ADVERTISEMENT

ಕಲಿಕಾ ನ್ಯೂನತೆ ಪೋಷಕರಿಗೆ ಸವಾಲು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 7:39 IST
Last Updated 11 ಸೆಪ್ಟೆಂಬರ್ 2019, 7:39 IST
   

ರಮೇಶ ಎಲ್ಲಾ ಮಕ್ಕಳಂತೆ ಚೂಟಿ. ಬೆಳವಣಿಗೆಯ ರೀತಿ ಸಾಮಾನ್ಯ. ಶಾಲೆಗೆ ಸೇರಿದ ಹೊಸತರಲ್ಲಿ ಅಕ್ಷರ ಕಲಿಯುವಲ್ಲಿ ಹುರುಪು. ಆದರೆ ಕ್ರಮೇಣ ಅಕ್ಷರಾಭ್ಯಾಸದ ಕಲಿಕೆಯಲ್ಲಿ ತೊಂದರೆ ಕಂಡಿತು. ಉದಾಹರಣೆಗೆ ಅಕ್ಷರಗಳನ್ನು ತಿರುವು ಮುರುವಾಗಿ ಬರೆಯುವುದು ಮತ್ತು ಅಕ್ಷರ ಗುರುತಿಸುವಲ್ಲಿ ತೊಂದರೆ ಕಾಣಿಸಿತು. ದಿನ ಕಳೆದಂತೆ ಕಲಿಕೆಯಲ್ಲಿ ನಿರಾಸಕ್ತಿ, ತರಗತಿಗಳು ಹೆಚ್ಚಿದಂತೆಲ್ಲಾ ತೊಂದರೆಗಳು ಹೆಚ್ಚುತ್ತಾ ಹೋದವು. ಸಮಸ್ಯೆಯ ಅರಿವಿದ್ದರೂ ಸಮಸ್ಯೆಯ ಕಾರಣ ತಿಳಿಯದೇ ಗೊಂದಲಕ್ಕೆ ಒಳಗಾದ ಪಾಲಕರು ಮೊರೆ ಹೋದದ್ದು ಚಿಕಿತ್ಸಕ ಮನಃಶಾಸ್ತ್ರಜ್ಞರನ್ನು. ಅವರ ವಿಶ್ಲೇಷಣೆಯಿಂದ ಬೆಳಕಿಗೆ ಬಂದ ವಿಚಾರವೆಂದರೆ ಕಲಿಯುವ ಪ್ರಕ್ರಿಯೆಯಲ್ಲಿ ನ್ಯೂನತೆ ಇರುವುದು. ಅದುವೇ ಕಲಿಕಾ ನ್ಯೂನತೆ.

ಮೇಲೆ ಹೇಳಿದ ನಿದರ್ಶನದಲ್ಲಿ ಸೂಕ್ಷ್ಮ ರೀತಿಯಿಂದ ಅವಲೋಕಿಸಿದಾಗ ಕೆಲವು ಅಂಶಗಳು ಗಮನಕ್ಕೆ ಬರುತ್ತವೆ. ಕಲಿಕೆಯಲ್ಲಿ ತೊಂದರೆ ಇರುವ ಮಕ್ಕಳು ಕಲಿಯಲು ಕಷ್ಟ ಪಡುವುದು ಸಾಮಾನ್ಯ. ಆಗ ಪಾಲಕರಾಗಲೀ ಶಿಕ್ಷಕರಾಗಲೀ ಬೇರೆ ಬೇರೆ ವಿಧಾನದಿಂದ ಕಲಿಸಲು ಪ್ರಯತ್ನಿಸುತ್ತಾರೆ. ಬೇರೆ ರೀತಿಯಿಂದ ಕಲಿಸಿದರೂ ಅರ್ಥವಾಗುವುದಿಲ್ಲ, ಅರ್ಥವಾಗದೇ ಇರುವ ಕಾರಣದಿಂದ ಮಕ್ಕಳಿಗೆ ಓದುವ ಮತ್ತು ಬರೆಯುವ ಕ್ರಿಯೆಯಲ್ಲಿ ನಿರಾಸಕ್ತಿ ಹುಟ್ಟುತ್ತದೆ. ಮಕ್ಕಳು ತಮ್ಮ ನ್ಯೂನತೆಯನ್ನು ಮರೆಮಾಚಲು ಅನ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಉದಾಹರಣೆಗೆ ಅತೀ ತುಂಟತನ, ಸುಳ್ಳು ಹೇಳುವುದು, ಕಳ್ಳತನ ಮಾಡುವುದು, ಓದುವುದು ಮತ್ತು ಬರೆಯುವುದನ್ನು ತಪ್ಪಿಸಿಕೊಳ್ಳಲು ಕಾರಣ ಕೊಡುವುದು ಮಾಡುತ್ತಾರೆ. ಇವೆಲ್ಲ ಮೇಲುನೋಟಕ್ಕೆ ಸೋಮಾರಿತನ ಅಥವಾ ನಿರ್ಲಕ್ಷ್ಯತೆಯಂತೆ ಕಾಣಬಹುದು. ಈಗಿನ್ನೂ ಚಿಕ್ಕ ವಯಸ್ಸು, ಮುಂದೆ ಕಲಿಯಬಹುದು, ಬೆಳೆಯುತ್ತ ತಿಳಿದುಕೊಳ್ಳಬಹುದು.. ಹೀಗೆ ನಾನಾ ರೀತಿಯ ಸಬೂಬುಗಳು ಹಿರಿಯರಿಂದಲೂ ಬರಬಹುದು.

