ADVERTISEMENT

‘ವಚನಗಳ ಸಾರದಂತೆ ನಡೆದರೆ ಜೀವನಕ್ಕೆ ಅರ್ಥ’

ಜಿಲ್ಲಾಡಳಿತದಿಂದ ದಲಿತ ವಚನಕಾರರ ಜಯಂತ್ಯುತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 10:32 IST
Last Updated 22 ಫೆಬ್ರುವರಿ 2020, 10:32 IST
ಯಾದಗಿರಿಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ದಲಿತ ವಚನಕಾರರ ಜಯಂತಿ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ ರಜಪೂತ ಉದ್ಘಾಟಿಸಿದರು
ಯಾದಗಿರಿಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ದಲಿತ ವಚನಕಾರರ ಜಯಂತಿ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ ರಜಪೂತ ಉದ್ಘಾಟಿಸಿದರು   

ಯಾದಗಿರಿ: ಅನೇಕ ಶರಣರು ಜನ್ಮವೆತ್ತಿದ ಈ ಕರುನಾಡಿನಲ್ಲಿ ಹುಟ್ಟಿದವರೇ ಪುಣ್ಯವಂತರು. ದಲಿತ ವಚನಕಾರರಾದ ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಚನ್ನಯ್ಯ, ಉರಿಲಿಂಗಪೆದ್ದಿ, ಮಾದಾರ ಧೂಳಯ್ಯ ಅವರ ವಚನಗಳ ಸಾರದಂತೆ ನಡೆದಾಗ ನಮ್ಮ ಜೀವನಕ್ಕೆ ಅರ್ಥ ಬರುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದಲಿತ ವಚನಕಾರರ ಜಯಂತ್ಯುತ್ಸವ ಸಮಿತಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ದಲಿತ ವಚನಕಾರರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಎಲ್ಲಾ ಶರಣರು ಸರಳವಾದ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದರು. ಎಲ್ಲರೂ ಸಮಾನರೆಂದು ಕೇವಲ ಮಾತಿನಲ್ಲಿ ಹೇಳದೆ ಆಚರಣೆಗೆ ತರುವ ಮೂಲಕ ತೋರಿಸಿಕೊಟ್ಟರು. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಸುಬಮ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಗುರುಪ್ರಸಾದ ವೈದ್ಯ ಉಪನ್ಯಾಸ ನೀಡಿ, ಬಸವಣ್ಣನವರು ಇಷ್ಟಲಿಂಗ ಅನುಗ್ರಹಿಸಿದ್ದರಿಂದ ಕೆಳವರ್ಗದಲ್ಲಿ ಹುಟ್ಟಿದ ಕರ್ಮ ದೂರಾಯಿತು ಎಂದು ಹೇಳಿಕೊಳ್ಳುವ ಡೋಹರ ಕಕ್ಕಯ್ಯನವರ ‘ಅಭಿನವ ಮಲ್ಲಿಕಾರ್ಜುನ’ ಎಂಬ ಅಂಕಿತನಾಮದಲ್ಲಿ 6 ವಚನಗಳು ಲಭ್ಯವಾಗಿವೆ. ಅಧ್ಯಾತ್ಮ ಮತ್ತು ವೈಜ್ಞಾನಿಕ ವಿಚಾರವನ್ನು ಮೇಳೈಸುವ ಅಂಶಗಳು ಇವರ ವಚನಗಳಲ್ಲಿ ಕಂಡುಬರುತ್ತವೆ ಎಂದು ತಿಳಿಸಿದರು.

ಸಮಾಜದಲ್ಲಿ ಸಮಾನತೆಯನ್ನು ಸಾಧಿಸಲು ಹೊರಟ ಬಸವಣ್ಣನವರಿಗೆ ಸಮಗಾರ ಹರಳಯ್ಯನವರು ಬೆಂಬಲವಾಗಿ ನಿಂತವರು. ಅಂತರ್ಜಾತಿ ವಿವಾಹದಿಂದ ಜಾತೀಯತೆ ತೊಡೆದು ಹಾಕಲು ಸಾಧ್ಯ ಎಂಬುದಾಗಿ ಸಾರಿದರು. ಇನ್ನು ಮಾದಾರ ಚನ್ನಯ್ಯನವರ ವಚನಗಳಲ್ಲಿ ದಲಿತ ಸಂವೇದನೆ, ಸಾಮಾಜಿಕ ಕಳಕಳಿಯನ್ನು ಕಾಣಬಹುದು ಎಂದರು.

