾಮತ ಕೋಲಿ ಸಮಾಜದ ನಗರ ಘಟಕದ ಅಧ್ಯಕ್ಷ ವೀರಪ್ಪ ಪಡಿಗೆ, ಕಾರ್ಯದರ್ಶಿ ಸಂತೋಷಕುಮಾರ ನೀರೆಟಿ, ಉಮೇಶ ಮುದ್ನಾಳ, ಅನಂತಪ್ಪ ಬೋಯಿನ್, ತಿಪ್ಪಣ್ಣ ಹಿಮಾಲಪುರ, ಚುಕ್ಕಪ್ಪ ನಾಯಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.