ಸರಾಸರಿಗಿಂತಲೂ ಹೆಚ್ಚಿನ ಬುದ್ಧಿಶಕ್ತಿ

ADVERTISEMENT

ಕಲಿಕಾ ನ್ಯೂನತೆ ಹೊಂದಿದ ಮಕ್ಕಳಿಗೆ ತಮ್ಮ ಸಮಸ್ಯೆಯನ್ನು ಅಭಿವ್ಯಕ್ತಪಡಿಸಲು ಬಾರದ್ದರಿಂದ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲಾರರು. ಅವರನ್ನು ಶಿಕ್ಷಕರು ಮತ್ತು ಪಾಲಕರೂ ಅರ್ಥ ಮಾಡಿಕೊಳ್ಳಲಾರರು. ಹೀಗಾಗಿ ಈ ಮಕ್ಕಳು ಸತತವಾಗಿ ಪಾಲಕರ ಮತ್ತು ಶಿಕ್ಷಕರ ಆಕ್ರಮಣಕಾರಿ ಮನೋಭಾವ ಇಲ್ಲವೇ ಅಸಡ್ಡೆಯ ಧೋರಣೆಯನ್ನು ಅನುಭವಿಸಬೇಕಾಗುತ್ತದೆ. ಅದು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನುಂಟು ಮಾಡುತ್ತದೆ. ಇತರೆ ಮಕ್ಕಳಿಗೆ ಹೋಲಿಸಿ ಅವರಂತೆ ತಮ್ಮ ಮಕ್ಕಳೂ ಕೂಡ ಇರಬೇಕೆಂದು ಎಲ್ಲರೂ ಅಪೇಕ್ಷಿಸುತ್ತಾರೆ. ಅದು ಅಸಾಧ್ಯವಾದಾಗ ಈ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಕುಂಠಿತಗೊಳ್ಳುವುದು. ಕಲಿಕಾ ನ್ಯೂನತೆ ಹೊಂದಿದ ಮಕ್ಕಳು ಸರಾಸರಿ ಅಥವಾ ಸರಾಸರಿಗಿಂತ ಹೆಚ್ಚಿನ ಬುದ್ಧಿಶಕ್ತಿಯನ್ನು ಹೊಂದಿರುತ್ತಾರೆ.

