ADVERTISEMENT

ಅಂಗವಿಕಲರಿಗೆ ಪ್ರತ್ಯೇಕ ವಿವಿ ಸ್ಥಾಪಿಸಿ: ದೊರೆಸ್ವಾಮಿ ಸಲಹೆ

ಆರ್ಥಿಕ ಹೊರೆ ಇಲ್ಲದ 5 ಸಲಹೆ ನೀಡಿದ ದೊರೆಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಮೇ 2020, 20:02 IST
Last Updated 28 ಮೇ 2020, 20:02 IST
ದೊರೆಸ್ವಾಮಿ
ದೊರೆಸ್ವಾಮಿ   

ಬೆಂಗಳೂರು: ಉತ್ತರ ಪ್ರದೇಶದಲ್ಲಿ ಇರುವಂತೆ ರಾಜ್ಯದಲ್ಲೂ ಅಂಗವಿಕಲರಿಗಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಬೇಕು, ಅದಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಸರ್ಕಾರ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗಾಗಿ ಮೀಸಲಿಟ್ಟಿರುವ ₹ 9,500 ಕೋಟಿಯಿಂದ ಬಳಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರದ ಶೈಕ್ಷಣಿಕ ಸಲಹೆಗಾರ ಪ್ರೊ.ಎಂ.ಆರ್.ದೊರೆಸ್ವಾಮಿ ಸಲಹೆ ನೀಡಿದ್ದಾರೆ.

ಅವರು ಗುರುವಾರ ಇಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಆರ್ಥಿಕ ಹೊರೆ ಇಲ್ಲದೆ ಅನುಷ್ಠಾನ ಮಾಡಬಹುದಾದ ಐದು ಸಲಹೆಗಳನ್ನು ನೀಡಿದರು. ಇದರ ಬಗ್ಗೆ ಕ್ರಮ ಕೈಗೊಳ್ಳುವ ಆಶ್ವಾಸನೆಯನ್ನು ಮುಖ್ಯಮಂತ್ರಿ ನೀಡಿದರು.‌

ಎಲ್ಲಾ ವಿದ್ಯಾಸಂಸ್ಥೆಗಳಲ್ಲಿ ಮಾರ್ಗದರ್ಶಿತ್ವದ ಪರಿಕಲ್ಪನೆಯನ್ನು ವಿದ್ಯಾರ್ಥಿ ಸ್ನೇಹಿ ಉಪಕ್ರಮವಾಗಿ ಅಳವಡಿಸಿಕೊಳ್ಳಬೇಕು. ಮುಂಚೂಣಿಯಲ್ಲಿರುವ ಸ್ವಾಯತ್ತ ಮತ್ತು ನ್ಯಾಕ್‌ ‘ಎ’ ಕಾಲೇಜುಗಳನ್ನು ಗುರುತಿಸಿ ಸನಿಹದಲ್ಲಿರುವ ಹೊಸದಾಗಿ ಅಭಿವೃದ್ಧಿಯಾಗಬೇಕಿರುವ ಕಾಲೇಜುಗಳೊಂದಿಗೆ ಸಮೂಹ ರಚಿಸಿ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕು. ಮಹಾತ್ಮರ ನೆನಪಿನ ದಿನಗಳಂದು ರಜೆ ನೀಡದೆ ವಿದ್ಯಾರ್ಥಿಗಳಿಗೆ ಮಹಾತ್ಮರ ಸಂದೇಶಗಳನ್ನು ಮನಮುಟ್ಟುವಂತೆ ಪರಿಚಯಿಸಬೇಕು ಹಾಗೂ ಸರ್ಕಾರ, ವಿದ್ಯಾಸಂಸ್ಥೆಗಳು ಅನುಸೂಚಿತ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬ ಸಲಹೆಗಳನ್ನು ಪ್ರೊ.ದೊರೆಸ್ವಾಮಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.