ADVERTISEMENT

ಯಾದಗಿರಿ: ಕಡಲೆ, ಜೋಳಕ್ಕೆ ವರದಾನವಾದ ಚಳಿ

ಹಿಂಗಾರು ಹಂಗಾಮು: ಶೇ 88.27 ಬಿತ್ತನೆ, ನಳನಳಿಸುತ್ತಿರುವ ಬೆಳೆಗಳು

ಬಿ.ಜಿ.ಪ್ರವೀಣಕುಮಾರ
Published 15 ಡಿಸೆಂಬರ್ 2022, 19:30 IST
Last Updated 15 ಡಿಸೆಂಬರ್ 2022, 19:30 IST
ಯಾದಗಿರಿ ತಾಲ್ಲೂಕಿನ ಕೂಲೂರು ಸೀಮಾಂತರದಲ್ಲಿ  ಹಿಂಗಾರು ಜೋಳ ಬಿತ್ತನೆ ಮಾಡಿರುವುದು ಪ್ರಜಾವಾಣಿ ಚಿತ್ರ; ರಾಜಕುಮಾರ ನಳ್ಳಿಕರ
ಯಾದಗಿರಿ ತಾಲ್ಲೂಕಿನ ಕೂಲೂರು ಸೀಮಾಂತರದಲ್ಲಿ  ಹಿಂಗಾರು ಜೋಳ ಬಿತ್ತನೆ ಮಾಡಿರುವುದು ಪ್ರಜಾವಾಣಿ ಚಿತ್ರ; ರಾಜಕುಮಾರ ನಳ್ಳಿಕರ   

ಯಾದಗಿರಿ: ಜಿಲ್ಲೆಯಲ್ಲಿ 2022–23ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಶೇ 88.27 ಬಿತ್ತನೆಯಾಗಿದ್ದು, ಚಳಿಗೆ ಜೋಳ, ಕಡಲೆ ನಳನಳಿಸುತ್ತಿವೆ.

ಶಹಾಪುರ, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಹೆಚ್ಚು ಭತ್ತ ನಾಟಿ ಮಾಡಿದರೆ, ಯಾದಗಿರಿ, ಗುರುಮಠಕಲ್‌, ವಡಗೇರಾ ತಾಲ್ಲೂಕಿನಲ್ಲಿ ಜೋಳ, ಕಡಲೆ, ಶೇಂಗಾ ಬಿತ್ತನೆ ಮಾಡಲಾಗಿದೆ.

ಈಚೆಗೆ ಮ್ಯಾಂಡಸ್‌ ಚಂಡು ಮಾರುತದ ಪ್ರಭಾವದಿಂದ ಜಿಲ್ಲೆಯಲ್ಲಿ ತುಂತುರು ಮಳೆಯಾಗಿದ್ದು, ಇದು ಜೋಳ ಬೆಳೆಗೆ ವರದಾನವಾಗಿದೆ.

ADVERTISEMENT

ಸಂಜೆ ಮತ್ತು ಬೆಳಗಿನ ಜಾವ ಚಳಿ ಇದ್ದು, ಮಂಜಿನ ಹನಿ ಬಿದ್ದು ತೇವಾಗುತ್ತಿದೆ. ಇದು ಹಿಂಗಾರು ಬೆಳೆಗಳಿಗೆ ಅನುಕೂಲವಾಗಿದೆ.

ಗುರುಮಠಕಲ್‌ ತಾಲ್ಲೂಕಿನಲ್ಲಿ ಹೆಚ್ಚು:ಜಿಲ್ಲೆಯಲ್ಲಿ ಹಿಂಗಾರು ಜೋಳ ಗುರುಮಠಕಲ್‌ ತಾಲ್ಲೂಕಿನಲ್ಲಿ ಹೆಚ್ಚು ಬಿತ್ತನೆ ಮಾಡಲಾಗಿದೆ.

ಶಹಾಪುರ ತಾಲ್ಲೂಕಿನಲ್ಲಿ ಹಿಂಗಾರು ಜೋಳ ನೀರಾವರಿಯಲ್ಲಿ 300 ಹೆಕ್ಟೇರ್‌, ಖುಷ್ಕಿ 650 ಹೆಕ್ಟೇರ್‌ ಸೇರಿದಂತೆ ಒಟ್ಟು 6,450 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ.

ಯಾದಗಿರಿ ತಾಲ್ಲೂಕಿನಲ್ಲಿ ನೀರಾವರಿ, ಖುಷ್ಕಿ ಸೇರಿ 5, 040 ಹೆಕ್ಟೇರ್‌ ಬಿತ್ತನೆ ಗುರಿ ಇದ್ದರೆ, ಖುಷ್ಕಿ ಜಮೀನನಲ್ಲಿ ಮಾತ್ರ 1,654 ಹೆಕ್ಟೇರ್‌ ಬಿತ್ತನೆಯಾಗಿದೆ.

