ADVERTISEMENT

ಸುರಪುರ; ಕಡಲೆಗಿಡ ವ್ಯಾಪಾರ ಜೋರು

ನಿತ್ಯ 4 ಟನ್ ಬಿಕರಿ; ಬೀದಿ ಬದಿ ವ್ಯಾಪಾರಿಗಳಿಗೆ ಒಳ್ಳೆಯ ಲಾಭ

ಅಶೋಕ ಸಾಲವಾಡಗಿ
Published 23 ಜನವರಿ 2022, 6:23 IST
Last Updated 23 ಜನವರಿ 2022, 6:23 IST
ಸುರಪುರದ ಬಸ್ ನಿಲ್ದಾಣದಲ್ಲಿ ಕಡಲೆಕಾಯಿ (ಹಸಿ ಕಡಲೆ ಗಿಡ) ವಿಲೇವಾರಿ ನಡೆಯುತ್ತಿರುವುದು
ಸುರಪುರದ ಬಸ್ ನಿಲ್ದಾಣದಲ್ಲಿ ಕಡಲೆಕಾಯಿ (ಹಸಿ ಕಡಲೆ ಗಿಡ) ವಿಲೇವಾರಿ ನಡೆಯುತ್ತಿರುವುದು   

ಸುರಪುರ: ಬೆಳಿಗ್ಗೆ 6 ಗಂಟೆಗೆ ಬಸ್‍ನಿಲ್ದಾಣದ ಪ್ರವೇಶದ್ವಾರದಲ್ಲಿ ಕಡಲೆಕಾಯಿ (ಹಸಿ ಕಡಲೆಗಿಡ) ರಾಶಿ ರಾಶಿ ಕಂಡು ಬರುತ್ತದೆ. ಸಗಟು ವ್ಯಾಪಾರಿಗಳಿಂದ ಕೊಳ್ಳಲು ಬೀದಿ ಬದಿ ವ್ಯಾಪಾರಿಗಳ ಗುಂಪು ನೆರೆದಿರುತ್ತದೆ.

8 ಗಂಟೆಯೊಳಗೆ ವ್ಯಾಪಾರ ಮುಗಿಯುತ್ತದೆ. ನಂತರ ಬೀದಿ ಬದಿ ವ್ಯಾಪಾರಿಗಳು ಕಡಲೆಗಿಡದ ವ್ಯಾಪಾರ ಸುರುವಿಟ್ಟುಕೊಳ್ಳುತ್ತಾರೆ. ಈ ದೃಶ್ಯ ನೋಡುವುದೇ ಚೆಂದ.

ದಿನಾಲು 4 ಟನ್ ಕಡಲೆಗಿಡ ಬಿಕರಿಯಾಗುತ್ತದೆ. ಬೀದಿ ಬದಿ ವ್ಯಾಪಾರಿಗಳಿಗೂ ಕಡಲೆಗಿಡ ಒಳ್ಳೆಯ ಆದಾಯ ಕೊಡುತ್ತಿದೆ. ಕಡಲೆಕಾಯಿ ತಿನ್ನುವವರ ಸಂಖ್ಯೆಯೂ ಈ ಭಾಗದಲ್ಲಿ ಅಧಿಕವಾಗಿದೆ. ದೀಪಾವಳಿ ಅಮಾವಾಸ್ಯೆಯ ನಂತರ 2 ರಿಂದ ಎರಡುವರೆ ತಿಂಗಳು ಇದರ ಸೀಸನ್. ಈ ಸಮಯದಲ್ಲಿ ಬೇರೆ ಹಣ್ಣುಗಳ ಆವಕ ಕಡಿಮೆ ಇರುವುದರಿಂದ ಬೀದಿ ಬದಿ ವ್ಯಾಪಾರಿಗಳು ಕಡಲೆಗಿಡ ಮಾರಾಟವನ್ನೆ ನೆಚ್ಚಿಕೊಂಡಿದ್ದಾರೆ.

ADVERTISEMENT

ನಗರದ ಬೋವಿಗಲ್ಲಿ ಮತ್ತು ಡೊಣ್ಣಿಗೇರಿಯ ಹಲವು ಜನರು ಹಣ್ಣು ಮತ್ತು ಕಡಲೆಗಿಡ ಮಾರಾಟಕ್ಕೆ ಪ್ರಸಿದ್ಧರು. ತಾಲ್ಲೂಕಿನ ದೇವಪುರ, ನಗನೂರ ಮತ್ತು ಲಿಂಗಸುಗೂರಿನ ಕೆಲ ಗ್ರಾಮಗಳಲ್ಲಿ ಕಡಲೆ ಗಿಡ ಬೆಳೆಯಲಾಗುತ್ತಿದೆ.

