ADVERTISEMENT

ಶಹಾಪುರ: ಮರಮ್ ಹಾಕಿಸಿದ ಬಿಲ್ ₹13.85 ಲಕ್ಷ

ನಗರಸಭೆಯ ಮೂರು ತಿಂಗಳ ಆದಾಯ, ಖರ್ಚು ವೆಚ್ಚದ ದಾಖಲೆ

ಟಿ.ನಾಗೇಂದ್ರ
Published 23 ಜನವರಿ 2022, 6:24 IST
Last Updated 23 ಜನವರಿ 2022, 6:24 IST
ಶಹಾಪುರ ನಗರದ ಬಸವೇಶ್ವರದ ಆರ್.ಒ ಪ್ಲಾಂಟ್ ಬಳಿ ಉದ್ಯಾನದಲ್ಲಿ ₹92 ಸಾವಿರ ವೆಚ್ಚದಲ್ಲಿ ಆರ್.ಸಿ.ಸಿ ಬೆಂಚ್ ಹಾಕಿರುವುದು
ಶಹಾಪುರ ನಗರದ ಬಸವೇಶ್ವರದ ಆರ್.ಒ ಪ್ಲಾಂಟ್ ಬಳಿ ಉದ್ಯಾನದಲ್ಲಿ ₹92 ಸಾವಿರ ವೆಚ್ಚದಲ್ಲಿ ಆರ್.ಸಿ.ಸಿ ಬೆಂಚ್ ಹಾಕಿರುವುದು   

ಶಹಾಪುರ: ‘ನಗರದ 31 ವಾರ್ಡ್‌ಗಳ ಪೈಕಿ ವಿವಿಧ ಬಡಾವಣೆಗಳಲ್ಲಿ ಮರಮ್ ಹಾಕಿಸಲು ಮೂರು ತಿಂಗಳಲ್ಲಿ ₹13.85 ಲಕ್ಷ ವೆಚ್ಚ ಆಗಿದೆ. ವಿದ್ಯುತ್ ಸಾಮಗ್ರಿ ಖರೀದಿ ಹಾಗೂ ದುರಸ್ತಿಗೆ ₹8.29 ಲಕ್ಷ ವಿನಿಯೋಗಿಸಿದೆ. ನಗರಸಭೆಯ ಅಧ್ಯಕ್ಷರ ಟೇಬಲ್ ದುರಸ್ತಿಗಾಗಿ ₹9,250 ಖರ್ಚು ಮಾಡಲಾಗಿದೆ’ ಎಂದು ನಗರಸಭೆಯ ದಾಖಲೆಗಳು ಹೇಳುತ್ತಿವೆ.

ಈಚೆಗೆ ನಗರಭೆಯಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಮೂರು ತಿಂಗಳ ನಗರಸಭೆಯ ಆದಾಯ ಮತ್ತು ಖರ್ಚಿನ ಬಗ್ಗೆ ಅನುಮೋದನೆ ಪಡೆಯಲು ಸಾಮಾನ್ಯ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮಂಡಿಸಿದ ದಾಖಲೆಗಳು ಹಲವು ಪ್ರಶ್ನೆಗಳನ್ನು ಸೃಷ್ಟಿಸಿವೆ.

‘ಸರ್ಕಾರದ ಮಾರ್ಗಸೂಚಿ ಪ್ರಕಾರ ₹1 ಲಕ್ಷಕಿಂತ ಮೇಲ್ಪಟ್ಟ ಯಾವುದೇ ಸಾಮಗ್ರಿ ಖರೀದಿಸಿಲು ಟೆಂಡರ್ ಕರೆಯಬೇಕು ಎಂಬ ನಿಯಮವಿದೆ. ಆದರೆ, ನಗರಸಭೆಯ ಅಧಿಕಾರಿಗಳು ವಾಮಮಾರ್ಗ ಹಿಡಿದು ₹1 ಲಕ್ಷದ ಒಳಗೆ ಸಾಮಗ್ರಿ ಖರೀದಿಸುವ ನೆಪದಲ್ಲಿ ಕೊಟೇಷನ್ ಮೂಲಕ ವಿದ್ಯುತ್ ಸಾಮಗ್ರಿಗಳನ್ನು ಖರೀದಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ.

