ಯಾದಗಿರಿ: ಎಸ್ಎಸ್ಎಲ್ ಸಿ ಪರೀಕ್ಷೆ 1ರ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಶೇ 51.60 ರಷ್ಟು ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. 7,759 ವಿದ್ಯಾರ್ಥಿಗಳು ಪಾಸಾಗಿದ್ದು, 39 ಜನ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ಜಿಲ್ಲೆಯ ವಿವಿಧ ಶಾಲೆಗಳ 39 ವಿದ್ಯಾರ್ಥಿಗಳು ಡಿಸ್ಟಿಕ್ಷಂನ್ ನಲ್ಲಿ ಪಾಸಾಗಿದ್ದಾರೆ. ಏಳು ಜನರು ಶೇ 99 ರಷ್ಟು, 24 ಜನ 98 ರಷ್ಟು ಹಾಗೂ 8 ವಿದ್ಯಾರ್ಥಿಗಳು ಶೇ 97 ರಷ್ಟು ಫಲಿತಾಂಶ ಪಡೆದಿದ್ದಾರೆ.
ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಮಾರ್ಚ್ ತಿಂಗಳಲ್ಲಿ ಕೊನೆ ಸ್ಥಾನ ಪಡೆದಿತ್ತು. ಪ್ರಸಕ್ತ ಸಾಲಿನಲ್ಲಿ ಒಟ್ಟು 15,036 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 3,138 ಬಾಲಕರು ಹಾಗೂ 4,621 ಬಾಲಕಿಯರು ಸೇರಿ ಒಟ್ಟು 7,759 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ರಾಜ್ಯದಲ್ಲಿ 33ನೇ ಸ್ಥಾನ ಗಳಿಸಿದೆ. ಕಳೆದ ಸಾಲಿನಲ್ಲಿ ಶೇ 54.53ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಯು ರಾಜ್ಯದಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆದರೆ, ಎರಡು ಸ್ಥಾನಗಳು ಮೇಲೇರಿದೆ.
ನಗರದ ಶ್ರೀ ನವನಂದಿ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಶ್ತಾ ಹಾಗೂ ಸುರಪುರ ತಾಲೂಕಿನ ಕವಡಿಮಟ್ಟಿಯ ಅಕ್ಷರ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ವರುಣ ಭಂಡಾರಿ ತಲಾ 622 ಅಂಕಗಳೊಂದಿಗೆ ಶೇ 99.52ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಗೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
ಶಹಾಪುರ ತಾಲ್ಲೂಕಿನಲ್ಲಿ ಶೇ 52.33, ಸುರಪುರ ತಾಲ್ಲೂಕಿನಲ್ಲಿ ಶೆ 47.15, ಯಾದಗಿರಿ ತಾಲ್ಲೂಕಿನಲ್ಲಿ ಶೇ 54.96 ಫಲಿತಾಂಶ ಬಂದಿದೆ.
ಸರ್ಕಾರಿ ಶಾಲೆಗಳಲ್ಲಿ ಶೇ 48.70, ಅನುದಾನ ಸಹಿತ ಶೇ 38.94, ಅನುದಾನ ರಹಿತ ಶೇ 64.71 ಪ್ರತಿಶತ ಫಲಿತಾಂಶ ಬಂದಿದೆ.
ಜಿಲ್ಲೆಯ ಸುರಪುರ ತಾಲ್ಲೂಕಿನ ನಾಲ್ಕು ಶಾಲೆಗಳು ಹಾಗೂ ಶಹಾಪುರ ಮತ್ತು ಯಾದಗಿರಿ ತಾಲ್ಲೂಕಿನ ತಲಾ ಒಂದು ಶಾಲೆಗಳಿಗೆ ಶೇ 100ರಷ್ಟು ಫಲಿತಾಂಶ ಬಂದಿದೆ ಎಂದು ಡಿಡಿಪಿಐ ಸಿ.ಎಸ್.ಮುಧೋಳ ತಿಳಿಸಿದ್ದಾರೆ.
ತನ್ನ ತಂದೆಯ ನಿಧನದ ಶೋಕದ ನಡುವೆಯೂ ಯರಗೋಳ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಕಂಚಗಾರಹಳ್ಳಿಯ ವಿದ್ಯಾರ್ಥಿ ಶ್ರೀಶೈಲ್ ಶೇ 71 ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.