ADVERTISEMENT

ಸ್ಪರ್ಶ ಕುಷ್ಠ ಅರಿವು ಆಂದೋಲನ 30 ರಿಂದ

ಫೆ.13ರವರೆಗೆ ದೇಶಾದ್ಯಂತ ನಡೆಯುವ ಕಾರ್ಯಕ್ರಮ: ಸೋಮನಾಳ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 9:38 IST
Last Updated 29 ಜನವರಿ 2020, 9:38 IST
ಕುಷ್ಠರೋಗ ಜಾಗೃತಿ ಅಭಿಯಾನದ ಮತ್ತು ಪ್ರತಿಜ್ಞಾವಿಧಿಯನ್ನು ಒಳಗೊಂಡ ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು
ಕುಷ್ಠರೋಗ ಜಾಗೃತಿ ಅಭಿಯಾನದ ಮತ್ತು ಪ್ರತಿಜ್ಞಾವಿಧಿಯನ್ನು ಒಳಗೊಂಡ ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು   

ಯಾದಗಿರಿ: ಸ್ಪರ್ಶ ಕುಷ್ಠ ಅರಿವು ಆಂದೋಲನ-2020 ರ ಕಾರ್ಯಕ್ರಮವನ್ನು ಜನವರಿ 30ರಿಂದ ಫೆಬ್ರುವರಿ 13ರವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಎಸ್.ಸೋಮನಾಳ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸ್ಪರ್ಶ ಕುಷ್ಠ ಅರಿವು ಆಂದೋಲನ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗುತ್ತಿದ್ದು, ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತಿದೆ. ಜ.30ರಂದು ಜಿಲ್ಲಾಧಿಕಾರಿಗಳು ಕಾರ್ಯಕ್ರಮ ಉದ್ಘಾಟಿಸಿ ಸಂದೇಶ ನೀಡುವರು ಎಂದರು.

ಜಿಲ್ಲೆಯ 123 ಗ್ರಾಮ ಪಂಚಾಯಿತಿಗಳ ಗ್ರಾಮಗಳಲ್ಲಿ ಗ್ರಾಮ ಸಭೆಗಳನ್ನು ನಡೆಸಿ, ಆಯಾ ಗ್ರಾಮ ಪಂಚಾಯತಿ ಅಧ್ಯಕರು ಕುಷ್ಠರೋಗ ನಿರ್ಮೂಲನೆ ಬಗ್ಗೆ ಸಾರ್ವಜನಿಕರಲ್ಲಿ ಮನವಿ ಮಾಡುವರು. ಕುಷ್ಠ ರೋಗ ನಿರ್ಮೂಲನೆಗೆ ಮಹಾತ್ಮ ಗಾಂಧಿಯವರ ಕೊಡುಗೆ ಬಗ್ಗೆ ಪಾತ್ರಾಭಿನಯ ಕಾರ್ಯಕ್ರಮ ಮಾಡಲಾಗುವುದು. ಸಪ್ನಾ-ರೋಲ್ ಪ್ಲೇ, ಕುಷ್ಠರೋಗದ ಬಗ್ಗೆ ಪ್ರಶ್ನೋತ್ತರ ಕಾರ್ಯಕ್ರಮ, ಜಿಲ್ಲೆಯಾದ್ಯಂತ ಐಇಸಿ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.

ADVERTISEMENT

ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಡಿಟಿ ಚಿಕಿತ್ಸೆ ಉಚಿತವಾಗಿ ಲಭ್ಯವಿರುತ್ತದೆ. ಶೀಘ್ರರೋಗ ಪತ್ತೆ ಮಾಡಿ ಗುಣಪಡಿಸುವುದರಿಂದ ಅಂಗವಿಕಲತೆ ತಡೆಗಟ್ಟಬಹುದು. ಅಲ್ಲದೆ ಕುಷ್ಠರೋಗ ಮುಕ್ತರನ್ನಾಗಿಸಬಹುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಏಪ್ರಿಲ್-2019 ರಿಂದ ಇಲ್ಲಿಯವರೆಗೆ 66 ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗಿದೆ. 2019-20ನೇ ಸಾಲಿನಲ್ಲಿ ಎರಡು ಜನರಿಗೆ ಆರ್‌ಸಿಎಸ್ (ಶಸ್ತ್ರಚಿಕಿತ್ಸೆ) ಮಾಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಒಬ್ಬರಿಗೆ ಆರ್‌ಸಿಎಸ್(ಶಸ್ತ್ರಚಿಕಿತ್ಸೆ) ಮಾಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಭಗವಂತ ಅನವಾರ ಮಾತನಾಡಿ, ಕುಷ್ಠರೋಗದ ನಿರ್ಮೂಲನೆಗೆ ಒಂದು ಮತ್ತು ಎರಡು ವರ್ಷ ಅವಧಿಯ ಚಿಕಿತ್ಸೆ ಇರುತ್ತದೆ. 2018-19ನೇ ಸಾಲಿನಲ್ಲಿ 52 ಜನ ಕುಷ್ಠರೋಗ ಹೊಂದಿದವರನ್ನು ಗುರುತಿಸಿ ಅದರಲ್ಲಿ 40 ಜನರಿಗೆ ಯಶಸ್ವಿ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪಾದಗಳ ದೌರ್ಬಲ್ಯ, ಬೆರಳುಗಳ ದೌರ್ಬಲ್ಯ, ಕಣ್ಣು ಮುಚ್ಚುವಲ್ಲಿ ತೊಂದರೆ, ದೇಹದ ಮೇಲೆ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು, ತ್ವಚೆಯ ಮೇಲೆ ಕೆಂಪಾದ ಬಾವು, ನೋವಿನಿಂದ ಕೂಡಿದ ಹಗ್ಗದ ಹಾಗೆ ಊದಿಕೊಂಡ ನರಗಳು ಇವುಗಳಲ್ಲಿ ಯಾವುದೇ ಚಿಹ್ನೆಗಳು ಕಂಡುಬಂದಲ್ಲಿ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಿ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿ ಲಭ್ಯವಿದೆ ಎಂದು ಮಾಹಿತಿ
ನೀಡಿದರು.

ಕುಷ್ಠರೋಗ ಜಾಗೃತಿ ಅಭಿಯಾನದ ಮತ್ತು ಪ್ರತಿಜ್ಞಾವಿಧಿಯನ್ನು ಒಳಗೊಂಡ ಭಿತ್ತಿಪತ್ರಗಳನ್ನು ಈ ವೇಳೆ ಬಿಡುಗಡೆ ಮಾಡಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಿರಿಯ ಆರೋಗ್ಯ ಸಹಾಯಕ ಶರಣಯ್ಯ ಸ್ವಾಮಿ, ಶರಣಬಸವ ಹೊಸಮನಿ ಇದ್ದರು.

***

ಆಂದೋಲನ ಅವಧಿಯಲ್ಲಿ ಆಶಾ ಮತ್ತು ಕಿರಿಯ ಆರೋಗ್ಯ ಸಹಾಯಕರು ಸಮೀಕ್ಷೆ ನಡೆಸಿ ಕುಷ್ಠ ರೋಗಿಗಳನ್ನು ಗುರುತಿಸಲಿದ್ದು, ಬಳಿಕ ಇವರಿಗೆ ಚಿಕಿತ್ಸೆ ನೀಡಲಾಗುತ್ತದೆ.
-ಶಂಕರಗೌಡ ಎಸ್.ಸೋಮನಾಳ, ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.