ಸಗಟು ಮಾರಾಟಗಾರರು ಎಕರೆಗೆ ಇಂತಿಷ್ಟು ಎಂದು ಕಡಲೆಗಿಡ ಬೆಳೆದ ಜಮೀನನ್ನು ಗುತ್ತಿಗೆ ಮುಗಿಸುತ್ತಾರೆ. ದಿನಾಲೂ ಸಂಜೆ ಹೊಲಕ್ಕೆ ತೆರಳಿ ಕಡಲೆಗಿಡ ಹರಿದು ಟಾಟಾಎಸ್ ಗಾಡಿಯಲ್ಲಿ ತುಂಬಿಕೊಂಡು ನಗರಕ್ಕೆ ಬೆಳಗಿನ ಜಾವ ಬರುತ್ತಾರೆ. ದಿನಾಲೂ ಕನಿಷ್ಠ 2 ಗಾಡಿಗಳು (4 ಟನ್ ಕಡಲೆ ಗಿಡ) ಹರಿದುತರುತ್ತಾರೆ.

ಸಗಟು ವ್ಯಾಪಾರಿಗಳು 50 ರಿಂದ 60 ದೊಡ್ಡ ಗಂಟುಗಳನ್ನು ಮಾಡಿ ಒಂದು ಗಾಡಿಯಲ್ಲಿ ತುಂಬುತ್ತಾರೆ. ದಿನಾಲೂ 100 ರಿಂದ 120 ದೊಡ್ಡ ಗಂಟುಗಳು ಬರುತ್ತವೆ. ಬೀದಿ ಬದಿ ವ್ಯಾಪಾರಿಗಳು ದೊಡ್ಡ ಗಂಟಿಗೆ ಇಂತಿಷ್ಟು ಎಂದು ಮುಗಿಸಿ ಖರೀದಿಸುತ್ತಾರೆ. ಕೆಲವರು ಸ್ಥಳದಲ್ಲೇ ದುಡ್ಡು ಕೊಟ್ಟರೆ ಇನ್ನು ಕೆಲವರು ಸಂಜೆ ಹಣ ಪಾವತಿಸುವ ರೂಢಿ ಇದೆ.

ಸಗಟು ವ್ಯಾಪಾರಿಗಳು ಒಂದು ಎಕರೆಗೆ ಇಳುವರಿ ನೋಡಿ ₹20 ರಿಂದ 30 ಸಾವಿರದವರೆಗೆ ಗುತ್ತಿಗೆ ಪಡೆದುಕೊಳ್ಳುತ್ತಾರೆ. ಒಂದು ದೊಡ್ಡ ಗಂಟಿಗೆ ₹ 500 ರಿಂದ ₹600ರ ವರೆಗೆ ಮಾರಾಟ ಮಾಡುತ್ತಾರೆ.

ಬೀದಿ ಬದಿ ವ್ಯಾಪಾರಿಗಳು ದೊಡ್ಡ ಗಂಟಿನಲ್ಲಿ ಸಣ್ಣ ಸಣ್ಣ 100 ರಿಂದ 120 ಸೂಡು ಮಾಡುತ್ತಾರೆ. ಒಂದು ಸೂಡು ₹10 ರಿಂದ 20ರ ವರೆಗೆ ಬಿಕರಿಯಾಗುತ್ತದೆ. ಸಂಜೆವರೆಗೆ ₹ 600 ರಿಂದ 800ರ ವರೆಗೆ ಲಾಭ ಮಾಡಿಕೊಳ್ಳುತ್ತಾರೆ. ಸಗಟು ವ್ಯಾಪಾರಿಗಳಿಗೂ ಈ ವ್ಯಾಪಾರ ಸಾಕಷ್ಟು ಲಾಭ ತರುತ್ತಿದೆ.

ಕೆಲವರು ಒತ್ತುವ ಬಂಡಿಯಲ್ಲಿ ಮಾರಾಟ ಮಾಡಿದರೆ, ಇನ್ನೂ ಕೆಲವರು ಬೀದಿ ಬದಿ ಕುಳಿತು ಮಾರುತ್ತಾರೆ. ಹಲವರು ಮನೆ ಮನೆಗೆ ತೆರಳಿ ವ್ಯಾಪಾರ ಮಾಡಿದರೆ ಮತ್ತೆ ಕೆಲವರು ಬಸ್‍ನಲ್ಲಿ ಹತ್ತಿ ಇಲ್ಲವೇ ಕಿಟಕಿಯಲ್ಲಿ ಪ್ರಯಾಣಿಕರಿಗೆ ಮಾರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.