ADVERTISEMENT

ಉತ್ತಮ ಮಳೆ; ರೈತನ ಮೊಗದಲ್ಲಿ ಮಂದಹಾಸ

ಅಶೋಕ ಸಾಲವಾಡಗಿ
Published 2 ಜೂನ್ 2020, 15:37 IST
Last Updated 2 ಜೂನ್ 2020, 15:37 IST
ಸುರಪುರ ತಾಲ್ಲೂಕಿನ ರುಕ್ಮಾಪುರ ಸೀಮೆಯಲ್ಲಿ ರೈತ ಹೊಲವನ್ನು ಹದಗೊಳಿಸುತ್ತಿರುವುದು
ಸುರಪುರ ತಾಲ್ಲೂಕಿನ ರುಕ್ಮಾಪುರ ಸೀಮೆಯಲ್ಲಿ ರೈತ ಹೊಲವನ್ನು ಹದಗೊಳಿಸುತ್ತಿರುವುದು   

ಸುರಪುರ: ತಾಲ್ಲೂಕಿನಲ್ಲಿ ಮಳೆ ಆರಂಭವಾಗಿ 15 ದಿನಗಳು ಕಳೆದಿದ್ದು, ಸಾಕಷ್ಟು ಉತ್ತಮ ಮಳೆ ಆಗಿದೆ. ಸಹಜವಾಗಿ ಇದು ರೈತನ ಮೊಗದಲ್ಲಿ ಮಂದಹಾಸವನ್ನುಂಟು ಮಾಡಿದೆ.

ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮನೆಯ ಮೂಲೆಯಲ್ಲಿಟ್ಟಿದ್ದ ಕೃಷಿ ಪರಿಕರಗಳು ಹೊರಗೆ ಬಂದಿವೆ. ರೈತರು ಕಳೆದ 15 ದಿನಗಳಿಂದ ಹೊಲಗಳಿಗೆ ಹೋಗುತ್ತಿದ್ದಾರೆ. ಈಗಾಗಲೇ ಬಹುತೇಕ ಹೊಲಗಳನ್ನು ಹದಗೊಳಿಸಲಾಗಿದೆ.

ಕೆಲ ರೈತರು ನರೇಗಾ ಯೋಜನೆಯಲ್ಲಿ ತಮ್ಮ ಹೊಲಗಳಿಗೆ ಬದು ನಿರ್ಮಾಣ ಮಾಡಿಕೊಂಡಿದ್ದಾರೆ. ನಗರದಲ್ಲಿ ಕೃಷಿಗೆ ಸಂಬಂಧಿಸಿದ ಅಂಗಡಿಗಳು ತೆರೆದಿದ್ದು ರೈತರು ಕೃಷಿ ಪರಿಕರ, ಬಿತ್ತನೆ ಬೀಜ, ಗೊಬ್ಬರ ಖರೀದಿಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ADVERTISEMENT

ತಾಲ್ಲೂಕಿನಲ್ಲಿ ಮೇ 31 ಮತ್ತು ಜೂನ್ 1ರಂದು 100 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ. ನಗರದ ವ್ಯಾಪ್ತಿಯಲ್ಲೆ 40 ಮೀ.ಮಿ ಮಳೆ ಸುರಿದಿದೆ. ‘ಮುಂಗಾರು ಆಶಾದಾಯಕವಾಗಿದೆ. ಹತ್ತಿ, ಹೆಸರು, ತೊಗರಿ, ಶೇಂಗಾ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಸರ್ಕಾರ ರಿಯಾಯತಿ ದರದಲ್ಲಿ ಗೊಬ್ಬರ ವಿತರಿಸಬೇಕು. ಬೆಳೆ ಸಾಲ ಕೊಡಬೇಕು’ ಎನ್ನುತ್ತಾರೆ ಪ್ರಗತಿಪರ ರೈತ ಹೆಮನೂರ ಗ್ರಾಮದ ಮಲ್ಲಯ್ಯ ಕಮತಗಿ.

‘ಮಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ಎಲ್ಲ 5 ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಸರು, ಸಜ್ಜೆ, ತೊಗರಿ, ಸೂರ್ಯಕಾಂತಿ, ಮೆಕ್ಕೆಜೋಳದ ಬೀಜಗಳನ್ನು ರೈತರಿಗೆ ಸಹಾಯ ಧನದಲ್ಲಿ ವಿತರಿಸಲಾಗುತ್ತಿದೆ. ಏಕದಳ ಧಾನ್ಯದಲ್ಲಿ ಭತ್ತ, ದ್ವಿದಳ ಧಾನ್ಯದಲ್ಲಿ ತೊಗರಿ, ವಾಣಿಜ್ಯ ಬೆಳೆಯಲ್ಲಿ ಹತ್ತಿ ಈ ಭಾಗದ ಪ್ರಮುಖ ಬೆಳೆಗಳಾಗಿವೆ’ ಸಹಾಯಕ ಕೃಷಿ ನಿರ್ದೇಶಕ ದಾನಪ್ಪ ಕತ್ನಳ್ಳಿ ತಿಳಿಸಿದರು.

‘ಮುಂಗಾರು ಹಂಗಾಮಿಗೆ ಒಟ್ಟು 1,46,521 ಬಿತ್ತನೆ ಕ್ಷೇತ್ರ ಗುರಿ ಹೊಂದಲಾಗಿದೆ. ಯೂರಿಯಾ 10,500 ಟನ್, ಡಿಎಪಿ 6,500 ಟನ್, ಕಾಂಪ್ಲೆಕ್ಸ್ 10,335 ಟನ್, ಎಂಎಪಿ 1,000 ಟನ್ ಸೇರಿದಂತೆ ಒಟ್ಟು 28,035 ಟನ್ ರಸಗೊಬ್ಬರದ ಅವಶ್ಯಕತೆ ಇದೆ. ಗೊಬ್ಬರವನ್ನು ಖಾಸಗಿ ಮಾರಾಟಗಾರರ ಮೂಲಕ ವಿತರಿಸಲಾಗುತ್ತದೆ’ ಎಂದರು.

***

ರೈತರು ಬಿತ್ತನೆ ಬೀಜಗಳನ್ನು ಅಧಿಕೃತ ವಿತರಕರಲ್ಲಿ ಖರೀದಿ ಮಾಡಬೇಕು. ರಸೀದಿ ಪಡೆಯಬೇಕು. ಅನಧಿಕೃತ ಮಾರಾಟಗಾರರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು
ದಾನಪ್ಪ ಕತ್ನಳ್ಳಿ, ಸಹಾಯಕ ಕೃಷಿ ನಿರ್ದೇಶಕ

***

ಈ ಬಾರಿ ಮುಂಗಾರು ಪ್ರವೇಶ ಸಾಕಷ್ಟು ಮೊದಲೆ ಆಗಿದೆ. ಹೊಲಗಳನ್ನು ಹದ ಗೊಳಿಸಲಾಗಿದೆ. ಭೂಮಿ ಸ್ವಲ್ಪ ಆರಿದ ಮೇಲೆ ಬಿತ್ತನೆ ಕಾರ್ಯ ಶುರು ಮಾಡುತ್ತೇವೆ
ವಿಶ್ವರಾಜ ಒಂಟೂರು, ರೈತ, ಚಂದಲಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.