ADVERTISEMENT

ಎಲ್ಲ ಸಂಪತ್ತಿಗಿಂತ ಸಂಸ್ಕಾರ ದೊಡ್ಡದು: ಬಳಿರಾಮ ಮಹಾರಾಜ್

ಬೋರಬಂಡಾ: ಸಂಭ್ರಮದ 12ನೇ ವಾರ್ಷಿಕ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 7:12 IST
Last Updated 20 ನವೆಂಬರ್ 2021, 7:12 IST
ಗುರುಮಠಕಲ್ ಹತ್ತಿರದ ಬೋರಬಂಡಾ ಗ್ರಾಮದ ಶ್ರೀಲಕ್ಷ್ಮೀ ತಿಮ್ಮಪ್ಪ ಬೆಟ್ಟದಲ್ಲಿ 12ನೇ ವಾರ್ಷಿಕ ಜಾತ್ರಾ ಉತ್ಸವದಲ್ಲಿ ಸಂತ ಸೇವಾಲಾಲ್ ಸಂಸ್ಥಾನ ಮಠದ ಬಳಿರಾಮ ಮಹಾರಾಜ್ ಮಾತನಾಡಿದರು
ಗುರುಮಠಕಲ್ ಹತ್ತಿರದ ಬೋರಬಂಡಾ ಗ್ರಾಮದ ಶ್ರೀಲಕ್ಷ್ಮೀ ತಿಮ್ಮಪ್ಪ ಬೆಟ್ಟದಲ್ಲಿ 12ನೇ ವಾರ್ಷಿಕ ಜಾತ್ರಾ ಉತ್ಸವದಲ್ಲಿ ಸಂತ ಸೇವಾಲಾಲ್ ಸಂಸ್ಥಾನ ಮಠದ ಬಳಿರಾಮ ಮಹಾರಾಜ್ ಮಾತನಾಡಿದರು   

ಬೋರಬಂಡಾ (ಗುರುಮಠಕಲ್): ‘ಮನುಷ್ಯ ಜೀವನದಲ್ಲಿ ಅಧಿಕಾರ, ಹಣ, ಕನಕಾದಿ ಸಂಪತ್ತುಗಳನ್ನು ಎಷ್ಟೇ ಗಳಿಸಬಹುದು ಮತ್ತು ಶೇಖರಿಸಿಕೊಳ್ಳಬಹುದು. ಆದರೆ, ಆತನಲ್ಲಿ ಸಂಸ್ಕಾರವೆಂಬ ಸಂಪತ್ತು ಇಲ್ಲವಾದರೆ ಉಳಿದೆಲ್ಲವೂ ಶೂನ್ಯವೇ ಆಗುತ್ತವೆ. ಆದ್ದರಿಂದ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವ ಜವಾಬ್ದಾರಿ ನಮ್ಮದು’ ಎಂದು ಬಳಿರಾಮ ಮಹಾರಾಜ್ ಸಲಹೆ ನೀಡಿದರು.

ಗ್ರಾಮದ ಹೊರವಲಯದ ಶ್ರೀಲಕ್ಷ್ಮೀ ತಿಮ್ಮಮ್ಮ ದೇವಸ್ಥಾನದ 12ನೇ ವಾರ್ಷಿಕ ಜಾತ್ರಾ ಮಹೋತ್ಸವದ ಧಾರ್ಮಿಕ ಸಂದೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಬಂಜಾರ ಸಮುದಾಯ ತನ್ನದೇ ಆದ ಇತಿಹಾಸ ಹಾಗೂ ಸಂಸ್ಕೃತಿ ಹೊಂದಿದೆ. ಕಷ್ಟಪಟ್ಟು ದುಡಿದು ತಿನ್ನುವ ಸಮುದಾಯ. ಅದರಂತೆ ಸ್ವಾಭಿಮಾನದಿಂದ ಬದುಕೋಣ’ ಎಂದು ಸಲಹೆ ನೀಡಿದರು.