ದಿನಕ್ಕೊಂದು ಹೊಸ ರೀತಿಯಿಂದ ಕಲಿಸಲು ಶಿಕ್ಷಕರು ಪ್ರಯತ್ನಿಸಿದಷ್ಟೂ ಈ ಮಕ್ಕಳು ಹೊಸ ಯುಕ್ತಿಗಳನ್ನು ಉಪಯೋಗಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದೊಂದು ರೀತಿಯಲ್ಲಿ ಕಾಯಿಲೆಗೆ ಸರಿಯಾದ ಔಷಧಿ ತೆಗೆದುಕೊಳ್ಳದೇ ಬೇರೆ ಔಷಧಿ ಸೇವಿಸಿದಾಗ ಆಗುವ ಅಡ್ಡ ಪರಿಣಾಮದಂತೆ. ಪೋಷಕರ ಹಾಗೂ ಶಿಕ್ಷಕರ ಪ್ರಯತ್ನ ಮಕ್ಕಳಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಲ್ಲಿ ಸಮಸ್ಯೆ ಹೇಗಿರುತ್ತದೆ ಎಂದರೆ ಮಕ್ಕಳು ಜಾಣರಾಗಿಯೂ, ಚುರುಕಾಗಿಯೂ ಇದ್ದು ಕುತೂಹಲ ಮನೋಭಾವದವರಾಗಿರುತ್ತಾರೆ. ಆದರೆ, ಇವರಲ್ಲಿ ಹೀಗೆ ಒಂದು ನ್ಯೂನತೆ ಇರಬಹುದು ಎನ್ನುವ ಪರಿಕಲ್ಪನೆ ಕೂಡ ಶಿಕ್ಷಕರಲ್ಲಾಗಲೀ ಪಾಲಕರಲ್ಲಾಗಲೀ ಬರುವುದಿಲ್ಲ. ಹೆಚ್ಚಾಗಿ ಪೋಷಕರು ವಿದ್ಯಾವಂತರಾಗಿದ್ದರೂ ಕೂಡ ಮಕ್ಕಳ ಸಮಸ್ಯೆ ಅರಿಯದೇ ಮಕ್ಕಳ ಮೇಲೆ ಒತ್ತಡ ಹೇರುತ್ತಿರುತ್ತಾರೆ.

ಅಪಹಾಸ್ಯ ಬೇಡ

ಹೇಗೆ ಒಬ್ಬ ವ್ಯಕ್ತಿಯ ಬೆರಳ ಗುರುತು ಮತ್ತೊಬ್ಬರಂತೆ ಇರುವುದಿಲ್ಲವೋ ಹಾಗೆಯೇ ಮಕ್ಕಳೂ ಕೂಡ. ಒಡಹುಟ್ಟಿದವರಾದರೂ ಒಂದರಂತೆ ಇನ್ನೊಂದು ಮಗು ಇರುವುದಿಲ್ಲ. ಈ ವಿಚಾರವನ್ನು ಪಾಲಕರು ಒಪ್ಪಿಕೊಂಡಾಗ ಮಾತ್ರ ಮಕ್ಕಳ ಮನಸ್ಸನ್ನು ಅರಿಯಲು ಹಾಗೂ ಅವರ ದೃಷ್ಟಿಯಲ್ಲಿ ಮಕ್ಕಳ ಪ್ರಪಂಚ ತಿಳಿಯಲು ಸಾಧ್ಯ. ಮಕ್ಕಳ ಮತ್ತು ಪೋಷಕರ ನಡುವೆ ಈ ತರಹದ ಸಲುಗೆ ಬೆಳೆದಾಗ ಮಾತ್ರ ಅವರು ತಮ್ಮ ಸಮಸ್ಯೆಗಳನ್ನು ಸರಳವಾಗಿ ಅರಿಯಲು ನೆರವಾಗುತ್ತದೆ ಮತ್ತು ಮಕ್ಕಳು ಸುಳ್ಳಿನ ಮೊರೆ ಹೋಗುವುದಿಲ್ಲ. ಇದಲ್ಲದೇ ತಮ್ಮ ಕುಟುಂಬದೊಂದಿಗೆ ಭಾವನಾತ್ಮಕವಾಗಿ ದೂರವಾಗುವುದು ತಪ್ಪುತ್ತದೆ. ಬದಲಾಗಿ ಪೋಷಕರ ಸಹಾಯ ಸ್ವೀಕರಿಸುತ್ತಾರೆ. ಆದರೆ ಸಮಸ್ಯೆಯ ಅರಿವು ಇರದೇ ಅಥವಾ ಅರಿತರೂ ಒಪ್ಪಿಕೊಳ್ಳದ ಮನಃಸ್ಥಿತಿಯಲ್ಲಿರುವ ಪಾಲಕರು ಹಾಗೂ ಶಿಕ್ಷಕರು ಇಂತಹ ಮಕ್ಕಳಿಗೆ ಸಾಮಾನ್ಯವಾಗಿ ಕೊಡುವ ಅಪಹಾಸ್ಯದ ಬಿರುದು ಎಂದರೆ ಸೋಮಾರಿ, ಅಯೋಗ್ಯ, ದಡ್ಡ ಮುಂತಾದವು.

