ADVERTISEMENT

ಹುಣಸಗಿ: ಪ್ರೌಢಶಾಲೆ ಕಟ್ಟಡದಲ್ಲೇ ಪದವಿ ಕಾಲೇಜು!

ಹುಣಸಗಿ: ಸೂಕ್ತ ಕಟ್ಟಡವಿಲ್ಲದೆ ಪದವಿ ವಿದ್ಯಾರ್ಥಿಗಳ ಪರದಾಟ, ₹2 ಕೋಟಿ ಮೀಸಲಿಟ್ಟರೂ ಜಾಗದ ಸಮಸ್ಯೆ

ಭೀಮಶೇನರಾವ ಕುಲಕರ್ಣಿ
Published 25 ನವೆಂಬರ್ 2021, 2:29 IST
Last Updated 25 ನವೆಂಬರ್ 2021, 2:29 IST
ಹುಣಸಗಿ ಪಟ್ಟಣದ ಪ್ರೌಢಶಾಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚಾವಣಿ ಶಿಥಿಲವಾಗಿ ಬೀಳುವ ಹಂತದಲ್ಲಿರುವುದು
ಹುಣಸಗಿ ಪಟ್ಟಣದ ಪ್ರೌಢಶಾಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚಾವಣಿ ಶಿಥಿಲವಾಗಿ ಬೀಳುವ ಹಂತದಲ್ಲಿರುವುದು   

ಹುಣಸಗಿ: ಗ್ರಾಮೀಣ ಭಾಗದ ಮಕ್ಕಳಿಗೂ ಉನ್ನತ ಶಿಕ್ಷಣ ಸೌಲಭ್ಯ ದೊರೆಯಬೇಕು ಎಂದು ಹುಣಸಗಿ ಪಟ್ಟಣದಲ್ಲಿ ಪದವಿ ಕಾಲೇಜು ಆರಂಭಿಸಲಾಯಿತು. ಆದರೆ, ಅದಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಮಾತ್ರ ಸರ್ಕಾರ ಹಾಗೂ ಜನಪ್ರತಿನಿಧಿಗಳಿಂದ ಇಂದಿಗೂ ಸಾಧ್ಯವಾಗಿಲ್ಲ. ಇದರಿಂದಾಗಿ ತೊಂದರೆ ಪಡುವಂತಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಾರೆ.

ಕಳೆದ 2013-14 ರಲ್ಲಿಯೇ ಅಂದಿನ ಸರ್ಕಾರ ಹುಣಸಗಿ ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಆರಂಭಿಸಿ ಬಿಎ, ಬಿಕಾಂ ಪದವಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಸೂಕ್ತ ಕಟ್ಟಡವಿಲ್ಲದೇ ಇಂದಿಗೂ ಸರ್ಕಾರಿ ಪ್ರೌಢಶಾಲೆಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿಯೇ ಪದವಿ ಕಾಲೇಜು ನಡೆಸಲಾಗುತ್ತಿದೆ.

‘ಬಿಎ ಪ್ರಥಮ ವರ್ಷಕ್ಕೆ 236 ಹಾಗೂ ಬಿಕಾಂ ಪ್ರಥಮ ವರ್ಷಕ್ಕೆ 51 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅಲ್ಲದೇ 3 ನೇ ಸೆಮಿಸ್ಟರ್‌ನಲ್ಲಿ 61, 5ನೇ ಸೆಮಿಸ್ಟರ್‌ನಲ್ಲಿ 95 ಹಾಗೂ ಬಿಕಾಂ 3 ನೇ ಸೆಮಿಸ್ಟರ್‌ನಲ್ಲಿ 24 ಹಾಗೂ 5 ನೇ ಸೆಮಿಸ್ಟರ್‌ನಲ್ಲಿ 38 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಬಹುತೇಕ ಎಲ್ಲ ಮಕ್ಕಳು ಹಿಂದುಳಿದ ಕುಟುಂಬದಿಂದಲೇ ಬಂದಿದ್ದವರಾಗಿದ್ದಾರೆ’ ಎಂದು ಕಾಲೇಜಿನ ಪ್ರಚಾರ್ಯ ಚನ್ನಬಸಯ್ಯ ಹಿರೇಮಠ ಮಾಹಿತಿ ನೀಡಿದರು.

