ವಡಗೇರಾ: ತಾಲ್ಲೂಕಿನ ಗೋನಾಲ ಗ್ರಾಮದ ಎಸ್‌ಸಿ ಓಣಿಯ ಮನೆಗಳ ಮುಂಭಾಗದಲ್ಲಿ ಮಳೆ ಹಾಗೂ ಚರಂಡಿ ನೀರು ಸಂಗ್ರಹವಾಗಿರುವದರಿಂದ ಬಡಾವಣೆ ನಿವಾಸಿಗಳಿಗೆ ಸಂಚಾರಕ್ಕೆ ಸಂಕಷ್ಟವಾಗಿದೆ.
ವಡಗೇರಾ ತಾಲ್ಲೂಕಿನ ಗೋನಾಲ ಗ್ರಾಮವು ಪಂಚಾಯಿತಿ ಕೇಂದ್ರ ಸ್ಥಾನವನ್ನು ಹೊಂದಿದೆ. ಈ ಗ್ರಾಮದಲ್ಲಿ ಸುಮಾರು 2 ಸಾವಿರ ಜನಸಂಖ್ಯೆ ಇದೆ. ಗ್ರಾಮದಿಂದ 3 ಜನ ಪಂಚಾಯಿತಿ ಸದಸ್ಯರು ಆಯ್ಕೆಯಾಗುತ್ತಾರೆ.
ಗೋನಾಲ ಗ್ರಾಮದ ಎಸ್‌ಸಿ ಓಣಿಯಲ್ಲಿ ಮೂಲಭೂತ ಸೌಕರ್ಯ ಇಲ್ಲದಿರುವುದರಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಹಾಗೂ ಚರಂಡಿ ನೀರು ಮನೆ ಮುಂಭಾಗದ ಆವರಣದಲ್ಲಿ ಸಂಗ್ರಹವಾಗುವುದರಿಂದ ರಸ್ತೆಗಳು ಕೆಸರು ಗದ್ದೆಯಾಗಿ ಪರಿವರ್ತನೆಗೊಂಡಿವೆ. ಇದರಿಂದಾಗಿ ಬಡಾವಣೆ ನಿವಾಸಿಗಳು ಮನೆಯಿಂದ ಹೊರಗಡೆ ತೆರಳಲು ಸಂಕಟ ಪಡುತ್ತಿದ್ದಾರೆ.
ಸಂಗ್ರಹವಾಗಿರುವ ಮಳೆ ನೀರು ಖಾಲಿ ಮಾಡಲು ಬಡಾವಣೆ ನಿವಾಸಿಗಳು ಹರಸಾಹಸ ಪಡುತ್ತಾರೆ. ಹೊಲಸು ನೀರಿನಲ್ಲಿಯೆ ಬಡಾವಣೆಯ ನಿವಾಸಿಗಳು ನಡೆದಾಡುವದು ಅನಿವಾರ್ಯವಾಗಿದೆ.
‘ಈಗಾಗಲೇ ಮಳೆಗಾಲ ಆರಂಭವಾಗಿರುವುದರಿಂದ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗಿ, ಮಲೇರಿಯಾ ಇನ್ನಿತರ ಸಾಂಕ್ರಾಮಿ1ಕ ರೋಗಳು ಬಡಾವಣೆಯಲ್ಲಿ ಹರಡುತ್ತವೆ’ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಾರೆ.
‘ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ’ ಎಂದು ಬಡಾವಣೆ ನಿವಾಸಿಗಳು ಆರೋಪಿಸುತ್ತಾರೆ.
‘ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಕ್ರಮಗಳನ್ನು ಕೈಗೊಳ್ಳಬೇಕು’ ಎಂಬುದು ಬಡಾವಣೆಯ ನಿವಾಸಿಗಳ ಒತ್ತಾಸೆಯಾಗಿದೆ.
ಬಡಾವಣೆಯಲ್ಲಿ ಮಣ್ಣು ಹಾಕಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಂಬರುವ ದಿನಗಳಲ್ಲಿ ಮಳೆಯ ನೀರು ಸಂಗ್ರಹವಾಗದಂತೆ ಕ್ರಮ ಕೈಗೊಳ್ಳಲಾಗುವುದುಮಲ್ಲಿಕಾರ್ಜುನ ಸಂಗ್ವಾರ ತಾಪಂ ಇಒ ವಡಗೇರಾ
ಸುಮಾರು ನಾಲ್ಕೈದು ವರ್ಷಗಳಿಂದ ಮನೆ ಮುಂದೆ ನೀರು ನಿಲ್ಲುತ್ತಿದೆ. ಸಂಚಾರ ಸಂಕಷ್ಟವಾಗಿದೆ. ಸಮಸ್ಯೆ ಯಾರ ಮುಂದೆ ಹೇಳಬೇಕು ಗೊತ್ತಾಗುತ್ತಿಲ್ಲರಾಮು ಮ್ಯಾಗೇರಿ ಬಡಾವಣೆ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.