ಹುಣಸಗಿ: ‘ಐದು ಕೆ.ಜಿ ಅಕ್ಕಿ ಬದಲು ಹಣ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ನಮ್ಮ ವಿರೋಧವಿದೆ’ ಎಂದು ತಾಲ್ಲೂಕ ಪಡಿತರ ವಿತರಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ಶನಿವಾರ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು.
ಪಡಿತರ ವಿತರಕರ ಜಿಲ್ಲಾ ಉಪಾಧ್ಯಕ್ಷ ರಾಮಣ್ಣ ಕಲ್ಲದೇವನಹಳ್ಳಿ ಮಾತನಾಡಿ, ಕಾಂಗ್ರೆಸ್ ಕೊಟ್ಟ ಮಾತಿನಂತೆ 10 ಕೆ.ಜಿ ಅಕ್ಕಿ ಕೊಡಬೇಕು. ಆದರೆ ಅಕ್ಕಿ ದಾಸ್ತಾನು ಇಲ್ಲ ಎಂದು ನೆಪ ಹೇಳಿ ಹಣ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ, ಇದರಿಂದ ನ್ಯಾಯಬೆಲೆ ಅಂಗಡಿಯವರಿಗೆ ಅನ್ಯಾಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಭೀಮರಾಯ ಶ್ರೀನಿವಾಸಪುರ ಮಾತನಾಡಿ, ಈಗಾಗಲೇ ಪ್ರತಿ ಸದಸ್ಯರಿಗೆ ಕೇಂದ್ರದಿಂದ 5 ಕೆ.ಜಿ ರಾಜ್ಯ ಸರ್ಕಾರದಿಂದ 1 ಕೆ.ಜಿ ಅಕ್ಕಿ ಕೊಡುವ ನಿಮಯ ಚಾಲ್ತಿಯಲ್ಲಿದೆ. ಪ್ರಸ್ತುತ ತಿಂಗಳಿನಿಂದ ರಾಜ್ಯ ಸರ್ಕಾರ 1 ಕೆ.ಜಿ ಅಕ್ಕಿ ಕಡಿತ ಮಾಡಿ ಒಟ್ಟು 5 ಕೆ.ಜಿ ಅಕ್ಕಿ ಮೊತ್ತವನ್ನು ಖಾತೆಗೆ ಹಾಕಲು ತೀರ್ಮಾನಿಸಿದ್ದು ಇದನ್ನು ಪುನರ್ ಪರಿಶೀಲನೆ ನಡೆಸುವಂತೆ ಆಗ್ರಹಿಸಿದರು.
ಅಕ್ಕಿ ಬದಲು ಗೋದಿ, ಸಕ್ಕರೆ, ಬೆಲ್ಲ, ತೊಗರಿ ಬೆಳೆ, ಹೆಸರು ಬೆಳೆ ಹಾಗೂ ಇನ್ನಿತರ ಧಾನ್ಯಗಳನ್ನು ಕೊಡಬೇಕು ಎಂದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದಿರುವ ಮನವಿ ಪತ್ರವನ್ನು ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಂದಣ್ಣ ಪೀರಾಪುರ, ಸೋಮಣ್ಣ ಮೇಟಿ, ಮದನಸಾಬ ಮಾಳನೂರ, ಹುಲಗಪ್ಪ ಬೈಲಕುಂಟಿ, ಸಂಗಣ್ಣ ಅಗ್ನಿ, ಯಮನೂರಿ ಯಣ್ಣಿವಡಗೇರಿ, ಅಂಬ್ರೇಶ ಸೊನ್ನಾಪೂರ, ನಿಂಗಣ್ಣ ಯಡಹಳ್ಳಿ, ಸಾಯಬಣ್ಣ ಸದಬ, ಹುಲಗಪ್ಪ ರಾಯನಗೋಳ, ದೇವಿಂದ್ರಪ್ಪ ಬಿರಾದಾರ, ರಾಜಶೇಖರ ಬರದೇವನಾಳ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.