ADVERTISEMENT

ಸಮರ್ಪಕ ನೀರಾವರಿ ಕಲ್ಪಿಸಲು ಬದ್ಧ; ಕಾರಜೋಳ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 2:58 IST
Last Updated 7 ಸೆಪ್ಟೆಂಬರ್ 2022, 2:58 IST
ನಾರಾಯಣಪುರ ಬಸವಸಾಗರ ಜಲಾಶಯ ಸಮೀಪದ ಹಿರೇಜಾವೂರು ಕ್ರಾಸ್‌ನಲ್ಲಿ ಅಶ್ವಾರೂಢ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಸಚಿವ ಗೋವಿಂದ ಕಾರಜೋಳ ಉದ್ಘಾಟಿಸಿದರು
ನಾರಾಯಣಪುರ ಬಸವಸಾಗರ ಜಲಾಶಯ ಸಮೀಪದ ಹಿರೇಜಾವೂರು ಕ್ರಾಸ್‌ನಲ್ಲಿ ಅಶ್ವಾರೂಢ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಸಚಿವ ಗೋವಿಂದ ಕಾರಜೋಳ ಉದ್ಘಾಟಿಸಿದರು   

ನಾರಾಯಣಪುರ: ‘ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿನ ನೀರಾವರಿ ವಂಚಿತ ಜಮೀನುಗಳಿಗೆ ಸಮರ್ಪಕ ನೀರಾವರಿ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ನಾರಾಯಣಪುರದ ಬಸವಸಾಗರ ಜಲಾಶಯ ಸಮೀಪದ ಹಿರೇಜಾವೂರು ಕ್ರಾಸ್‌ ವೃತ್ತದಲ್ಲಿ ಅಶ್ವಾರೂಢ ಬಸವೇಶ್ವರ ಪುತ್ಥಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷ್ಣಾ ಕೊಳ್ಳದ 3ನೇ ಹಂತದ ಯೋಜನೆ ಅಡಿಯಲ್ಲಿ ₹10 ಸಾವಿರ ಕೋಟಿ ಪೈಕಿ ಈಗಾಗಲೇ ₹5 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ₹2500 ಕೋಟಿ ಬಿಡುಗಡೆ ಮಾಡುವರು. ಮಾರ್ಚ್‌ ಅಂತ್ಯದವರೆಗೆ ₹2500 ಕೋಟಿ ಅನುದಾನ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

‘ಆಲಮಟ್ಟಿ ಆಣೆಕಟ್ಟು ಎತ್ತರಿಸುವು ದರಿಂದ ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಸುಮಾರು 20 ಗ್ರಾಮಗಳ ಜಮೀನುಗಳು ಮುಳಗಡೆಯಾಗಲಿದೆ. ಅವರಿಗೆ ಸಮರ್ಪಕವಾಗಿ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಅನುದಾನ ಒದಗಿಸಲು ಆದ್ಯತೆ ನೀಡುತ್ತೇವೆ’ ಎಂದರು.

‘ನೀರಾವರಿ ವಂಚಿತ ಜಮೀನುಗಳಿಗೆ ಸಮಗ್ರ ನೀರಾವರಿಗಾಗಿ ಯೋಜನೆ ರೂಪಿಸಲಾಗುತ್ತಿದೆ. ಬಸವ ಸಾಗರ ಜಲಾಶಯಕ್ಕೆ ಇರುವ ಹೆಸರಿನಂತೆ ಸಮಾನತೆಯ ಹರಿಕಾರ ಬಸವೇಶ್ವರ ಪುತ್ಥಳಿ ಅನಾವರಣ ಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.

ಶಾಸಕರಾದ ಅಮರೇಗೌಡ ಬಯ್ಯಾಪುರ, ದೊಡ್ಡನಗೌಡ ಪಾಟೀಲ ಮಾತನಾಡಿ, ‘ಬಸವಸಾಗರ ಬಳಿ ಸಾಕಷ್ಟು ಸ್ಥಳಾವಕಾಶ ಲಭ್ಯವಿದೆ. ಸುಂದರ ಉದ್ಯಾನ ನಿರ್ಮಿಸಿ, ಕೆರೆ ತುಂಬುವ ಯೋಜನೆ ಅನುದಾನ ಒದಗಿಸಲಾಗುವುದು’ ಎಂದು ಆಶ್ವಾಸನೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಎಸ್ ಹೂಲಿಗೇರಿ ಮಾತನಾಡಿ, ಈ ಭಾಗದ ಹಿರಿಯ ನಾಯಕರೇ ಜಲಸಂಪನ್ಮೂಲ ಸಚಿವರಾಗಿದ್ದು, ನೀರಾವರಿ ಯೋಜನೆ ಗಳಿಗೆ ಅನುದಾನ ಒದಗಿಸಲಿ ಎಂದು ಹೇಳಿದರು.

ಇಲಕಲ್ಲದ ಗುರುಮಹಾಂತ ಸ್ವಾಮೀಜಿ, ಅಂಕಲ ಮಠದ ಸ್ವಾಮೀಜಿ, ಲಿಂಗಸೂರು ಸ್ವಾಮೀಜಿ, ಗುರಗುಂಟಾ ಸ್ವಾಮೀಜಿ, ಯರಡೋಣ ಸ್ವಾಮೀಜಿ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್, ಸಿದ್ದು ಬಂಡಿ, ಗ್ರಾ.ಪಂ ಅಧ್ಯಕ್ಷೆ ಹಣಮವ್ವ ರಂಗಪ್ಪ, ಮುಖ್ಯ ಎಂಜಿನಿಯರ್ ಅಶೋಕ್ ವಾಸನದ, ಅಧೀಕ್ಷಕ ಎಂಜಿನಿಯರ್ ಸಂಜೀವಕುಮಾರ, ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ ಕಿಮಾವತ್ ಇದ್ದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿ, ಶ್ರೀಶೈಲ್ ಬಿಜ್ಜೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.