ವಡಗೇರಾ: ತಾಲ್ಲೂಕಿನ ತುಮಕೂರ ಗ್ರಾಮದಲ್ಲಿ ಇರುವ ಪುರಾತನ ದೇವಸ್ಥಾನಗಳ ಒಳಗಡೆ ಹಾಗೂ ಆವರಣದಲ್ಲಿ ನಿಧಿ ಇದೆ ಎಂದು ಭಾವಿಸಿ ನಿಧಿಗಳ್ಳರು ದೇವಾಲಯದ ಆವರಣ ಹಾಗೂ ದೇವರ ಮೂರ್ತಿಗಳನ್ನು ವಿರೂಪಗೊಳಿಸುತಿದ್ದಾರೆ. ಇದರಿಂದಾಗಿ ತುಮಕೂರ ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ.
ತುಮಕೂರ ಗ್ರಾಮದಲ್ಲಿ ಬಹಳ ಪುರಾತನ ತಿಮ್ಮಪ್ಪನ ದೇವಾಲಯ, ರಾಮಲಿಂಗೇಶ್ವರ ದೇವಸ್ಥಾನ ಹಾಗೂ ಕೊಂಕಲ್ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಇರುವ ಶಂಕರಲಿಂಗನಗುಡಿ ಹಾಗೂ ಬೀರಪ್ಪನ ಗುಡಿ ಇವೆ.
ಸುರಪುರದ ದೊರೆಗಳು ತುಮಕೂರ ಗ್ರಾಮದ ಜಾಹಗೀರದಾರರು ಆದ ಕಾರಣ ಈ ದೇವಸ್ಥಾನಗಳ ನಿರ್ವಹಣೆಗಾಗಿ ಉಂಬಳಿಯಾಗಿ ಜಮೀನುಗಳನ್ನು ದಾನದ ರೂಪದಲ್ಲಿ ಗ್ರಾಮದ ಕೆಲವು ಕುಟುಂಬಸ್ಥರಿಗೆ ಕೊಟ್ಟಿದ್ದರು. ಅವರು ಈ ಜಮೀನುಗಳನ್ನು ಉಳುಮೆ ಮಾಡುತ್ತಾ ದೇವಸ್ಥಾನದ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಹಾಗೂ ವಸ್ತುಗಳನ್ನು ಒದಗಿಸುತ್ತಿದ್ದರು.
‘ಪ್ರಾಚೀನ ಕಾಲದಲ್ಲಿ ದೇವಸ್ಥಾನದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕಾದರೆ ಪ್ರತಿಷ್ಠಾಪಿಸುವ ಸ್ಥಳದ ಕೆಳಗಡೆ ನವರತ್ನಗಳು, ಬಂಗಾರ, ಬೆಳ್ಳಿ ಹಾಗೂ ಇನ್ನಿತರ ಲೋಹದ ವಸ್ತುಗಳನ್ನು ಹಾಕಿ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದರು. ಇನ್ನೂ ಕೆಲವು ಕಡೆ ಮೂರ್ತಿಯ ಹಣೆಯಲ್ಲಿ, ದೇಹದ ಭಾಗದಲ್ಲಿ ಬಂಗಾರ, ವಜ್ರವನ್ನು ಇಟ್ಟು ಮೂರ್ತಿಯನ್ನು ಸಿದ್ಧಪಡಿಸುತಿದ್ದರು’ ಎಂದು ಹಿರಿಯರು ಹೇಳುತ್ತಾರೆ.
ಈ ನಂಬಿಕೆಯಿಂದಲೇ ನಿಧಿಗಳ್ಳರು ದೇವರ ಮೂರ್ತಿಗಳನ್ನು ವಿರೂಪಗೊಳಿಸುವುದು ಹಾಗೂ ದೇವಸ್ಥಾನದ ಆವರಣದಲ್ಲಿ ನಿಧಿಗಾಗಿ ಕಂದಕಗಳನ್ನು (ತೆಗ್ಗು) ತೋಡುವುದು ಮಾಡುತ್ತಾರೆ.
ಕಳೆದ ಒಂದು ವರ್ಷದಿಂದ ಗ್ರಾಮದಲ್ಲಿ ನಿಧಿಗಳ್ಳರ ಹಾವಳಿ ಹೆಚ್ಚಾಗಿದೆ. ಇವರು ಪುರಾತನ ದೇವಾಲಯ ಹಾಗೂ ಪುರಾತನ ಮೂರ್ತಿಗಳನ್ನು ಗುರಿಯಾಗಿ ಇಟ್ಟುಕೊಂಡು ನಿಧಿಶೋಧ ಮಾಡುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ರಾತ್ರಿ ಗಸ್ತು ಹೆಚ್ಚಿಸಬೇಕುಚೌಡಯ್ಯ ಬಾವೂರ ತುಮಕೂರ ಕರವೇ ಜಿಲ್ಲಾ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.