ADVERTISEMENT

‘ನಗರದ ಎಲ್ಲಾ ವಾರ್ಡ್‌ಗಳಲ್ಲಿ ಬೀದಿ ದೀಪ ಅಳವಡಿಸಲು ವಿದ್ಯುತ್ ಸಾಮಗ್ರಿ ಅಳವಡಿಸಿದ ಬಿಲ್ ₹94,061. ಅದರಂತೆ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಬೀದಿ ದೀಪಗಳ ನಿರ್ವಹಣೆಗಾಗಿ ವಿದ್ಯುತ್ ಸಾಮಗ್ರಿ ಖರೀದಿಸಿದ ಬಿಲ್ ₹95,327 ಆಗಿದೆ. ಹೀಗೆ ಮೂರು ತಿಂಗಳಲ್ಲಿ ವಿದ್ಯುತ್ ಸಾಮಗ್ರಿ ಖರೀದಿ ಹಾಗೂ ಹಳೆ ಬಿಲ್ ಎಂದು ₹8.29 ಲಕ್ಷ ವೆಚ್ಚವಾಗಿದೆ. ಬಡಾವಣೆಯೊಂದರ ರಸ್ತೆಗೆ ಮರಮ್ ಹಾಕಿಸಿದ ಬಿಲ್ ₹93,930 ಎಂದು ನಮೂದಿಸಿದ್ದಾರೆ. ಹೀಗೆ ವಿವಿಧ ಬಡಾವಣೆಗಳ ರಸ್ತೆಗೆ ಹಾಕಿಸಿದ ಮರಮ್‌ನ ಒಟ್ಟು ಬಿಲ್ ₹13.85 ಲಕ್ಷ ಎಂದು ನಮೂದಿಸಿರುವುದು ಅನುಮಾನ ಮೂಡಿಸುತ್ತೆ’ ಎನ್ನುತ್ತಾರೆ ಅವರು.

‘ಮಹಾತ್ಮ ಗಾಂಧಿ ಜಯಂತಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಪೆಂಡಾಲ್, ಖುರ್ಚಿ ಹಾಗೂ ಮೈಕ್ ಸೆಟ್ ಅಳವಡಿಸಿರುವುದಕ್ಕೆ ₹29,852 ಬಿಲ್ ಮಾಡಲಾಗಿದೆ. ಆದರೆ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಯಾವುದೇ ಕಾರ್ಯಕ್ರಮ ಅಂದು ನಡೆದಿಲ್ಲ ಎಂದು ವಕೀಲರೊಬ್ಬರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಗಾಂಧಿ ಪುತ್ಥಳಿಗೆ ಸುಣ್ಣಬಣ್ಣ, ಲೈಟಿಂಗ್ ಹಾಗೂ ಅಲಂಕಾರ ಮಾಡಿದ ಕಾರ್ಯಕ್ರಮದ ವೆಚ್ಚ ₹20,987 ಆಗಿದೆ. ವಾಸ್ತವವಾಗಿ ಗಾಂಧಿ ಪುತ್ಥಳಿಯು ಗ್ರಾನೈಟ್ ಕಲ್ಲಿನಿಂದ ನಿರ್ಮಿಸಿದ್ದು, ಸುಣ್ಣಬಣ್ಣ ಮಾಡುವ ಪ್ರಶ್ನೆ ಇಲ್ಲ. ಇದು ಜಯಂತಿ ಹೆಸರಿನಲ್ಲಿ ಹಣ ಲಪಟಾಯಿಸುವ ಮಾರ್ಗವಾಗಿದೆ’ ಎಂದು ನಗರದ ನಿವಾಸಿ ಶರಣಪ್ಪ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.