ADVERTISEMENT

ಶಹಾಪುರ: ಗುರುಭವನ ಕಟ್ಟಡಕ್ಕೆ ಮತ್ತೆ ಮರುಜೀವ

ಟಿ.ನಾಗೇಂದ್ರ
Published 17 ಜೂನ್ 2025, 5:40 IST
Last Updated 17 ಜೂನ್ 2025, 5:40 IST
   

ಶಹಾಪುರ: 25 ವರ್ಷಗಳ ಹಿಂದೆ ಗುರುಭವನ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಾರಣಾಂತರಗಳಿಂದ ಕಟ್ಟಡ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಈಗ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಸಂಸದರ ನಿಧಿ ಅನುದಾನದಲ್ಲಿ ಗುರುಭವನ ಕಟ್ಟಡ ಕಾಮಗಾರಿ ಆರಂಭವಾಗಲಿದ್ದು, ಗುರುಭವನಕ್ಕೆ ಮರುಜೀವ ಬಂದಂತಾಗಿದೆ.

ಅಂದಿನ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಬಸನಗೌಡ ಮಹಾಂತಗೌಡರ ಹಾಗೂ ಸಕ್ರೆಪ್ಪಗೌಡ ಪಾಟೀಲ ಅವರ ಆಶ್ರಯದಲ್ಲಿ 2000ರಲ್ಲಿ 120X80 ಉದ್ದಳತೆಯ ಜಾಗದಲ್ಲಿ ಸುಮಾರು ₹ 5 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು. 2004 ರವರೆಗೆ ಕಾಮಗಾರಿ ಕುಂಟುತ್ತ ಸಾಗಿತು. ನಂತರ ಶಿಕ್ಷಕರ ಸಂಘದ ಚುನಾವಣೆಯ ರಾಜಕೀಯ ಪ್ರವೇಶ ಹಾಗೂ ಅಂದಿನ ಶಿಕ್ಷಕರ ಸಂಘದ ಅಧ್ಯಕ್ಷರ ಇಚ್ಛಾಶಕ್ತಿಯ ಕೊರತೆಯಿಂದ ಕಟ್ಟಡ ಕಾಮಗಾರಿ ನನೆಗುದಿಗೆ ಬಿತ್ತು ಎಂದು ನಿವೃತ್ತ ಶಿಕ್ಷಕರೊಬ್ಬರು ಮಾಹಿತಿ ನೀಡಿದರು.

ಗುರುಭವನ ಕಟ್ಟಡ ನಿರ್ಮಾಣಕ್ಕೆ ₹ 1.19 ಕೋಟಿ ಅಂದಾಜುಪಟ್ಟಿ ಸಿದ್ದಪಡಿಸಿದ್ದೇವೆ. ಸಂಘದ ಮನವಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಕೆಕೆಆರ್‌ಡಿಬಿಯಿಂದ ₹ 50 ಲಕ್ಷ ಅನುದಾನ ಬಿಡುಗಡೆಗೊಳಿಸಿ, ನಿರ್ಮಿತಿ ಕೇಂದ್ರಕ್ಕೆ ಕಟ್ಟಡ ಕಾಮಗಾರಿಯ ಹೊಣೆ ನೀಡಿದ್ದಾರೆ. ಅಲ್ಲದೆ ಸಂಸದರ ನಿಧಿಯಿಂದ ₹ 15 ಲಕ್ಷ ಮಂಜೂರು ಆಗಿದೆ. ಇನ್ನುಳಿದ ಅನುದಾನವನ್ನು ಶಿಕ್ಷಕರ ಕಲ್ಯಾಣ ನಿಧಿಯಿಂದ ಪಡೆದುಕೊಳ್ಳಲು ಚಿಂತನೆಯಿದೆ ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ಲಾಳಸೇರಿ ಹೇಳಿದರು.

ADVERTISEMENT

‘ಈಗಾಗಲೇ ನಿರ್ಮಿಸಿದ ಕಟ್ಟಡ ಹಳೆಯ ಕೆಲಭಾಗ ತೆಗೆದು ಹಾಕಿ ಹೊಸದಾಗಿ ಕಟ್ಟಡ ನಿರ್ಮಿಸಲಾಗುತ್ತದೆ. ಮೊದಲ ಮಹಡಿಯಲ್ಲಿ ಸಭಾಂಗಣ ನಿರ್ಮಿಸಿ, ಅದರಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. 2ನೇ ಮಹಡಿಯಲ್ಲಿ 6 ಕೋಣೆ ನಿರ್ಮಿಸಲಾಗುವುದು. ಆದಷ್ಟು ತ್ವರಿತವಾಗಿ ಗುರುಭವನ ಕಟ್ಟಡ ಕಾಮಗಾರಿ ಮುಕ್ತಾಯಕ್ಕೆ ನಮ್ಮ ಶಿಕ್ಷಕರ ಬಳಗ ಉತ್ಸುಕತೆ ತೋರಿದೆ ಎಂದರು.

25 ವರ್ಷಗಳ ಹಿಂದೆ ಗುರುಭವನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಕಾರಣಾಂತರದಿಂದ ಕಟ್ಟಡ ಪೂರ್ಣಗೊಳ್ಳಲಿಲ್ಲ. ಈಗ ನಿರ್ಮಿತಿ ಕೇಂದ್ರದಿಂದ ಕಟ್ಟಡ ಕಾಮಗಾರಿ ಶುರು ಮಾಡಿದೆ‌
ಲಕ್ಷ್ಮಣ ಲಾಳಸೇರಿ, ಅಧ್ಯಕ್ಷ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.