ADVERTISEMENT

ಯರಗೋಳ; ತುಕ್ಕು ಹಿಡಿಯುತ್ತಿವೆ ಮಂಚ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 11:37 IST
Last Updated 13 ನವೆಂಬರ್ 2019, 11:37 IST
ಯರಗೋಳ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಆವರಣದಲ್ಲಿ ಬಿದ್ದಿರುವ ಕಬ್ಬಿಣದ ಮಂಚಗಳು
ಯರಗೋಳ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಆವರಣದಲ್ಲಿ ಬಿದ್ದಿರುವ ಕಬ್ಬಿಣದ ಮಂಚಗಳು   

ಯರಗೋಳ: ಗ್ರಾಮದ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ಕಟ್ಟಡದ ದುರಸ್ತಿ ಕಾರ್ಯ ನಡೆಯುತ್ತಿದ್ದು, ಮಂಚ ಮತ್ತು ಅಡುಗೆ ಸಾಮಗ್ರಿಗಳು ಬಯಲಲ್ಲಿ ಬಿದ್ದು ತುಕ್ಕು ಹಿಡಿಯುತ್ತಿವೆ.

ವಾರ್ಡ್ ಸಂಖ್ಯೆ 4ರಲ್ಲಿ ಇರುವ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ 75 ವಿದ್ಯಾರ್ಥಿಗಳಿದ್ದಾರೆ. ಕಟ್ಟಡದ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಸಾಮಾನ್ಯ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳು ಬಳಸುತ್ತಿದ್ದ 30ಕ್ಕೂ ಹೆಚ್ಚು ಕಬ್ಬಿಣದ ಮಂಚಗಳು ಮತ್ತು ಅಡುಗೆ ಸಾಮಗ್ರಿಗಳು ಬಿಸಿಲು, ಮಳೆ, ಗಾಳಿಗೆ, ದೂಳು ತಿಂದು ತುಕ್ಕುಹಿಡಿಯುತ್ತಿವೆ. ಆದರೂ ವಸತಿ ನಿಲಯದ ಮೇಲ್ವಿಚಾರಕರು ಮತ್ತು ಸಿಬ್ಬಂದಿ ಗಮನಹರಿಸುತ್ತಿಲ್ಲ.

ADVERTISEMENT

ಅಲ್ಲದೆ, ವಸತಿ ನಿಲಯದ ಅಂಗಳದಲ್ಲಿರುವ ಶಿಕ್ಷಕರ ತರಬೇತಿ ಸಮುದಾಯ ಭವನದ ಕಟ್ಟಡದ ದುರಸ್ತಿ ಕಾರ್ಯ ನಡೆಯುತ್ತಿದೆ. ಕಾರ್ಮಿಕರು ಮಂಚಗಳ ಮೇಲೆ ನಿಂತು ಕೆಲಸ ಮಾಡುತ್ತಿದ್ದಾರೆ.

ಅಡುಗೆ ತಯಾರಿಸುವ ಸಾವಿರಾರು ರೂಪಾಯಿ ಮೌಲ್ಯದ ಸಾಮಗ್ರಿಗಳಲ್ಲಿ ಸಿಮೆಂಟ್ ,ಉಸುಕು, ದೂಳು ತುಂಬಿ ಕೆಟ್ಟು ಹೋಗುತ್ತಿವೆ. ಕಟ್ಟಡದ ಸುತ್ತಲಿನ ಗೋಡೆ ಮುರಿದು ಬಿದ್ದಿದ್ದು, ಹಂದಿ, ನಾಯಿ, ಜಾನುವಾರುಗಳು ಅಂಗಳಕ್ಕೆ ಪ್ರವೇಶಿಸುವುದರಿಂದ ಕಬ್ಬಿಣದ ಉಪಯುಕ್ತ ಸಾಮಗ್ರಿಗಳಿಗೆ ಧಕ್ಕೆಯಾಗುತ್ತಿದೆ.

ಗ್ರಾಮದ ಯುವಕ ಸಾಬಣ್ಣ ಚಿಕ್ಕ ಬಾನರ್ ಮಾತನಾಡಿ,‘ಸರ್ಕಾರ ಸಾವಿರಾರು ರೂಪಾಯಿ ಖರ್ಚು ಮಾಡಿ ಸಾಮಗ್ರಿ ಖರೀದಿಸಿದೆ. ಅವುಗಳನ್ನು ರಕ್ಷಿಸಬೇಕಾಗಿರುವುದು ಸಿಬ್ಬಂದಿ ಕರ್ತವ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.