ADVERTISEMENT

ಸೈದಾಪುರ: ಉಪ ತಹಶೀಲ್ದಾರ್‌ ಕಚೇರಿಗೆ ನುಗ್ಗಿದ ಮಳೆ ನೀರು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 16:48 IST
Last Updated 30 ಆಗಸ್ಟ್ 2021, 16:48 IST
ಸೈದಾಪುರ ಪಟ್ಟಣದ ಉಪ ತಹಶೀಲ್ದಾರ್ ಕಚೇರಿ ಮತ್ತು ನೆಮ್ಮದಿ ಕೇಂದ್ರ ಆವರಣದಲ್ಲಿ ಮಳೆಯಿಂದಾಗಿ ನೀರು ನಿಂತಿರುವುದು
ಸೈದಾಪುರ ಪಟ್ಟಣದ ಉಪ ತಹಶೀಲ್ದಾರ್ ಕಚೇರಿ ಮತ್ತು ನೆಮ್ಮದಿ ಕೇಂದ್ರ ಆವರಣದಲ್ಲಿ ಮಳೆಯಿಂದಾಗಿ ನೀರು ನಿಂತಿರುವುದು   

ಸೈದಾಪುರ: ಸೋಮವಾರ ಬೆಳಗಿನ ಜಾವದಲ್ಲಿ ಸುರಿದ ಧಾರಾಕಾರ ಮಳೆಗೆ ಸೈದಾಪುರ ಪಟ್ಟಣ ಅಕ್ಷರಶಃ ಕೆರೆಯಾಗಿ ಪರಿವರ್ತನೆಗೊಂಡಿದೆ. ಈ ಸಮಸ್ಯೆ ಬಹಳ ದಿನಗಳಿಂದ ಕಾಡುತ್ತಿದ್ದರೂ ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಿಗ್ಗೆ ಸುರಿದ ಮಳೆಯಿಂದಾಗಿ ಪಟ್ಟಣದ ತಗ್ಗು ಪ್ರದೇಶದ ಜನವಸತಿ ಕೇಂದ್ರಗಳಾದ ಲಕ್ಷ್ಮೀನಗರ, ತಾಯಿ ಕಾಲೊನಿ, ಗಂಗಾನಗರ ಸೇರಿದಂತೆ ಹಲವು ಪ್ರದೇಶದ ಮನೆಗಳಿಗೆ ಚರಂಡಿ ನೀರು ನುಗ್ಗಿದೆ.

ಇಲ್ಲಿನ ನಾಗರಿಕರು ಮಳೆಯಲ್ಲಿಯೇ ಮನೆಗಳಿಗೆ ನುಗ್ಗುವ ನೀರನ್ನು ತಡೆಯುವುದಕ್ಕೆ ಹರಸಾಹಸಪಟ್ಟರು. ಸ್ಥಳಕ್ಕೆ ಯಾವೊಬ್ಬ ಅಧಿಕಾರಿಗಳೂ ಆಗಮಿಸದೆ ಇರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ADVERTISEMENT

ಉಪ ತಹಶೀಲ್ದಾರ್ ಕಚೇರಿ ಮತ್ತು ನೆಮ್ಮದಿ ಕೇಂದ್ರಕ್ಕೆ ನುಗ್ಗಿದ ನೀರು:

ನೆಮ್ಮದಿ ಕೇಂದ್ರದ ಕಚೇರಿಗೆ ಮಳೆ ನೀರು ನುಗ್ಗಿ ಬಾಗಿಲು ಮುಚ್ಚಲಾಗಿದೆ. ಇದರಿಂದ ಕಚೇರಿಯಲ್ಲಿನ ದಾಖಲೆಗಳು ಹಾಳಾಗುವಂತಾಗಿದೆ. ಮಳೆಯಿಂದಾಗಿ ಸಿಬ್ಬಂದಿಗೆ ರಜೆ ದೊರೆತಂತಾಗಿದೆ. ಇದರಿಂದಾಗಿ ಸಿಬ್ಬಂದಿ ಕಾರ್ಯನಿರ್ವಹಿಸದೆ ಇರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಸುತ್ತಲು ನೀರು ಆವರಿಸಿ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತಮ್ಮ ಮನೆಗಳಿಗೆ ಹೋಗುವ ಜನ ಪರಿತಪಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.