ADVERTISEMENT

ಕಠಿಣ ಕ್ರಮ ಕೈಗೊಳ್ಳಲು ಆಗ್ರಹ

ಕ್ವಾರಂಟೈನ್‌ ಕೇಂದ್ರಗಳಲ್ಲಿ ಪಾಲನೆಯಾಗದ ನಿಯಮ: ಆರೋಪ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 15:33 IST
Last Updated 2 ಜೂನ್ 2020, 15:33 IST
ಗುರುಮಠಕಲ್ ಜಯ ಕರ್ನಾಟಕ ಸಂಘಟನೆ ವತಿಯಿಂದ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು
ಗುರುಮಠಕಲ್ ಜಯ ಕರ್ನಾಟಕ ಸಂಘಟನೆ ವತಿಯಿಂದ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು   

ಯಾದಗಿರಿ: ಗುರುಮಠಕಲ್ ತಾಲ್ಲೂಕಿನ ದಿಗ್ಬಂಧನ ಕೇಂದ್ರಗಳಲ್ಲಿ (ಕ್ವಾರಂಟೈನ್ ಸೆಂಟರ್) ಕಟ್ಟುನಿಟ್ಟಿನ ನಿಬಂಧನೆಗಳನ್ನು ಪಾಲಿಸದೆ ಇರುವುದರಿಂದ ತಾಲ್ಲೂಕಿನಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗುರುಮಠಕಲ್ ಜಯ ಕರ್ನಾಟಕ ಸಂಘಟನೆ ಒತ್ತಾಯಿಸಿದೆ.

ಈ ಕುರಿತು ತಹಶೀಲ್ದಾರ್‌ ಮೂಲಕ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು,ಲಿಂಗೇರಿ ಶಾಲೆಯ ಕ್ವಾರಂಟೈನ್ ಕೇಂದ್ರದಿಂದ ಗುರುಮಠಕಲ್ ತಾಲ್ಲೂಕಿನ ವಿವಿಧ ಗ್ರಾಮದ ಜನರನ್ನು ಕೋವಿಡ್–19 ವರದಿ ಬರುವ ಮುಂಚೆಯೇ ಬಿಡುಗಡೆ ಮಾಡಲಾಗಿದೆ. ಹೀಗೆ ಬಿಡುಗಡೆಗೊಂಡ ಜನರ ವೈದ್ಯಕೀಯ ಪರೀಕ್ಷಾವರದಿ ಪಾಸಿಟಿವ್ ಬಂದಿದೆ. ಇದು ಆಡಳಿತದಲ್ಲಿನ ಲೋಪದೋಷಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುಮಠಕಲ್ ತಾಲ್ಲೂಕಿನಾದ್ಯಂತ ವ್ಯಾಪಕವಾಗಿ ಕೋವಿಡ್ ಸೋಂಕು ಹರಡಲು ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ಹೊರ ರಾಜ್ಯ, ಹೊರ ದೇಶಗಳಿಂದ ಬಂದವರನ್ನು ಕ್ವಾರಂಟೈನ್‌ ಕೇಂದ್ರಗಳಲ್ಲಿ ಇರಿಸಲಾಗುತ್ತಿದೆ. ಹೊರ ದೇಶಗಳಿಂದ ಬಂದವರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ, ಹೊರ ರಾಜ್ಯಗಳಿಂದ ಬಂದ ಕೂಲಿ ಕಾರ್ಮಿಕರಿಗೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿಲ್ಲ. ತಾಲ್ಲೂಕು ಆಡಳಿತದ ನಿರ್ಲಕ್ಷ್ಯ ಮುಂದುವರಿದಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ಸಂಘಟನೆಯ ಗುರುಮಠಕಲ್ ತಾಲ್ಲೂಕು ಅಧ್ಯಕ್ಷ ನಾಗೇಶ ಗದ್ದಿಗಿ, ತಾಲ್ಲೂಕು ಗೌರವಾಧ್ಯಕ್ಷ ನವಾಜರೆಡ್ಡಿ ಪಾಟೀಲ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಬೂತಾ, ತಾಲ್ಲೂಕು ಕಾರ್ಯಾಧ್ಯಕ್ಷ ಲಾಲಪ್ಪ ತಲಾರಿ, ತಾಲ್ಲೂಕು ಉಪಾಧ್ಯಕ್ಷ ಶ್ರೀನಿವಾಸ ಕೇಶ್ವರ, ಗೋಪಾಲಕೃಷ್ಣ ಮೇಧಾ, ಶಂಕರ್ ನಾಗವೋಳ, ಭೀಮು ಮನ್ನೆ, ದೇವಿಂದ್ರ ಮಡಿವಾಳ, ಜಗಪ್ಪ ನಕ್ಕ, ಮಹೇಶ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.