ADVERTISEMENT

ಎನ್‌ಟಿಎಸ್‌ಇ: ತಯಾರಿ ಹೇಗೆ?

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 18:45 IST
Last Updated 20 ಆಗಸ್ಟ್ 2019, 18:45 IST
College student write on exam paper
College student write on exam paper   

ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಪೋಷಕರು ಇಂದು ಮೊದಲಿಗಿಂತಲೂ ಹೆಚ್ಚು ಆಸಕ್ತಿಯನ್ನು ತೋರುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಹಾಗೆಯೇ, ಈ ಬದಲಾಗುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗಾಗಿ ಹಾಗೂ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಹಲವಾರು ಸ್ಪರ್ಧಾತ್ಮಕ ಪರಿಕ್ಷೆಗಳನ್ನು ಹಲವಾರು ಸಂಸ್ಥೆಗಳು ನಡೆಸುತ್ತಾ ಬಂದಿವೆ.

ಈ ನಿಟ್ಟಿನಲ್ಲಿ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ (National Talent Search Examination – NTSE) ಬಹಳ ಪ್ರಮುಖವಾದ ಪರೀಕ್ಷೆಗಳಲ್ಲಿ ಒಂದು. ಇಂದಿನ ವಿದ್ಯಾರ್ಥಿಗಳನ್ನು ಮುಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸುವುದು ಹಾಗೂ ಅವರ ಪ್ರತಿಭೆಯನ್ನು ಗುರುತಿಸಿ ಅವರ ಮುಂದಿನ ವ್ಯಾಸಂಗಕ್ಕಾಗಿ ಆರ್ಥಿಕ ನೆರವನ್ನು ನೀಡಿ ಪ್ರೋತ್ಸಾಹಿಸುವುದು ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯ ಮುಖ್ಯ ಉದ್ದೇಶಗಳಲ್ಲೊಂದು.

ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಗೆ ಅರ್ಜಿ ಹಾಕಲು, ಅರ್ಜಿ ಹಾಕುವ ವರ್ಷದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ ಹತ್ತನೆಯ ತರಗತಿಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳೂ ಅರ್ಹರಾಗಿರುತ್ತಾರೆ.

ADVERTISEMENT

ಈ ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಯುತ್ತದೆ. ಮೊದಲನೆಯ ಹಂತ ರಾಜ್ಯಮಟ್ಟದಲ್ಲಿ ಮತ್ತು ಎರಡನೆಯ ಹಂತ ರಾಷ್ಟ್ರೀಯ ಮಟ್ಟದಲ್ಲಿ. ಈ ಎರಡು ಹಂತದ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಉನ್ನತ ವ್ಯಾಸಂಗದವರೆಗೂ ವಿದ್ಯಾರ್ಥಿವೇತನ ದೊರೆಯುತ್ತದೆ.

ಇದರ ಪ್ರಥಮ ಹಂತದ ಪರೀಕ್ಷೆಯನ್ನು ಎನ್.ಸಿ.ಇ.ಆರ್.ಟಿ. ನವದೆಹಲಿ, ಇವರ ಸಹಯೋಗದೊಂದಿಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯವರು ((DSERT) ನಡೆಸುತ್ತಾರೆ.

(ಹೆಚ್ಚಿನ ವಿವರಗಳಿಗಾಗಿ ಈ ಜಾಲತಾಣವನ್ನು ನೋಡಿ http://www.dsert.kar.nic.in/easp/ntsenmms.asp)

ಪರೀಕ್ಷೆಗೆ ತಯಾರಿ ಹೇಗೆ ?

ಈ ಪರೀಕ್ಷೆಯು ಎರಡು ವಿಷಯಗಳನ್ನು ಒಳಗೊಂಡಿರುತ್ತದೆ

1.ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ (General Mental Ability Test): ಈ ಪ್ರಶ್ನೆಪತ್ರಿಕೆಯಲ್ಲಿ ಒಂದು ನೂರು ಬಹು ಅಂಶ ಆಯ್ಕೆ ಪ್ರಶ್ನೆಗಳಿರುತ್ತವೆ. ಒಂದೊಂದು ಪ್ರಶ್ನೆಗೂ ಒಂದೊಂದು ಅಂಕಗಳಿರುತ್ತವೆ. ಈ ಪ್ರಶ್ನೆಗಳು ವಿದ್ಯಾರ್ಥಿಗಳ ತಾರ್ಕಿಕ, ವಿಶ್ಲೇಷಣಾತ್ಮಕ ಹಾಗೂ ಸಂಶ್ಲೇಷಣಾತ್ಮಕ ಆಲೋಚನೆಗಳನ್ನು, ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತವೆ.

ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆಯ ಪ್ರಶ್ನೆಗಳು ಸಾಮಾನ್ಯವಾಗಿ ಮೌಖಿಕ ಮತ್ತು ಚಿತ್ರಸಹಿತ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.

ಉದಾ: ಸಂಖ್ಯಾ ಶ್ರೇಣಿ, ಸಂಕೇತಗಳು, ರಕ್ತ ಸಂಬಂಧದ ಪ್ರಶ್ನೆಗಳು, ಸಾಮ್ಯತೆ, ಅಕ್ಷರ ಶ್ರೇಣಿ, ಹೇಳಿಕೆಗಳು ಮತ್ತು ತೀರ್ಮಾನಗಳು, ಗೋಪುರಾಕೃತಿ, ದರ್ಪಣ ಬಿಂಬಗಳು, ಚಿತ್ರ ಸರಣಿ, ವೆನ್ನ್ ನಕ್ಷೆಗಳು ಮುಂತಾದುವು.

ಬೇರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಂತೆಯೇ ಇಲ್ಲಿಯೂ ಸಮಯ ಬಹಳ ಮುಖ್ಯವಾಗುತ್ತದೆ. ಅತಿ ಹೆಚ್ಚು ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಅತಿ ಕಡಿಮೆ ಸಮಯದಲ್ಲಿ ನೀಡಲು ಅಭ್ಯಾಸ ಮಾಡಬೇಕಾಗುತ್ತದೆ.

ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರಿಸಲು ಮೊದಲು ವಿದ್ಯಾರ್ಥಿಗಳು ತಮ್ಮ ಆಲೋಚನಾ ವಿಧಾನಗಳನ್ನು ಒರೆಗೆ ಹಚ್ಚಬೇಕಾಗುತ್ತದೆ. ಅದಕ್ಕಾಗಿ ಸಾಧ್ಯವಾದಷ್ಟೂ ತಾರ್ಕಿಕ ಮತ್ತು ಕಾರಣೀಭೂತ ಪ್ರಶ್ನೆಗಳನ್ನು ಉತ್ತರಿಸಿ ಅಭ್ಯಾಸ ಮಾಡಿ. ಬೇರೆ ಬೇರೆ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸಿ. ಹಿಂದಿನ ವರ್ಷಗಳ NTSE ಪರೀಕ್ಷೆಯ ಪ್ರಶ್ನಪತ್ರಿಕೆಗಳಿಗೆ ಉತ್ತರಿಸಿ.

ಹಲವು ಪ್ರಶ್ನೆಗಳು ಜಟಿಲವಾಗಿ ಕಂಡರೂ ಅವನ್ನು ಅತ್ಯಂತ ಸುಲಭವಾಗಿ ಬಿಡಿಸುವ ಹಲಾವಾರು ವಿಧಾನಗಳಿವೆ. ಅವುಗಳನ್ನು ತಿಳಿಯಲು ಪ್ರಯತ್ನಿಸಿ. ಕೆಲವು ಸರಳ ವಿಧಾನದ ತಾಳೆ ನೋಡುವ ಪದ್ಧತಿಗಳಿಂದ ಈ ವಿಭಾಗದ ಹಲವಾರು ಪ್ರಶ್ನೆಗಳನ್ನು ಅತ್ಯಂತ ವೇಗವಾಗಿ ಹಾಗೂ ಸರಳವಾಗಿ ಬಿಡಿಸಬಹುದು. ಅವುಗಳ ಬಗ್ಗೆ ತಿಳಿಯಿರಿ. ಈ ರೀತಿಯ ಪ್ರಶ್ನೆಗಳ ಬಗ್ಗೆ ನಿಮ್ಮ ಶಿಕ್ಷಕರು ಹಾಗೂ ಗೆಳೆಯರೊಂದಿಗೆ ಸಮಯಾವಕಾಶವಾದಾಗಲೆಲ್ಲಾ ಚರ್ಚಿಸಿ. ಈ ರೀತಿಯ ಪ್ರಶ್ನೆಗಳನ್ನು ಇಷ್ಟಪಡುವುದನ್ನು ಕಲಿಯಿರಿ.