ADVERTISEMENT

‘ಕಟ್ಟಡವೇ ಇಲ್ಲದಿರುವುದರಿಂದಾಗಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳೂ ಇಲ್ಲವಾಗಿದೆ’ ಎಂದು ವಿದ್ಯಾರ್ಥಿಗಳಾದ ಭಾಗ್ಯಶ್ರೀ ದೇಸಾಯಿ, ಅಯ್ಯನಗೌಡ ಹಬ್ಬಾಳ ದೂರಿದರು.

ಈ ಕಾಲೇಜಿನ ಕಚೇರಿಗೆ ಹೋಗುವ ಆವರಣದಲ್ಲಿಯೇ ಶಿಥಿಲ ಕಟ್ಟಡದ ಕಟ್ಟಿಗೆ ಕುಸಿದು ಬಿದ್ದಿದ್ದು, ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿ ಇವೆ. ಇದರಿಂದಾಗಿ ಇಲ್ಲಿ ಪಾಠ ಕೇಳಲು ಆಗಮಿಸುವ ವಿದ್ಯಾರ್ಥಿಗಳು ಜೀವ ಭಯದಲ್ಲಿಯೇ ಸಂಚರಿಸುವಂತಾಗಿದೆ. ಈ ಕಟ್ಟಡವನ್ನು ನೆಲಸಮ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳಾದ ಮಲ್ಲಪ್ಪ ಮಂಜಲಾಪುರ, ಜಟ್ಟೆಪ್ಪ ತಿಳಿಸಿದರು.

ಸ್ಥಳದ ಸಮಸ್ಯೆ: ಪದವಿ ಕಾಲೇಜು (ಹೆಚ್ಚುವರಿ ಕೋಣೆ) ಕಟ್ಟಡ ನಿರ್ಮಾಣಕ್ಕಾಗಿ ಕಳೆದ ಮೂರು ವರ್ಷಗಳ ಹಿಂದೆಯೇ ₹2 ಕೋಟಿ ಹಣ ಮೀಸಲಿರಿಸಲಾಗಿದೆ. ಆದರೆ, ಕಟ್ಟಡಕ್ಕೆ ಸ್ಥಳದ ಸಮಸ್ಯೆ ಇದೆ. ಈಗಾಗಲೇ ಪಟ್ಟಣದ ಹೊರವಲಯದಲ್ಲಿ ಲಭ್ಯವಿರುವ ಸ್ಥಳದಲ್ಲಿ 2 ಎಕರೆ ಜಾಗ ಮೀಸಲಿರಿಸಲಾಗಿದೆ. ಆದರೆ, ಪಟ್ಟಣದಿಂದ ಈ ಸ್ಥಳ ದೂರವಾಗುತ್ತಿದೆ ಎನ್ನುವ ಕಾರಣಕ್ಕೆ ಅಲ್ಲಿ ಕಟ್ಟಡ ನಿರ್ಮಾಣ ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ.

ಪ್ರಥಮ ದರ್ಜೆ ಕಾಲೇಜಿನಲ್ಲಿ 7 ಜನ ಸಹಾಯಕ ಪ್ರಾಧ್ಯಾಪಕರು, 12 ಜನ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, 5 ಜನ ಸಿಬ್ಬಂದಿ ಇದ್ದಾರೆ.ಪ್ರಥಮ ದರ್ಜೆ ಸಹಾಯಕರು, ಗ್ರಂಥಪಾಲಕರು ಹಾಗೂ ದೈಹಿಕ ನಿರ್ದಶೇಕರ ಹುದ್ದೆ ಸ್ಥಾನ ಖಾಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.