ಈಗಿನ ಡಿಜಿಟಲ್ ಯುಗದಲ್ಲಿ ಯಾವುದೇ ಸಮಸ್ಯೆ ಅಥವಾ ವಿಚಾರ ತಿಳಿಯಲು ಸಹಾಯ ಬೆರಳ ತುದಿಯಲ್ಲಿ ಸಿಗುತ್ತದೆ. ಆದರೆ ಅನುಭವದ ಮಾತನ್ನು ಹೇಳುವವರು ಕಡಿಮೆ, ಕೇಳುವ ತಾಳ್ಮೆ ಇರುವ ಪಾಲಕರು ಕೂಡ ವಿರಳ. ಮುಖ್ಯವಾಗಿ ತಿಳಿಯಬೇಕಿರುವ ಅಂಶವೆಂದರೆ ಪ್ರತಿಯೊಂದು ಮಗುವು ಅನನ್ಯ ಮತ್ತು ವಿಶೇಷ. ಹೋಲಿಕೆಯಾಗಲೀ ತುಲನೆಯಾಗಲೀ ಮಾಡುವುದು ಮೂರ್ಖತನ.

ಕಲಿಕಾ ನ್ಯೂನತೆಯ ವಿಧಗಳು

ಡಿಸ್ಲೆಕ್ಸಿಯಾ: ಇದು ಓದುವ ಪ್ರಕ್ರಿಯೆಯಲ್ಲಿ ಕಾಣಿಸುವ ನ್ಯೂನತೆ, ಇವರು ಅಕ್ಷರ ಗುರುತಿಸುವಲ್ಲಿ ತೊಂದರೆ ಪಡುತ್ತಾರೆ.

ಡಿಸ್‌ಗ್ರಾಫಿಯಾ: ಇದು ಬರವಣಿಗೆಯಲ್ಲಿ ಕಂಡು ಬರುವ ನ್ಯೂನತೆ. ಇಂತಹ ಮಕ್ಕಳು ಬರೆಯುವಲ್ಲಿ ತೊಂದರೆ ಪಡುತ್ತಾರೆ. ಉದಾ: ಬಹಳ ನಿಧಾನವಾಗಿ ಬರೆಯುವುದು, ಹಾಗೂ ಇವರಿಗೆ ಅಕ್ಷರಗಳನ್ನು ಗುರುತಿಸುವುದು ಸಾಧ್ಯವಾಗದ್ದರಿಂದ ಅಕ್ಷರಗಳನ್ನು ತಪ್ಪಾಗಿ ಬರೆಯುತ್ತಾರೆ. p ಯನ್ನು q ಎಂದು ಗುರುತಿಸುವುದು. ದ ಮತ್ತು ಡ ನಡುವಿನ ವ್ಯತ್ಯಾಸ ಗುರುತಿಸುವಲ್ಲಿ ವಿಫಲರಾಗುವುದು.

ಡಿಸ್‌ಕ್ಯಾಲ್ಕ್ಯುಲಿಯಾ: ಇದು ಗಣಿತ ಕಲಿಯುವ ಪ್ರಕ್ರಿಯೆಗೆ ಸಂಬಂಧಿಸಿದ ತೊಂದರೆ. ಇವರಿಗೆ ಗಣಿತದ ಚಿಹ್ನೆ. ಅಂಕೆ-ಸಂಖ್ಯೆಗಳನ್ನು ಗ್ರಹಿಸುವುದು ಕಷ್ಟ. ಉದಾ: 12 ಅನ್ನು 21 ಎಂದು ಹೇಳುವುದು. + ಅನ್ನು x ಎಂದು ತಪ್ಪಾಗಿ ಗ್ರಹಿಸುವುದು.

