ADVERTISEMENT

ತಾರತಮ್ಯ ಹೋಗಲಾಡಿಸದೆ ಅಭಿವೃದ್ಧಿ ಅಸಾಧ್ಯ

ಮಕ್ಕಳ ಹಕ್ಕುಗಳ ಅನುಷ್ಠಾನದಲ್ಲಿ ಪಂಚಾಯತ್ ಕಾರ್ಯಕಾರಿಗಳ ಪಾತ್ರದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 15:31 IST
Last Updated 8 ನವೆಂಬರ್ 2019, 15:31 IST
'ಮಕ್ಕಳ ಹಕ್ಕುಗಳ ಅನುಷ್ಠಾನದಲ್ಲಿ ಪಂಚಾಯತ್ ಕಾರ್ಯಕಾರಿಗಳ ಪಾತ್ರ'ದ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಿತು
'ಮಕ್ಕಳ ಹಕ್ಕುಗಳ ಅನುಷ್ಠಾನದಲ್ಲಿ ಪಂಚಾಯತ್ ಕಾರ್ಯಕಾರಿಗಳ ಪಾತ್ರ'ದ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಿತು   

ಯಾದಗಿರಿ: ಲಿಂಗ ಅನುಪಾತವನ್ನು ನೋಡಿದಾಗ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಿರುವುದು ಕಂಡುಬರುತ್ತದೆ. ಇಂದಿಗೂ ಗಂಡು ಮಕ್ಕಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ. ಈ ತಾರತಮ್ಯವನ್ನು ಹೋಗಲಾಡಿಸದೆ ಅಭಿವೃದ್ಧಿ ಅಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ, ಕೆ.ಎಸ್.ಆರ್.ಡಿ.ಪಿ.ಆರ್.ಯು-ಮಕ್ಕಳ ಹಕ್ಕುಗಳು ಮತ್ತು ಆಡಳಿತ ಕೋಶ ಹಾಗೂ ಯುನಿಸೆಫ್ ಹೈದರಾಬಾದ್ ಸಂಯುಕ್ತಾಶ್ರಯದಲ್ಲಿ 'ಮಕ್ಕಳ ಹಕ್ಕುಗಳ ಅನುಷ್ಠಾನದಲ್ಲಿ ಪಂಚಾಯತ್ ಕಾರ್ಯಕಾರಿಗಳ ಪಾತ್ರ'ದ ಕುರಿತು ಯಾದಗಿರಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಗ್ರಾಮಸಭೆಗಳನ್ನು ನಡೆಸಿ ಅವರಿಗೆ ತಮ್ಮ ಅಭಿಪ್ರಾಯಗಳನ್ನು, ಸಮಸ್ಯೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವಾತಾವರಣ ಕಲ್ಪಿಸಬೇಕು. ಮಗು ಹುಟ್ಟಿದ ನಂತರವಷ್ಟೇ ಅದರ ಅಭಿವೃದ್ಧಿಯೆಡೆಗೆ ಗಮನ ಹರಿಸುವುದಲ್ಲ. ತಾಯಿಯ ಗರ್ಭದಲ್ಲಿದ್ದಾಗಿನಿಂದಲೇ ಮಗುವಿನ ರಕ್ಷಣೆ ಹಾಗೂ ಪೋಷಣೆ ಪ್ರಾರಂಭವಾಗಬೇಕು. ಪೌಷ್ಟಿಕ ಆಹಾರ, ಚುಚ್ಚುಮದ್ದುಗಳು ಸರಿಯಾದ ಸಮಯದಲ್ಲಿ ಹಾಗೂ ಪ್ರಮಾಣದಲ್ಲಿ ದೊರೆಯಬೇಕು. ಸರ್ಕಾರದ ಕಾರ್ಯಕ್ರಮಗಳು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಬೇಕು. ಈ ದಿಕ್ಕಿನಲ್ಲಿ ಗ್ರಾಮ ಪಂಚಾಯಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ADVERTISEMENT

ಕೊಪ್ಪಳದ ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಕಾರ್ಯಕ್ರಮ ವ್ಯವಸ್ಥಾಪಕರಾದ ಹರೀಶ ಜೋಗಿ, ಗದಗ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಸಂಯೋಜಕರಾದ ಡಾ.ಗೀತಾ ಎನ್.ಬಂಗಾರಿ ಉಪನ್ಯಾಸ ನೀಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಶರಬಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಯಾದಗಿರಿ ತಾಲ್ಲೂಕಿನ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ಕೆ.ಎಸ್.ಆರ್.ಡಿ.ಪಿ.ಆರ್.ಯು-ಮಕ್ಕಳ ಹಕ್ಕುಗಳು ಮತ್ತು ಆಡಳಿತ ಕೋಶದ ಸಂಯೋಜಕ ಮುತ್ತುರಾಜ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.