ಪ್ರಸ್ತುತ ಹರಿಜನ ಶಿವಭಕ್ತರ ಅನೇಕ ಮಠಗಳು ರಾಜ್ಯದಲ್ಲಿದ್ದು, ಅವರ 366 ವಚನಗಳು ದೊರೆತಿವೆ. ಮಾದಾರ ಧೂಳಯ್ಯನವರು ಕಲ್ಯಾಣದಲ್ಲಿ ಚರ್ಮವನ್ನು ಹದ ಮಾಡಿ ಪಾದರಕ್ಷೆ ಹೊಲೆಯುವ ಕಾಯಕ ಮಾಡುತ್ತಿದ್ದರು. ‘ಕಾಮಧೂಮ ಧೂಳೇಶ್ವರ’ ಅಂಕಿತನಾಮದಿಂದ 106 ವಚನಗಳನ್ನು ರಚಿಸಿದ್ದಾರೆ. ಇವರ ಬಹುಪಾಲು ವಚನಗಳು ಕಾಯಕದ ಮಹತ್ವ ಹಾಗೂ ಭಕ್ತಿಯ ಸ್ವರೂಪಗಳನ್ನು ಸಾರುತ್ತವೆ ಎಂದು ವಿವರಿಸಿದರು.

ಸಮಾಜದ ಮುಖಂಡ ಖಂಡಪ್ಪ ದಾಸನ್ ಮಾತನಾಡಿ, 12ನೇ ಶತಮಾನದಲ್ಲಿ ಮಹಾತ್ಮ ಬಸವೇಶ್ವರರಿಂದ ದಲಿತ ವಚನಕಾರರಿಗೆ ಶಿಕ್ಷಣ ಪ್ರಾಪ್ತವಾಯಿತು. ಇದರಿಂದ ಅಸಮಾನತೆಯ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಯಿತು. ಅದೇ ರೀತಿ ಆಧುನಿಕ ಯುಗದಲ್ಲಿ ಸಂವಿಧಾನ ನೀಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಎಲ್ಲರಿಗೂ ಸಮಾನತೆಯನ್ನು ಕಲ್ಪಿಸಿದ್ದಾರೆ. ಪ್ರತಿಯೊಬ್ಬರೂ ಸಂವಿಧಾನದ ಆಶಯದಂತೆ ನಡೆಯುತ್ತಾ, ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶರಣರ ಪುಸ್ತಕ, ವಚನಗಳನ್ನು ಓದಲು ತಿಳಿಸಬೇಕು ಎಂದು ಹೇಳಿದರು.

ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್.ಚನ್ನಬಸಪ್ಪ, ಸಮಾಜದ ಮುಖಂಡ ಮರೆಪ್ಪ ಚಟ್ಟರಕರ, ವಕೀಲ ಶಾಂತಪ್ಪ ಖಾನಳ್ಳಿ, ಗೋಪಾಲ ದಾಸನಕೇರಿ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಸೈದಾಪುರ ಡಿ.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಗಿಮಠ ನಿರೂಪಿಸಿದರು.

***

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆವೇಳೆಶರಣರ ಸಮಾನತೆಯ ತತ್ವ- ಸಿದ್ಧಾಂತ ಅಳವಡಿಸಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು. ಸಮಾನತೆಯ ಸಂವಿಧಾನ ರಚನೆಗೆ ಶರಣರ ವಚನಗಳು ಕೂಡ ಪ್ರೇರಣೆ
ಪ್ರಕಾಶ್ ಜಿ.ರಜಪೂತ,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.