ADVERTISEMENT

ಅಧಿಕಾರಿಗೆ ಹೊಡೆದು ಕೊಲ್ಲುವ ಬೆದರಿಕೆ

ಹನಿ ನೀರಾವರಿ ಯೋಜನೆ: ಅರ್ಜಿದಾರರ ಆಯ್ಕೆಯಲ್ಲಿ ತಾರತಮ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 1:29 IST
Last Updated 13 ನವೆಂಬರ್ 2020, 1:29 IST
ಮಲ್ಲಿಕಾರ್ಜುನ ವಾರದ್
ಮಲ್ಲಿಕಾರ್ಜುನ ವಾರದ್   

ಗುರುಮಠಕಲ್: ತಮಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಕೊಲ್ಲುವ ಬೆದರಿಕೆ ಹಾಕಿದ್ದಾರೆ. ರಜೆ ಪಡೆದು ಬೇರೆ ಊರಿಗೆ ಬಂದಿದ್ದು, ಪಟ್ಟಣಕ್ಕೆ ಹಿಂದಿರುಗುತ್ತಲೆ ಗುರುಮಠಕಲ್ ಠಾಣೆಗೆ ದೂರು ನೀಡುವುದಾಗಿ ಪಟ್ಟಣದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ್ ಅವರು, 'ಪ್ರಜಾವಾಣಿ'ಗೆ ತಿಳಿಸಿದರು.

ಮೊಬೈಲ್‌ ಸಂಖ್ಯೆ 7022569043 ಇದರಿಂದ ಕರೆಮಾಡಿದ ವ್ಯಕ್ತಿಯದು ಎನ್ನಲಾದ ಕಾಲ್ ರೆಕಾರ್ಡಿಂಗ್‌ನಲ್ಲಿ, 'ಹಲವು ದಿನಗಳಿಂದ ಕಚೇರಿಗೆ ಅಲೆಯುತ್ತಿದ್ದೇನೆ. ನನ್ನ ಕೆಲಸ ಮಾಡಿಲ್ಲ. ನೀವು ಮುಖ ನೋಡಿ ಕೆಲಸ ಮಾಡುತ್ತಿದ್ದೀರಿ. ನೀವು ಯಾವಾಗ ಕಚೇರಿಗೆ ಬರುತ್ತೀರಿ? ಎಂದಿದ್ದಾರೆ.

'ನಾನು ರಜೆಯಲ್ಲಿದ್ದು, ಮಂಗಳವಾರ ಕಚೇರಿಗೆ ಬರುತ್ತೇನೆ. ಬಂದ ನಂತರ ನಿಮ್ಮ ಫೈಲ್ ನೋಡಿ ಕೆಲಸ ಮಾಡುವುದಾಗಿ' ಕೃಷಿ ಅಧಿಕಾರಿ ತಿಳಿಸುತ್ತಿದ್ದಂತೆ, 'ನೀವು ಮುಖನೋಡಿ, ಹಣ ಪಡೆದು ಕೆಲಸ ಮಾಡುತ್ತೀರಾ? ನೀವು ಇಲ್ಲಿಗೆ ಬನ್ನಿ ನಿಮ್ಮನ್ನು ಹೊಡೆದು ಸಾಯಿಸುವೆ' ಎಂದು ಕರೆ ಮಾಡಿದ ವ್ಯಕ್ತಿ ಬೆದರಿಕೆ ಹಾಕಿದ್ದಾರೆ.

ADVERTISEMENT

ಇಲ್ಲಿಯವರೆಗೆ ಬಂದ ಅನುದಾನ ದಲ್ಲಿ ರೈತರಿಗೆ ವಿತರಿಸಬೇಕಾದ ಸಾಮಗ್ರಿಗಳನ್ನು ನೀಡಿದ್ದು, ಮತ್ತೆ ಅನುದಾನ ಬಂದಾಗ ನಿಮ್ಮ ಅರ್ಜಿ ಯನ್ನು ಪರಿಗಣಿಸುವುದಾಗಿ ತಿಳಿಸಿದರೂ ಕೇಳಿಸಿಕೊಳ್ಳದೆ ತಮಗೆ ಬೆದರಿಕೆ ಹಾಕಿರುವುದಾಗಿ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ್ ತಿಳಿಸಿದರು.

ಕೆಲವರಿಗೆ ಮಾನ್ಯತೆ: ಸರ್ಕಾರದ ಪ್ರೋತ್ಸಾಹಧನದಲ್ಲಿ ಕಡಿಮೆ ದರದಲ್ಲಿ ರೈತರಿಗೆ ವಿತರಿಸುವ ಸ್ಪ್ರಿಂಕ್ಲರ್ ಖರೀದಿಗೆ ಅರ್ಜಿಗಳನ್ನು ಸಲ್ಲಿಸಿದ್ದು, ಅರ್ಜಿಗಳನ್ನು ಸರತಿಯಲ್ಲಿ ನಮೂದಿಸಲಾಗಿತ್ತು. 280ನೇ ಅರ್ಜಿ ನನ್ನದಾದರೂ ನನಗೆ ಅಲೆದಾಡಿಸುತ್ತಿದ್ದಾರೆ. ಆದರೆ, 400ನೇ ಸರತಿಯನ್ನೂ ಮೀರಿದ ಅರ್ಜಿದಾರರಿಗೆ ಹೇಗೆ ಆಯ್ಕೆ ಮಾಡಿದ್ದಾರೆ? ಎಂದು ಕೃಷಿಕ ಬಲವಂತರೆಡ್ಡಿ ದೇವರಹಳ್ಳಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಒಮ್ಮೆ ಫೈಲ್ ಸಿಗುತ್ತಿಲ್ಲ ಎಂದರೆ, ಮತ್ತೊಮ್ಮೆ ಫೈಲ್ ಹುಡುಕುತ್ತಿದ್ದೇವೆ ಎನ್ನುತ್ತಾರೆ. ಅಲೆದು ಅಲೆದು ಸಾಕಾದ ನಂತರ ಗುರುವಾರ ನನ್ನ ಅರ್ಜಿಯನ್ನು ಹಿಂದಿರುಗಿಸಿದ್ದಾರೆ. ಈಗಾಗಲೆ ನೀರಿಲ್ಲದೆ ಬೆಳೆ ಬಾಡಿದೆ. ನಮ್ಮ ಸಂಕಷ್ಟಕ್ಕೆ ಕೃಷಿ ಅಧಿಕಾರಿ ಸ್ಪಂದಿಸುತ್ತಿಲ್ಲ. ನನ್ನ ವಂತಿಗೆ ಹಣವನ್ನು ತುಂಬಿದ ಚಲನ್ ರಸೀದಿಯೂ ನನಗೆ ನೀಡಿಲ್ಲ. ಫಲಾನುಭವಿಗಳ ಆಯ್ಕೆಯಲ್ಲಿ ಹಣ ಪಡೆದಿರುವ ಬಗ್ಗೆ ಅನುಮಾನ ಕಾಡುತ್ತಿದೆ‘ ಎಂದು ‘ಪ‍್ರಜಾವಾಣಿ‘ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.