ಶಹಾಪುರ: ಇಲ್ಲಿನ ಟಿಎಪಿಎಂಎಸ್‌ನ ₹ 2.6 ಕೋಟಿ ಮೌಲ್ಯದ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧನದಲ್ಲಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಇಲ್ಲಿನ ನ್ಯಾಯಾಲಯವು ಮತ್ತೆ ಮೂರು ದಿನ ಪೊಲೀಸರ ವಶಕ್ಕೆ ನೀಡಿದೆ.
ನ್ಯಾಯಾಂಗ ಬಂಧನದಲ್ಲಿದ್ದ ಮಣಿಕಂಠ ರಾಠೋಡ ಅವರನ್ನು ಪೊಲೀಸರು ವಿಚಾರಣೆಗಾಗಿ ಜುಲೈ 20 ರವರೆಗೆ ವಶಕ್ಕೆ ಪಡೆದಿದ್ದರು. ಶನಿವಾರ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯ ಆಗಿದ್ದರಿಂದ ಪೊಲೀಸರು ಶಹಾಪುರ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಅವರ ಮುಂದೆ ಶನಿವಾರ ಹಾಜರುಪಡಿಸಿದರು.
ಆರೋಪಿ ಮಣಿಕಂಠ ರಾಠೋಡ ತನಿಖೆಗೆ ಸಹಕರಿಸುತ್ತಿಲ್ಲ. ಇನ್ನೂ ಮೂರು ದಿನ (ಜುಲೈ23ರವರೆಗೆ) ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ತನಿಖಾಧಿಕಾರಿ ಆಗಿರುವ ಸುರಪುರ ಡಿವೈಎಸ್ಪಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.
ತನಿಖಾಧಿಕಾರಿಯ ಮನವಿಗೆ ನ್ಯಾಯಾಧೀಶರು ಷರತ್ತುಗಳೊಂದಿಗೆ ಮಣಿಕಂಠ ರಾಠೋಡದ ಅವರಿಗೆ ಯಾವುದೇ ತೊಂದರೆ ಹಾಗೂ ಕಿರುಕುಳ ನೀಡಬಾರದು. ನಂತರ ವೈದ್ಯಕೀಯ ತಪಾಸಣೆ ಮಾಡಿ ಹಾಜರು ಪಡಿಸಬೇಕು ಎಂಬ ಷರತ್ತಿನೊಂದಿಗೆ ಅನುಮತಿ ನೀಡಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಮಣಿಕಂಠ ರಾಠೋಡ ಪೊಲೀಸ್ ಕಸ್ಟಡಿ ಅವಧಿ ಶನಿವಾರಕ್ಕೆ ಮುಕ್ತಾಯಗೊಂಡಿತ್ತು. ತನಿಖೆಗೆ ಸಹಕರಿಸದ ಕಾರಣ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಮತ್ತೆ ಮೂರು ದಿವಸ ಆರೋಪಿ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಶಹಾಪುರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಎಂ.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.