ADVERTISEMENT

ಕಾಲೇಜುಗಳ ಆರಂಭಕ್ಕೆ ಶಿಕ್ಷಣ ಸಂಸ್ಥೆಗಳ ಸ್ವಾಗತ

ಆನ್‌ಲೈನ್‌ ಕಾಲೇಜಿಗಿಂತ ಆಫ್‌ಲೈನ್‌ ಕಾಲೇಜು ಉತ್ತಮ: ಸಂಸ್ಥೆಗಳ ಮುಖ್ಯಸ್ಥರ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 16:33 IST
Last Updated 23 ಅಕ್ಟೋಬರ್ 2020, 16:33 IST
ಡಾ. ರವೀಂದ್ರಕುಮಾರ ಎಂ. ನಾಗರಾಳೆ
ಡಾ. ರವೀಂದ್ರಕುಮಾರ ಎಂ. ನಾಗರಾಳೆ   

ಯಾದಗಿರಿ: ರಾಜ್ಯದಲ್ಲಿ ನವೆಂಬರ್ 17 ರಿಂದ ಪದವಿ, ಎಂಜಿನಿಯರಿಂಗ್‌ ಸೇರಿದಂತೆ ಕಾಲೇಜುಗಳು ಆರಂಭವಾಗಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಜಿಲ್ಲೆಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಪ್ರಾಂಶುಪಾಲರು ಸ್ವಾಗತಿಸಿದ್ದಾರೆ.

ಕೋವಿಡ್ ಕಾರಣದಿಂದ ಕಳೆದ 7 ತಿಂಗಳಿಂದ ಕಾಲೇಜುಗಳು ತೆರೆಯಲು ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಹೀಗಾಗಿ ಈ ಹೊಸ ಆದೇಶ ಶಿಕ್ಷಣ ಸಂಸ್ಥೆಗಳಿಗೆ ನಿಟ್ಟಿಸಿರು ಬಿಡುವಂತೆ ಆಗಿದೆ.

ಕಾಲೇಜು ಆರಂಭದ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಈ ವಿಷಯ ಪ್ರಕಟಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ಆನ್‌ಲೈನ್‌ ಮೂಲಕ ಪಾಠ ನಡೆಯುತ್ತಿದೆ. ಆದರೆ, ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾರಕವಾಗಿ ಪರಿಣಮಿಸಿದೆ.

ADVERTISEMENT

ಕೆಲವರ ಬಳಿ ಸ್ಮಾರ್ಟ್‌ ಫೋನ್‌ ಇಲ್ಲದೆ ಇರುವುದು, ನೆಟ್‌ವರ್ಕ್‌ ಸರಿಯಾಗಿ ಇಲ್ಲದಿರುವುದು ಸೇರಿ ಅನೇಕ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದರು. ಇನ್ನೂ ಕೆಲ ವಿದ್ಯಾರ್ಥಿಗಳಿಗೆ ಪಾಠವೇ ಅರ್ಥವಾಗದಿರುವುದು, ಪ್ರಶ್ನೆ ಕೇಳಿ ಸಂದೇಹ ಬಗೆಹರಿಸಿಕೊಳ್ಳಲು ಪರದಾಡುವುದು ನಡೆದೆಇತ್ತು. ಕಾಲೇಜುಗಳ ಆರಂಭವಾದರೆ ಇದೆಲ್ಲಕ್ಕೂ ಪರಿಹಾರ ಸಿಕ್ಕಂತೆ ಆಗುತ್ತದೆ. ಕೋವಿಡ್‌ ನಿಯಮಗಳನ್ನು ಪಾಲಿಸಿ ಕಾಲೇಜುಗಳನ್ನು ಸರ್ಕಾರದ ನಿರ್ದೇಶನದಂತೆ ಪ್ರಾರಂಭಿಸಲಾಗುವುದು ಎನ್ನುವುದು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಅಭಿಪ್ರಾಯವಾಗಿದೆ.