ವಡಗೇರಾ ತಾಲ್ಲೂಕಿನಲ್ಲಿ 150 ಹೆಕ್ಟೇರ್‌ ನೀರಾವರಿ, 3,725 ಹೆಕ್ಟೇರ್‌ ಖುಷ್ಕಿ ಭೂಮಿಯಲ್ಲಿ ಹಿಂಗಾರು ಜೋಳ ಬಿತ್ತನೆಯಾಗಿದೆ.

ಸುರಪುರ ತಾಲ್ಲೂಕಿನಲ್ಲಿ ನೀರಾವರಿ 94 ಹೆಕ್ಟೇರ್‌, 4,909 ಹೆಕ್ಟೇರ್‌ ಖುಷ್ಕಿ ಭೂಮಿಯಲ್ಲಿ ರೈತರು ಜೋಳ ಬಿತ್ತನೆ ಮಾಡಿದ್ದಾರೆ. ಹುಣಸಗಿ ತಾಲ್ಲೂಕಿನಲ್ಲಿ 74 ನೀರಾವರಿ, 3,380 ಹೆಕ್ಟೇರ್‌ ಖುಷ್ಕಿ ಜಮೀನನಲ್ಲಿ ಜೋಳ ಬಿತ್ತನೆ ಮಾಡಲಾಗಿದೆ.

ಗುರುಮಠಕಲ್‌ ತಾಲ್ಲೂಕಿನಲ್ಲಿ 5,060 ಹೆಕ್ಟೇರ್‌ ಗುರಿ ಇದ್ದು, 3,240 ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ನೀರಾವರಿ 1,000 ಹೆಕ್ಟೇರ್‌, 31,000 ಖುಷ್ಕಿ ಪ್ರದೇಶದಲ್ಲಿ ಹಿಂಗಾರು ಜೋಳ ಬಿತ್ತನೆ ಗುರಿ ಇದ್ದು, ಇದರಲ್ಲಿ 618 ನೀರಾವರಿ, 22,958 ಖುಷ್ಕಿ ಪ್ರದೇಶ ಸೇರಿದಂತೆ 23,576 ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ ನೀರಾವರಿ ಪ್ರದೇಶದಲ್ಲಿ ಕಡಲೆ 344 ಹೆಕ್ಟೇರ್‌, 6,404 ಹೆಕ್ಟೇರ್‌ ಸೇರಿದಂತೆ 6,748 ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಶೇಂಗಾ ನೀರಾವರಿ, ಖುಷ್ಕಿ ಪ್ರದೇಶದಲ್ಲಿ 46,561 ಹೆಕ್ಟೇರ್‌,4 ಹೆಕ್ಟೇರ್‌, ಕುಸಬೆ 10 ಹೆಕ್ಟೇರ್‌, ಸಾಸಿವೆ 5 ಹೆಕ್ಟೇರ್‌, ಅಗಸೆ 5 ಹೆಕ್ಟೇರ್‌ ಪ್ರದೇಶದಲ್ಲಿ ಗೋಧಿ ಬಿತ್ತನೆ ಮಾಡಲಾಗಿದೆ.

***

ಜೋಳ, ಕಡಲೆ ಬೆಳೆಗಳಿಗೆ ಚಳಿಯಿಂದ ಅನುಕೂಲವಾಗಿದೆ. ಹಿಂಗಾರುನಲ್ಲಿ ಚಳಿ, ಇಬ್ಬನಿಯಿಂದಲೇ ಬೆಳೆಗಳು ಬೆಳೆಯುತ್ತವೆ. ಈಚೆಗೆ ತುಂತುರು ಮಳೆಯಾಗಿದ್ದರಿಂದ ಮತ್ತಷ್ಟು ಉತ್ತಮವಾಗಿದೆ
–ಬಸವರಾಜಪ್ಪ ಗೌಡ, ರೈತ

***

ನಮ್ಮ ನಾಲ್ಕು ಎಕರೆಯಲ್ಲಿ ಜೋಳ ಬಿತ್ತನೆ ಮಾಡಲಾಗಿದ್ದು, ನಳನಳಿಸುತ್ತಿದೆ. ಹೆಸರು ಬೆಳೆ ನಂತರ ಜೋಳ ಹಾಕಲಾಗಿದೆ. ಉತ್ತಮ ಫಸಲು ಬಂದಿದೆ

–ನಾಗಪ್ಪ ಹೊಸಮನಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.