2.ವ್ಯಾಸಂಗ ಪ್ರವೃತ್ತಿ ಸಾಮರ್ಥ್ಯ ಪರೀಕ್ಷೆ (Scholastic Aptitude Test) : ಈ ಪ್ರಶ್ನೆಪತ್ರಿಕೆಯಲ್ಲೂ ಒಂದು ನೂರು ಬಹು ಅಂಶ ಆಯ್ಕೆ ಪ್ರಶ್ನೆಗಳಿರುತ್ತವೆ. ಒಂದೊಂದು ಪ್ರಶ್ನೆಗೂ ಒಂದೊಂದು ಅಂಕಗಳಿರುತ್ತವೆ. ಇವುಗಳಲ್ಲಿ 40 ಪ್ರಶ್ನೆಗಳು ಸಮಾಜ ವಿಜ್ಞಾನ (ಇತಿಹಾಸ, ಭೂಗೋಳ, ಪೌರನೀತಿ ಮತ್ತು ಅರ್ಥಶಾಸ್ತ್ರ ಆಧಾರಿತ ಪ್ರಶ್ನೆಗಳು), 40 ಪ್ರಶ್ನೆಗಳು ವಿಜ್ಞಾನ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಆಧಾರಿತ ಪ್ರಶ್ನೆಗಳು) ಮತ್ತು 20 ಪ್ರಶ್ನೆಗಳು ಗಣಿತ ವಿಷಯಾಧಾರಿತ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.

ತಳಮಟ್ಟದ ಪಠ್ಯವಸ್ತು ಮತ್ತು ಮೂಲ ವಿಷಯಗಳ ಅಭ್ಯಾಸ ಮಾಡಿ.

ಇಲ್ಲಿಯ ಪ್ರಶ್ನೆಗಳು 10ನೆಯ ತರಗತಿಯ ಪಠ್ಯವಸ್ತು ಮತ್ತು ಪಠ್ಯಕ್ರಮವನ್ನು ಆಧರಿಸಿರುತ್ತವೆ. ಈ ವಿಷಯಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಅಭ್ಯಾಸ ಮಾಡಿ.

ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸಿ.

ಪಠ್ಯವಿಷಯವನ್ನು ಸರಿಯಾದ ರೀತಿ ಮನನ ಮಾಡಿಕೊಳ್ಳಿ.

ಓ.ಎಮ್.ಆರ್. ಹಾಳೆಯಲ್ಲಿ ಸರಿಯಾಗಿ ಮತ್ತು ವೇಗವಾಗಿ ಉತ್ತರಿಸುವುದನ್ನು ಅಭ್ಯಾಸ ಮಾಡಿ.

ಪ್ರಶ್ನೆಪತ್ರಿಕೆಯನ್ನು ಸಮಾಧಾನದಿಂದ ಓದಿ ಮತ್ತು ನಿಮಗೆ ಅತ್ಯಂತ ಹೆಚ್ಚು ಆತ್ಮವಿಶ್ವಾಸವಿರುವ ಮತ್ತು ನಿಖರವಾದ ಉತ್ತರಗಳು ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ.

ಪರೀಕ್ಷಾ ಕೊಠಡಿಯಲ್ಲಿ ಸಮಾಧಾನದಿಂದಿರಿ.

ಮೊದಲನೆಯ ಸುತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಎರಡನೆಯ ಸುತ್ತಿನ ಪರೀಕ್ಷೆಯನ್ನು ರಾಷ್ಟ್ರಮಟ್ಟದಲ್ಲಿ ಎನ್.ಸಿ.ಇ.ಆರ್.ಟಿ, ನವದೆಹಲಿ, ಇವರು ನಡೆಸುತ್ತಾರೆ. ಈ ಸುತ್ತಿನ ಪರೀಕ್ಷೆಯ ವಿವರಗಳಿಗಾಗಿ http://ncert.nic.in ಜಾಲತಾಣವನ್ನು ನೋಡಿ.

( ಲೇಖಕರು ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.