ADVERTISEMENT

ಹೆಳವ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಿಸಿ: ಮಲ್ಲಿಕಾರ್ಜುನ ಹೆಳವರ

ಹೆಳವ ಸಮಾಜದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 4:48 IST
Last Updated 21 ಜೂನ್ 2022, 4:48 IST
ಅಲೆಮಾರಿ ಹೆಳವ ಸಮುದಾಯವನ್ನು ಎಸ್ಟಿಗೆ ಸೇರಿಸಲು ಒತ್ತಾಯಿಸಿ ಒತ್ತಾಯಿಸಿ ಅಖಿಲ ಕರ್ನಾಟಕ ಹೆಳವ ಸಮಾಜದಿಂದ ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಲಾಯಿತು
ಅಲೆಮಾರಿ ಹೆಳವ ಸಮುದಾಯವನ್ನು ಎಸ್ಟಿಗೆ ಸೇರಿಸಲು ಒತ್ತಾಯಿಸಿ ಒತ್ತಾಯಿಸಿ ಅಖಿಲ ಕರ್ನಾಟಕ ಹೆಳವ ಸಮಾಜದಿಂದ ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಲಾಯಿತು   

ಯಾದಗಿರಿ: ಪ್ರವರ್ಗ-1ರ ಪಟ್ಟಿಯಲ್ಲಿರುವ ಅಲೆಮಾರಿ ಹೆಳವ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರದ ಅನುಮೋದನೆಗಾಗಿ ಶಿಫಾರಸು ಮಾಡುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಹೆಳವ ಸಮಾಜದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಸುಭಾಷ್ ವೃತ್ತದಲ್ಲಿಜಮಾಯಿಸಿದನೂರಾರು ಹೆಳವ ಸಮಾಜದ ಜನರು ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ಮಾಡಿದರು.

ಈ ವೇಳೆ ಮಾತನಾಡಿದ ಬಸವ ಬೃಂಗೇಶ್ವರ ಶ್ರೀಗಳು, ಅಲೆಮಾರಿ ಗುಂಪಿಗೆ ಸೇರಿದ ಹೆಳವ ಸಮಾಜವರಾದ ನಾವು ನಮ್ಮ ಹೊಟ್ಟೆಪಾಡಿಗಾಗಿ ಒಕ್ಕಲು ಮನೆತನದವರ ವಂಶಾವಳಿ ಹೇಳುತ್ತಾ, ಊರೂರು ಅಲೆದಾಡುತ್ತಾ, ಮಳೆ, ಗಾಳಿ, ಬಿಸಿಲು, ಚಳಿಯೆನ್ನದೆ ಇಂದು ಈ ಊರಲ್ಲಿ ನಾಳೆ ಮತ್ತೊಂದು ಊರಲ್ಲಿ ಬೀದಿ ಬದಿಗಳಲ್ಲಿ ಟೆಂಟ್ ಹಾಕಿಕೊಂಡು ಶಾಶ್ವತ ನೆಲೆ ಇಲ್ಲದೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದವರಾಗಿದ್ದೇವೆ. ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದು, ಸಂವಿಧಾನಾತ್ಮಕವಾಗಿ ನ್ಯಾಯಬದ್ಧವಾಗಿ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಇರಬೇಕಾದ ಅಲೆಮಾರಿ ಸಮುದಾಯವು ಹಿಂದುಳಿದ ವರ್ಗದ ಪ್ರವರ್ಗ-1ರ ಪಟ್ಟಿಯಲ್ಲಿದೆ ಎಂದರು.

ADVERTISEMENT

ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಿಎಚ್ ಹೆಳವರ ಮಾತನಾಡಿ, 1975 ರಲ್ಲಿ ಎಲ್‌.ಜಿ.ಹಾವನೂರ ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಮತ್ತು 1992 ರಲ್ಲಿ ಡಿ.ಕೆ.ನಾಯ್ಕರ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡಿರುವುದನ್ನು ಕಾಣಬಹುದಾಗಿದ್ದರೂ ಈವರೆಗೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಆಪಾದಿಸಿದರು.

ಕಳೆದ ಎರಡು ವರ್ಷಗಳ ಹಿಂದೆ ಸದರಿ ಕಡತವು ಕರ್ನಾಟಕ ವಿಶ್ವವಿದ್ಯಾಲಯ ಹಂಪಿ ಮಾನವಶಾಸ್ತ್ರದ ವಿಭಾಗದ ಡಾ.ಶ್ರೀನಿವಾಸ್ ಅವರು ಕರ್ನಾಟಕ ಪಿಚ್ಚಗುಂಟ್ಲು ಹೆಳವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಳಿಸಿ ಕರ್ನಾಟಕ ಸರ್ಕಾರದ ಕಲ್ಯಾಣ ಇಲಾಖೆ ಬೆಂಗಳೂರು ಇವರಿಗೆ 2018ರಲ್ಲಿ ವರದಿ ಸಲ್ಲಿಸಿದ್ದಾರೆ. ನೆನಗುದಿಗೆ ಬಿದ್ದಿರುವ ಈ ಕಡತಕ್ಕೆ ಪುನರ್‌ಜ್ಜೀವ ನೀಡಿ ಸರ್ಕಾರ ತಕ್ಷಣವೇ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಮೂಲಕ ಸಮುದಾಯಕ್ಕೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.

ನಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಧುಮ್ಮನಸೂರ ಮಠದ ಶಂಕರಲಿಂಗ ಸ್ವಾಮೀಜಿ, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಿ.ಎಚ್ ಹೆಳವರ, ಜಿಲ್ಲಾಧ್ಯಕ್ಷ ಹಣಮಂತ್ರಾಯ ಹಳಿಸಗರ, ಎಚ್.ಎನ್.ಗೋಗಿ, ಶ್ರೀಮಂತ ಸೌಂದರ್ಗೆ, ಸಾಯಬಣ್ಣ ಕಲಬುರ್ಗಿ, ಬಸವರಾಜ ಹೆಳವರ ಯಾಳಗಿ, ಶಿವಶರಣ ಗಬಸಾವಳಗಿ, ಯಲ್ಲಪ್ಪ ಕೋರಿ, ಹನುಮಂತ್ರಾಯ ಖಾನಾಪುರ, ಶಂಕ್ರಪ್ಪ ಬಾಲಛೇಡ್‌, ರಾಘವೇಂದ್ರ ಮಾಸ್ತರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.