ADVERTISEMENT

ನ್ಯಾ.ಶಿವರಾಜ ಪಾಟೀಲರ ನಡೆ, ನುಡಿಗೆ ಕೃತಿಗಳು ಸಾಕ್ಷಿ: ವಿ.ಶ್ರೀಶಾನಂದ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 7:21 IST
Last Updated 21 ಜುಲೈ 2025, 7:21 IST
ಯಾದಗಿರಿ ನಗರದ ಸರ್ಕಾರಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾ.ಶಿವರಾಜ ವಿ.ಪಾಟೀಲ್ ಅವರ ಎರಡು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಯಾದಗಿರಿ ನಗರದ ಸರ್ಕಾರಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾ.ಶಿವರಾಜ ವಿ.ಪಾಟೀಲ್ ಅವರ ಎರಡು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.   

ಯಾದಗಿರಿ: ‘ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರ ನಡೆ ಮತ್ತು ನುಡಿಗಳು ಒಂದಾಗಿದ್ದವು. ಅದಕ್ಕೆ ಅವರು ರಚಿಸಿದ ಸಂಜೆಗೊಂದು ನುಡಿ ಚಿಂತನ ಮತ್ತು ಸಾಧ್ವಿ ಶಿರೋಮಣಿ ಶಿವಶರಣೆ ಹೇಮಾರೆಡ್ಡಿ ಮಲ್ಲಮ್ಮ ಜೀವನ ಕೃತಿಗಳು ಸಾಕ್ಷಿಯಾಗಿವೆ’ ಎಂದು ಹೈಕೋರ್ಟ್ ನ್ಯಾಯಾದೀಶ ವಿ.ಶ್ರೀಶಾನಂದ ಹೇಳಿದರು.

ನಗರದ ಸರ್ಕಾರಿ ಕಾಲೇಜಿನಲ್ಲಿ ನ್ಯಾಯಮೂರ್ತಿ ಶಿವರಾಜ ಪಾಟೀಲ ಪ್ರತಿಷ್ಠಾನ ವತಿಯಿಂದ ಭಾನುವಾರ ಆಯೋಜಿಸಿದ್ದ ‘ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ಅವರು ರಚಿಸಿದ ಸಂಜೆಗೊಂದು ನುಡಿ ಚಿಂತನ 365 ಮತ್ತು ಸಾದ್ವಿ ಶಿರೋಮಣಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪುಸ್ತಕಗಳ ಬಿಡುಗಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮತ, ಧರ್ಮ ಅಥವಾ ದೇವರನ್ನು ನಂಬಿದರೂ ಪರವಾಗಿಲ್ಲ. ಆದರೆ ನಂಬಿಕ ಪೂರ್ಣಪ್ರಮಾಣದಲ್ಲಿರಲಿ. ಅಂದರೆ ಮಾತ್ರ ಜೀವನದ ದಡಕ್ಕೆ ತಲುಪಬಹುದು. ನ್ಯಾಯಮೂರ್ತಿ ಶಿವರಾಜ ಪಾಟೀಲರ ಕೃತಿಗಳನ್ನು ಓದಿ, ಉತ್ತಮ ಚಿಂತನೆಗಳನ್ನೂ ಅಳವಡಿಸಿಕೊಂಡಾಗ ಮಾತ್ರ ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ADVERTISEMENT

ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಗಂಗಾಧರ ಸ್ವಾಮೀಜಿ ಮಾತನಾಡಿ, ‘ನ್ಯಾ.ಶಿವರಾಜ ಪಾಟೀಲರು ಬದುಕಿನ ಎಲ್ಲ ಮೌಲ್ಯಗಳನ್ನು ಅರಿತುಕೊಂಡವರು. ಅವರು ನಡೆದಾಡುವ ಜ್ಞಾನಕೋಶದಂತೆ. ಅವರು ರಚಿಸಿದ ಕೃತಿಗಳು ಅಮೂಲ್ಯ ಚಿಂತನೆಗಳನ್ನು ಒಳಗೊಂಡಿವೆ’ ಎಂದರು.

ಸಾಧ್ವಿ ಶಿರೋಮಣಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ‌ ಕೃತಿಯ ಕುರಿತು ಉಪನ್ಯಾಸಕಿ ಶೈಲಜಾ ಬಾಗೇವಾಡಿ ಮಾತನಾಡಿದರು.

ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ. ಚನ್ನಾರಡ್ಡಿ ಪಾಟೀಲ ಹಾಗೂ ಪ್ರತಿಷ್ಠಾನದ ಸಂಯೋಜಕ ಕಲ್ಯಾಣರಾವ ಪಾಟೀಲ ಮಾತನಾಡಿದರು. ವಿಶ್ರಾಂತ ನ್ಯಾಯಾದೀಶ ಎಸ್.ಎಂ. ರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಸುಭಾಷಚಂದ್ರ ಕೌಲಗಿ, ವಿಶ್ರಾಂತ ನ್ಯಾಯಾದೀಶ ಎನ್. ಶರಣಪ್ಪ, ಹಿರಿಯ ವಕೀಲ ಎಸ್.ಬಿ.ಪಾಟೀಲ ಉಪಸ್ಥಿತರಿದ್ದರು. ಸಿದ್ದರಾಜರಡ್ಡಿ ನಿರ್ವಹಿಸಿದರು.

ಜೀವನದಲ್ಲಿ ಕಷ್ಟದಲ್ಲಿರುವವರು ನಿಜವಾದ ಸಹಾಯದ ಅಗತ್ಯ ಇರುವವರನ್ನು ಮೇಲೆತ್ತುವ ಕೆಲಸವಾಗಬೇಕು. ನಾವೂ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಪುಸ್ತಕಗಳಲ್ಲಿನ ಆದರ್ಶಗಳು ಮಸ್ತಕದಲ್ಲಿ ಒಡಮೂಡುವಂತಾಗಲಿ
ವಿ. ಶ್ರೀಶಾನಂದ ಹೈಕೋರ್ಟ್‌ ನ್ಯಾಯಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.