ADVERTISEMENT

ವೈದ್ಯಕೀಯ ಪಿಜಿ: ಸೇವಾನಿರತರ ಕೋಟಾ ಇಳಿಕೆ– ಆದೇಶ ರದ್ದು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2022, 19:24 IST
Last Updated 24 ಅಕ್ಟೋಬರ್ 2022, 19:24 IST
   

ಬೆಂಗಳೂರು: 2022-23ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಲ್ಲಿ ಸೇವಾನಿರತ ಅಭ್ಯರ್ಥಿಗಳಿಗೆ ಸರ್ಕಾರಿ ಕೋಟಾದ ಸೀಟುಗಳ ಸಂಖ್ಯೆಯನ್ನು ಶೇ 30 ರಿಂದ ಶೇ 15ಕ್ಕೆ ಇಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಸೀಟ್ ಮ್ಯಾಟ್ರಿಕ್ಸ್ ಪ್ರಕ್ರಿಯೆಯನ್ನೂ ರದ್ದುಗೊಳಿಸಿ ಆದೇಶಿಸಿದೆ.

‘ಸರ್ಕಾರದ ನಿರ್ಧಾರ ಏಕ ಪಕ್ಷೀಯ ಮತ್ತು ಆಕ್ಷೇಪಾಣಾರ್ಹವಾಗಿದೆ. ಸೀಟುಗಳನ್ನು ಶೇ 30
ರಿಂದ ಶೇ15ಕ್ಕೆ ಕಡಿಮೆ ಮಾಡಿರು ವುದಕ್ಕೆ ಸೂಕ್ತ ಕಾರಣಗಳನ್ನು ಉಲ್ಲೇಖಿಸಿಲ್ಲ‌. ಆದ್ದರಿಂದ, ಸಂಬಂಧಿತ ಮಾನದಂಡಗಳನ್ನು ಪರಿಗಣಿಸುವ ಮೂಲಕ ಸೇವಾನಿರತ ಅಭ್ಯರ್ಥಿಗಳಿಗೆ ಸೀಟುಗಳ ಕೋಟಾವನ್ನು ಹೊಸದಾಗಿ ಸೂಚಿಸುವ ಮತ್ತು ಸೀಟುಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಸ್ವತಂತ್ರವಿದೆ’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ಸೀಟುಗಳ ಸಂಖ್ಯೆಯನ್ನು ಶೇ15ಕ್ಕೆ ಇಳಿಸಿ ರಾಜ್ಯ ಸರ್ಕಾರ ಅಕ್ಟೋಬರ್ 6ರಂದು ಹೊರಡಿಸಿದ್ದ ಅಧಿಸೂಚನೆ ಹಾಗೂ ಅಕ್ಟೋಬರ್ 9ರಂದು ನಡೆದ ಸೀಟ್ ಮ್ಯಾಟ್ರಿಕ್ಸ್ ಪ್ರಕ್ರಿಯೆಯ ಕಾನೂನು ಬದ್ಧತೆಯನ್ನು ಪ್ರಶ್ನಿಸಿ ಚಿಂತಾಮಣಿಯ ಡಾ.ಕೆ‌.ಎಸ್.ಸ್ವಾತಿ ಮತ್ತು ಹಳಿಯಾಳ ತಾಲ್ಲೂಕಿನ ಮುರ್ಕವಾಡದ ಡಾ.ಭೀಮಣ್ಣ ಎಸ್.ಸಿನ್ನೂರ ಈ ರಿಟ್ ಅರ್ಜಿ ಸಲ್ಲಿಸಿ ದ್ದರು.

ಅರ್ಜಿದಾರರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಆದೇಶದಿಂದಾಗಿ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಹೊಸ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕಾದ ಸನ್ನಿವೇಶ ಎದುರಾದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.