ಬೆಂಗಳೂರು: ರಾಜ್ಯದಲ್ಲಿನ 18 ವರ್ಷಗಳು ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡುವಿಕೆಯಲ್ಲಿ 24 ಜಿಲ್ಲೆಗಳು ಶೇ 100 ರಷ್ಟುಗುರಿ ತಲುಪಿವೆ. ಎರಡನೇ ಡೋಸ್ ನೀಡುವಿಕೆಯಲ್ಲಿ ಎರಡು ಜಿಲ್ಲೆಗಳು ಮಾತ್ರ ಈ ಸಾಧನೆ ಮಾಡಿವೆ.
ರಾಜ್ಯದಲ್ಲಿ 18 ವರ್ಷಗಳು ಮೇಲ್ಪಟ್ಟ4.89 ಕೋಟಿ ಮಂದಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿತ್ತು. 4.94 ಕೋಟಿ ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಈ ಮೂಲಕ ಶೇ 101 ರಷ್ಟು ಸಾಧನೆ ಮಾಡಲಾಗಿದೆ. 4.37 ಕೋಟಿ ಮಂದಿ (ಶೇ 89) ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. 10 ಜಿಲ್ಲೆಗಳು ಎರಡನೇ ಡೋಸ್ ನೀಡುವಿಕೆಯಲ್ಲಿ ರಾಜ್ಯದ ಸರಾಸರಿಗಿಂತ ಹಿಂದುಳಿದಿವೆ. ವಿಜಯಪುರ (ಶೇ 101)
ಹಾಗೂ ಬೆಂಗಳೂರು ಗ್ರಾಮಾಂತರ ಶೇ 100 ರಷ್ಟು ಸಾಧನೆ ಮಾಡಿದ ಜಿಲ್ಲೆಗಳಾಗಿವೆ.
ಕಲಬುರಗಿ, ರಾಯಚೂರು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಗದಿತ ಗುರಿಯ ಶೇ 99 ರಷ್ಟು ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಇನ್ನುಳಿದ ಜಿಲ್ಲೆಗಳು ಶೇ 100 ರಷ್ಟು ಸಾಧನೆ ಮಾಡಿವೆ.
ಎರಡನೇ ಡೋಸ್ ನೀಡುವಿಕೆಯಲ್ಲಿ ಕೊಡಗು (ಶೇ 98), ಗದಗ (ಶೇ 97), ಮಂಡ್ಯ (ಶೇ 94), ಚಿಕ್ಕಬಳ್ಳಾಪುರ (ಶೇ 94), ಕೋಲಾರ (ಶೇ 94), ಹಾಸನ (ಶೇ 94),ಮೈಸೂರು (ಶೇ 93), ಬಾಗಲಕೋಟೆ (ಶೇ 92), ರಾಮನಗರ (ಶೇ 92), ಬೆಳಗಾವಿ (ಶೇ 91) ಹಾಗೂ ಧಾರವಾಡ (ಶೇ 91) ಜಿಲ್ಲೆಯಲ್ಲಿ
ಶೇ 90ಕ್ಕೂ ಅಧಿಕ ಗುರಿ ಸಾಧಿಸಲಾಗಿದೆ.
ಕಲಬುರಗಿ (ಶೇ 82) ಕಡೆಯ ಸ್ಥಾನದಲ್ಲಿದೆ. ರಾಯಚೂರು (ಶೇ 83), ಬೆಂಗಳೂರು ನಗರ (ಶೇ 86), ದಕ್ಷಿಣ ಕನ್ನಡ (ಶೇ 86), ಶಿವಮೊಗ್ಗ (ಶೇ 86), ಬಳ್ಳಾರಿ (ಶೇ 87), ಚಾಮರಾಜನಗರ (ಶೇ 88), ಚಿಕ್ಕಮಗಳೂರು (ಶೇ 88) ಹಾಗೂ ಉಡುಪಿ (ಶೇ 88) ಜಿಲ್ಲೆಗಳು ಹಿಂದೆ ಬಿದ್ದಿವೆ.
ರಾಜ್ಯದಲ್ಲಿ ಸದ್ಯ6,406 ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ 6,663 ಕಡೆ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದೆ. ಜನವರಿ ತಿಂಗಳ ಪ್ರಾರಂಭಿಕ ದಿನಗಳಲ್ಲಿ 7 ಸಾವಿರಕ್ಕೂ ಅಧಿಕ ಕೇಂದ್ರಗಳಲ್ಲಿ ಲಸಿಕೆ ನೀಡಲಾಗಿತ್ತು. ಕಳೆದೊಂದು ತಿಂಗಳಿಂದ ಕೋವಿಡ್ ಲಸಿಕೆಯ ದೈನಂದಿನ ನೀಡುವಿಕೆ ಸರಾಸರಿ 3 ಲಕ್ಷದಷ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.