ಬಾಗಲಕೋಟೆಯ ಕುಮಾರ ಮಹರಾಜ್ ಮಾತನಾಡಿ,‘ನಮ್ಮ ಸಮುದಾಯದ ಯುವಕರು ಪ್ರಾಕೃತಿಕವಾಗಿಯೇ ಉತ್ತಮ ಆರೋಗ್ಯ, ಬಲಿಷ್ಠ ಶರೀರ ಹೊಂದಿರುತ್ತಾರೆ. ಆದರೆ, ದುಶ್ಚಟಗಳಿಗೆ ದಾಸರಾಗುವ ಮೂಲಕ ಶರೀರ ಮತ್ತು ಸಂಸ್ಕೃತಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಕಲಬುರಗಿ ಸಂಸದ ಡಾ.ಉಮೇಶ ಜಾಧವ ಅವರು ಮಾತನಾಡಿ‘ನಾನು ಸಂಸದನಾದ ನಂತರ ಪ್ರತಿ ತಾಂಡಾದಲ್ಲೂ ₹25 ಲಕ್ಷ ಅನುದಾನದಲ್ಲಿ ಬೀದಿ ದೀಪಗಳ ಅಳವಡಿಕೆ ಸೇರಿ ಹಲವು ಕೆಲಸಗಳನ್ನು ಮಾಡಿದ್ದೇನೆ. ದೇಶದ ರಾಜಧಾನಿಯಲ್ಲಿ ಸಂತ ಸೇವಾಲಾಲರ ಜಯಂತಿ ನಡೆಸಿದ್ದು ಸಂತಸದ ವಿಷಯ. ಮುಂದಿನ ದಿನಗಳಲ್ಲಿಯೂ ದೆಹಲಿಯಲ್ಲಿ ಬಂಜಾರ ಸಮುದಾಯದ ಗುರು ಸಂತ ಸೇವಾಲಾಲ ಮಹಾರಾಜರ ಜಯಂತಿ ಆಚರಿಸಲಾಗುವುದು’ ಎಂದರು.

ಧಾರ್ಮಿಕ ಕಾರ್ಯಕ್ರಮಗಳು: ದೇವಸ್ಥಾನದ ಜಾತ್ರೆಯ ಅಂಗವಾಗಿ ಪಲ್ಲಕ್ಕಿ ಸೇವೆ, ಕಾರ್ತೀಕ ದೀಪ, ಶಿಖರ ಸ್ಥಾಪನೆ, ಕಳಸಾರೋಹಣ, ವಿಶೇಷ ಅಭಿಷೇಕ, ಆಲಂಕಾರ ಸೇವೆ, ಭಜನೆ ಮತ್ತು ಕೀರ್ತನಾ ಸೇವೆ, ಕಲ್ಯಾಣೋತ್ಸವ, ರಥೋತ್ಸವ, ಪ್ರಸಾದ ಸೇವೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಹಾಮಂಗಳಾರತಿ ಮೂಲಕ ಕಾರ್ಯಕ್ರಮ ಸಮಾರೋಪಗೊಂಡಿತು.

ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು, ಪಂಚಮ ಸಿದ್ದಲಿಂಗ ಶ್ರೀಗಳು, ಮುರಾರಿ ಮಹಾರಾಜ್, ಜೇಮ್ ಸಿಂಗ್ ಮಹಾರಾಜ್, ಪರ್ವತಲಿಂಗ ಮಹಾರಾಜ್, ಸಿದ್ದಲಿಂಗ ಶ್ರೀಗಳು, ವಿಠ್ಠಲ್ ಮಹಾರಾಜ್, ಚಂದ್ರಾಮ ಮಹಾರಾಜ್, ಅನೀಲ್, ದೇವಿದಾಸ ಮಹಾರಾಜ್, ಲತಾದೇವಿ ಮಾ, ಶಾಂತಾದೇವಿ ಮಾ, ಶರಣು ಆವಂಟಿ, ಅನಂತಪ್ಪ ಬೋಯಿನ್, ಸುರೇಶ ಚಿನ್ನಾ ರಾಠೋಡ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.