ADVERTISEMENT

ಭವಿಷ್ಯದ ತಲೆಮಾರಿಗಾಗಿ ನೀರು ಸಂರಕ್ಷಿಸಿ: ಬಸವರಾಜ ಶರಭೈ

ರಾಮಸಮುದ್ರ ಅಮೃತ್ ಸರೋವರ ಕೆರೆ ದಡದಲ್ಲಿ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 5:07 IST
Last Updated 17 ಆಗಸ್ಟ್ 2022, 5:07 IST
ಯಾದಗಿರಿ ತಾಲ್ಲೂಕಿನ ರಾಮಸಮುದ್ರ  ಕೆರೆಯಂಗಳದಲ್ಲಿ ಕೂಲಿ ಕಾರ್ಮಿಕರಿಗಾಗಿ ಹಮ್ಮಿಕೊಂಡ ರಂಗೋಲಿ, ಕಬಡ್ಡಿ ಹಾಗೂ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಲಾಯಿತು
ಯಾದಗಿರಿ ತಾಲ್ಲೂಕಿನ ರಾಮಸಮುದ್ರ  ಕೆರೆಯಂಗಳದಲ್ಲಿ ಕೂಲಿ ಕಾರ್ಮಿಕರಿಗಾಗಿ ಹಮ್ಮಿಕೊಂಡ ರಂಗೋಲಿ, ಕಬಡ್ಡಿ ಹಾಗೂ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಲಾಯಿತು   

ಯಾದಗಿರಿ: ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಕೆ ಮಾಡುವ ಜತೆಗೆ ಮಳೆ ನೀರಿನ ಸಂರಕ್ಷಣೆ ಮಾಡಬೇಕು ಎಂದು ಯಾದಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ ಹೇಳಿದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ರಾಮಸಮುದ್ರ ಸಹಯೋಗದಲ್ಲಿ ಮನರೇಗಾ ಯೋಜನೆಯ ಮಿಷನ್ ಅಮೃತ ಸರೋವರ ಅಭಿಯಾನದಡಿ ರಾಮಸಮುದ್ರ ಗ್ರಾಮದ ಸರ್ವೆ ನಂ.118ರಲ್ಲಿ ಅಮೃತ ಸರೋವರ ಕೆರೆ ಬಳಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರ ಧ್ವಜಾರೋಹಣದಲ್ಲಿ ಅವರು ಮಾತನಾಡಿದರು.

ಭವಿಷ್ಯದಲ್ಲಿ ಗ್ರಾಮೀಣ ಜನರಿಗೆ, ಪಶು-ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು ಎಂಬ ಉದ್ದೇಶದಿಂದ ಗ್ರಾಮೀಣ ಜಲ ಮೂಲಗಳನ್ನು ಗುರುತಿಸಿ ರಕ್ಷಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಹೊಸ ಅಮೃತ ಸರೋವರ ಕೆರೆಗಳನ್ನು ನಿರ್ಮಿಸಲಾಗುತ್ತಿದೆ. ಮಿಷನ್ ಅಮೃತ್ ಸರೋವರ ಅಭಿಯಾನದಡಿ ರಾಮಸಮುದ್ರ ಗ್ರಾಮದಲ್ಲಿ ನಿರ್ಮಿಸಿರುವ ಅಮೃತ್ ಸರೋವರ ಕೆರೆಯು 80 ಲಕ್ಷ ಲೀಟರ್ ಮಳೆ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ ಎಂದರು.

ADVERTISEMENT

ಈ ಸಂದರ್ಭಲ್ಲಿ ಅಮೃತ್ ಸರೋವರ ಕೆರೆ ಕಾಮಗಾರಿಯಲ್ಲಿ ಕೆಲಸ ಮಾಡಿದ ನರೇಗಾ ಯೋಜನೆಯ ನೋಂದಾಯಿತ ಕೂಲಿ ಕಾರ್ಮಿಕರಿಗಾಗಿ ಹಮ್ಮಿಕೊಂಡ ರಂಗೋಲಿ, ಕಬಡ್ಡಿ ಹಾಗೂ ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ, ಗೌರವಿಸಲಾಯಿತು.

ರಾಮಸಮುದ್ರ ಗ್ರಾಮದ ಹಿರಿಯ ನಾಗರಿಕ ಸಿದ್ದಲಿಂಗಪ್ಪ ಗುನಕಿ ಧ್ವಜಾರೋಹಣ ಮಾಡಿದರು. ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ವೆಂಕಟೇಶ ಬಿ.ಚಟ್ನಳ್ಳಿ, ಯಾದಗಿರಿ ತಾಲೂಕು ಪಂಚಾಯಿತಿ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಖಾಲಿದ್ ಅಹ್ಮದ್, ನರೇಗಾ ವಿಷಯ ನಿರ್ವಾಹಕ ಅನಸರ ಪಟೇಲ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜು ಮೇಟಿ, ಜಿಲ್ಲಾ ಪಂಚಾಯಿತಿ ಎಡಿಪಿಸಿ ಬನ್ನಪ್ಪ ಬೈಟಿಪುಲ್ಲಿ, ಡಿಐಇಸಿ ಪರಶುರಾಮ, ಡಿಎನ್‌ಆರ್‌ಎಮ್ ಪ್ರಶಾಂತ, ಗ್ರಾಮ ಪಂಚಾಯತಿ ಅಧ್ಯಕ್ಷರ ಬಸಪ್ಪ, ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

***

ಅಮೃತ್ ಕೆರೆ ನಿರ್ಮಾಣದಿಂದ ರಾಮಸಮುದ್ರ ಗ್ರಾಮದ ಬೆಟ್ಟದಂಚಿನ ರೈತರ ಜಮೀನಿಗೆ ಮಳೆ ನೀರು ನುಗ್ಗಿ ಬೆಳೆಗೆ ಹಾನಿ ಮಾಡುವುದನ್ನು ತಡೆದಿದೆ.
–ಬಸವರಾಜ ಶರಭೈ,ಇಒ, ಯಾದಗಿರಿ ತಾ.ಪಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.