ಗುರುತಿಸುವುದು ಮುಖ್ಯ

ಇಂತಹ ಸನ್ನಿವೇಶದಲ್ಲಿ ಶಿಕ್ಷಕರು ಬರೀ ಪಾಠ ಬೋಧನೆ ಮತ್ತು ಇತರೆ ಕಲಿಕಾ ಚಟುವಟಿಕೆಗಳನ್ನು ನಿರ್ವಹಿಸುವುದರ ಜೊತೆಗೆ ಹೊಸದೊಂದು ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಅದುವೇ ಕಲಿಕಾ ಸಮಸ್ಯೆಯಲ್ಲಿರುವ ಮಕ್ಕಳನ್ನು ಗುರುತಿಸುವುದು. ಕಲಿಕಾ ನ್ಯೂನತೆ ಮೆದುಳಿನ ಒಂದು ನರ ಸಂಬಂಧಿ ಸಮಸ್ಯೆ. ಕಲಿಕಾ ನ್ಯೂನತೆ ಇರುವ ಮಕ್ಕಳು ತರಗತಿಯಲ್ಲಿನ ಸಾಮಾನ್ಯ ಬೋಧನೆಯಿಂದ ಹೆಚ್ಚು ಪ್ರಯೋಜನ ಪಡೆಯಲಾರರು. ಇದು ಮೆದುಳಿಗೆ ಸಂಬಂಧಿಸಿದ ನ್ಯೂನತೆಯಾಗಿರುವುದರಿಂದ ಪರಿಹಾರ ಪಡೆಯಲು ಪೋಷಕರು ಮತ್ತು ಶಿಕ್ಷಕರು ಹೆಚ್ಚು ತಾಳ್ಮೆ ವಹಿಸುವುದು ಅವಶ್ಯ.

ಇಂತಹ ಮಕ್ಕಳಿಗೆ ಪರಿಹಾರಾತ್ಮಕ ಬೋಧನೆಯ ಅವಶ್ಯಕತೆ ಇರುತ್ತದೆ. ಕಲಿಕಾ ನ್ಯೂನತೆ ಎಂದ ಕೂಡಲೇ ಮಾರು ದೂರ ಓಡುವವರ, ಬುದ್ಧಿಮಾಂದ್ಯತೆ ಎಂದುಕೊಳ್ಳುವವರ ಹಾಗೂ ಏನು ನಮ್ಮ ಮಗುವಿಗೆ ಹುಚ್ಚೇ ಎಂದು ಕೇಳುವವರ ಸಂಖ್ಯೆ ದೊಡ್ಡದಿದೆ. ಆದರೆ ಹೀಗೆ ಯೋಚಿಸುವ ಅವಶ್ಯಕತೆ ಇಲ್ಲ. ಅಲ್ಲದೇ ಈ ಸಮಸ್ಯೆಯನ್ನು ಎಷ್ಟು ಬೇಗ ಗುರುತಿಸುತ್ತೇವೆಯೋ ಅಷ್ಟು ಬೇಗ ಮತ್ತು ಸರಳವಾಗಿ ಮಕ್ಕಳಿಗೆ ಪರಿಹಾರ ಒದಗಿಸಲು ಸಾಧ್ಯ. ಈ ಮಕ್ಕಳಿಗೆ ವೈಯಕ್ತಿಕ ಗಮನದೊಂದಿಗೆ ಪರಿಹಾರಾತ್ಮಕ ಬೋಧನೆಯನ್ನು ಹೆಚ್ಚು ವೈಜ್ಞಾನಿಕವಾಗಿ ಯೋಜಿಸಿ ಪುನರ್‌ ಕಲಿಕೆಗೆ ನೆರವಾಗಬೇಕು.

(ಲೇಖಕಿ ರೆಮಿಡಿಯಲ್‌ ಶಿಕ್ಷಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.