ADVERTISEMENT

ವಲಸಿಗರಿಗೆ ಖಾತರಿ ಕೆಲಸ ಆಸರೆ

ಇಂಗು ಗುಂಡಿ, ಕ್ಷೇತ್ರ ಬದು ನಿರ್ಮಾಣ ಕಾಮಗಾರಿಯಿಂದ ಅನುಕೂಲ

ಟಿ.ನಾಗೇಂದ್ರ
Published 9 ಜುಲೈ 2020, 8:15 IST
Last Updated 9 ಜುಲೈ 2020, 8:15 IST
ಶಹಾಪುರ ತಾಲ್ಲೂಕಿನ ಬಾಣತಿಹಾಳ ಗ್ರಾಮದ ಬಳಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಮಳೆ ನೀರು ಇಂಗಿಸಲು ತೋಡಿರುವ ಇಂಗು ಗುಂಡಿಗಳು
ಶಹಾಪುರ ತಾಲ್ಲೂಕಿನ ಬಾಣತಿಹಾಳ ಗ್ರಾಮದ ಬಳಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಮಳೆ ನೀರು ಇಂಗಿಸಲು ತೋಡಿರುವ ಇಂಗು ಗುಂಡಿಗಳು   

ಶಹಾಪುರ: ಕೊರೊನಾ ಹಾವಳಿ ಕಾರಣ ಮರಳಿದ ಗುಳೆ ಕಾರ್ಮಿಕರಿಗೆ ಹಾಗೂ ತಾಲ್ಲೂಕಿನ ಹಲವಾರು ಹಳ್ಳಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆ ಆಸರೆಯಾಗಿದೆ.

ಮಾರ್ಚ್‌ನಲ್ಲಿ ಆಗಮಿಸಿದ 1,952 ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ನೀಡಲಾಗಿದೆ. ವಡಗೇರಾ ತಾಲ್ಲೂಕಿನಲ್ಲಿ 2,095 ಜನರಿಗೆ ಜಾಬ್ ಕಾರ್ಡ್ ನೀಡಿ ಕೆಲಸ ಒದಗಿಸಲಾಗಿದೆ. ನಾಗನಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು 13,114 ಮಾನವ ದಿನಗಳ ಕೆಲಸವಾಗಿದೆ. ಶಹಾಪುರ ತಾಲ್ಲೂಕಿನ ಪರಿಶಿಷ್ಟ ಜಾತಿಯ 10,528, ಪರಿಶಿಷ್ಟ ಪಂಗಡದ 4,268 ಹಾಗೂ ಇತರ ಸಮುದಾಯದ 28,342 ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗನಾಥಮೂರ್ತಿ ಮಾಹಿತಿ ನೀಡಿದರು.

ಅಧಿಕಾರಿಗಳು ಯೋಜನೆಯ ಕೆಲ ನಿಯಮ ಹಾಗೂ ಷರತ್ತುಗಳನ್ನು ಸಡಿಲಿಸಿ ವಲಸೆ ಕಾರ್ಮಿಕರಿಗೆ ಕೂಲಿ ಕೆಲಸ ನೀಡುವಲ್ಲಿ ಸಹಕರಿಸಿದರು. ಇದರಿಂದ ತುಸು ನೆಮ್ಮದಿ ಮೂಡಿತು. ಕೊರೊನಾ ಲಾಕ್ ಡೌನ್ ನಮಗೆ ವರವಾಗಿ ಪರಿಣಮಿಸಿತು. ಬೇರೆಡೆ ತೆರಳಲು ಅವಕಾಶ ಇರಲಿಲ್ಲ. ದುಡಿಯುವುದೇ ಕಾಯಕವಾಗಿದ್ದರಿಂದ ಕೆಲಸ ಮಾಡಿ ₹20 ಸಾವಿರ ಹಣ ಪಡೆದುಕೊಂಡೆ ಎನ್ನುತ್ತಾರೆ ಬಾಣತಿಹಾಳ ಗ್ರಾಮದ ಕೂಲಿ ಕಾರ್ಮಿಕ ಭೀಮಣ್ಣ ನಾಯ್ಕೋಡಿ.

ADVERTISEMENT

ಕ್ಷೇತ್ರ ಬದು ನಿರ್ಮಾಣ, ಹರಿಯುವ ನೀರಿಗೆ ಒಡ್ಡು, ನಿಂತ ನೀರು ಇಂಗಿಸುವುದು ಎನ್ನುವ ಧ್ಯೇಯದೊಂದಿಗೆ 10 ಅಡಿ ಉದ್ದ, 4 ಅಡಿ ಅಗಲ ಹಾಗೂ 2 ಅಡಿ ಆಳದ ತಗ್ಗು ನಿರ್ಮಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಮಳೆ ನೀರು ಇಂಗಿ ಅಂತರ್ಜಲ ಮಟ್ಟ ಹೆಚ್ಚುವುದು. ಫಲವತ್ತಾದ ಮಣ್ಣು ಕೊಚ್ಚಿ ಹೋಗುವುದನ್ನು ತಡೆದಂತೆಯೂ ಆಗಿದೆ. ಸಂಕಷ್ಟದ ಕಾಲದಲ್ಲಿ ಖಾತರಿ ಕೆಲಸಗಳು ತುಸು ತೃಪ್ತಿದಾಯಕವಾಗಿವೆ. ಇನ್ನು ಮಳೆಗಾಲದಲ್ಲಿಯೂ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎನ್ನುತ್ತಾರೆ ಕೂಲಿ ಕಾರ್ಮಿಕರ ಮುಖಂಡ ದಾವಲಸಾಬ್ ನದಾಫ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.