***

‘ಆಫ್‌ಲೈನ್‌ ಕ್ಲಾಸ್‌ ವಿದ್ಯಾರ್ಥಿಗಳಿಗೆ ಸರಿಯಲ್ಲ’

ಈಗಾಗಲೇ ನಾವು ಆನ್‌ಲೈನ್‌ ಮೂಲಕ ಪಾಠ ಬೋಧಿಸುತ್ತಿದ್ದೇವೆ. ವಿದ್ಯಾರ್ಥಿಗಳು ಕಾಲೇಜು ಆರಂಭದ ಬಗ್ಗೆ ಕೇಳುತ್ತಲೇ ಇದ್ದರು. ಈಗ ಸರ್ಕಾರ ಘೋಷಿಸಿದ್ದು ಸ್ವಾಗತಾರ್ಹ. ಕಾಲೇಜಿಗೆ ಬಂದರೆ ಕೋವಿಡ್‌ ಬರುತ್ತದೆ ಎನ್ನುವುದು ತಪ್ಪು ಕಲ್ಪನೆ. ಹೀಗಾಗಿ ಸರ್ಕಾರದ ಮಾರ್ಗಸೂಚಿಯಂತೆ ಕಾಲೇಜು ನಡೆಸಲಿದ್ದೇವೆ.
ಡಾ. ರವೀಂದ್ರಕುಮಾರ ಎಂ. ನಾಗರಾಳೆ, ಪ್ರಾಂಶುಪಾಲ, ವೀರಭದ್ರಪ್ಪ ನಿಷ್ಠಿ ಎಂಜನಿಯರಿಂಗ್‌ ಕಾಲೇಜು ಸುರಪುರ

‘ಸರ್ಕಾರದ ನಿರ್ಧಾರ ಸರಿಯಾಗಿದೆ’
ಎಲ್ಲ ಕಡೆ ನೆಟ್‌ವರ್ಕ್‌ ಇರಲ್ಲ. ಹೀಗಾಗಿ ನಾವು ಯೂಟ್ಯೂಬ್‌ ಮೂಲಕ ಪಾಠಗಳನ್ನು ಮಾಡಿ ಶೇರ್‌ ಮಾಡಿದ್ದೇವೆ. ಪಠ್ಯಕ್ಕೆ ಸಂಬಂಧಿಸಿದಂತೆ ನೋಟ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಹಂಚಿದ್ದೇವೆ. ಎಲ್ಲ ವಿದ್ಯಾರ್ಥಿಗಳಿಗೆ ಆನ್‌ ಲೈನ್‌ ಪಾಠ ಅರ್ಥವಾಗುವುದಿಲ್ಲ. ಕಾಲೇಜು ಆರಂಭಕ್ಕೆ ಸರ್ಕಾರ ತೀರ್ಮಾಸಿರುವುದು ಸರಿಯಾಗಿದೆ.

ಕಮಲಾ ಎನ್ ದೇವರಕಲ್, ಅಧ್ಯಕ್ಷೆ, ಆರ್.ವಿ.ವಿದ್ಯಾ ಸಂಸ್ಥೆ ಯಾದಗಿರಿ

‘ಸುರಕ್ಷತೆಯ ದೃಷ್ಟಿಯಿಂದ ತಡಮಾಡಬೇಕಿತ್ತು’
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಾಲೇಜುಗಳನ್ನು ಆರಂಭಿಸುವುದು ಒಳ್ಳೆಯದು. ಆದರೆ, ಸುರಕ್ಷತೆಯ ವಿಷಯವಾಗಿ ಇನ್ನೂ ಕೆಲ ಕಾಲ ತಡಮಾಡಬಹುದಿತ್ತು. ನಮ್ಮಲ್ಲಿ 1,600 ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದಾರೆ. ಅಂತರ ಕಾಪಾಡಿಕೊಳ್ಳುವುದು ಸವಾಲಿನ ವಿಷಯವಾಗಿದೆ.
ಡಾ.ಸುಭಾಶ್ಚಂದ್ರ ಕೌಲಗಿ, ಪ್ರಾಂಶುಪಾಲ, ಸರ್ಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.