ADVERTISEMENT

ತುಮಕೂರಿಗೆ ಕೃಷ್ಣಪ್ಪ: ತಿಪಟೂರಿಗೆ ಬಸಪ್ಪ

1957–1962ರ ಲೋಕಸಭಾ ಚುನಾವಣೆ, ಎರಡು ಕ್ಷೇತ್ರ, ಹಲವು ಭಾಷ್ಯ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 9:50 IST
Last Updated 24 ಮಾರ್ಚ್ 2014, 9:50 IST

ತುಮಕೂರು: ಎರಡನೇ ಲೋಕಸಭೆ ಚುನಾ­ವಣೆಗೆ ಜಿಲ್ಲೆ ಸೇರಿದಂತೆ ನೆರೆಹೊರೆಯ ಜಿಲ್ಲೆಗಳ ಕೆಲ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ತುಮ­ಕೂರು, ತಿಪಟೂರು ಲೋಕಸಭಾ ಕ್ಷೇತ್ರ ಸೃಷ್ಟಿಯಾಗುತ್ತವೆ. ಮೂರನೇ ಲೋಕಸಭೆ ಚುನಾ­ವಣೆಗೂ ಈ ಕ್ಷೇತ್ರಗಳು ಮುಂದುವರಿಯುತ್ತವೆ.

ಜಿಲ್ಲೆಯಿಂದ ಪ್ರಥಮ ಸಂಸದರಾಗಿ ಆಯ್ಕೆ­ಯಾಗಿದ್ದ ಸಿ.ಆರ್.ಬಸಪ್ಪ ತುಮಕೂರು ಲೋಕ­ಸಭಾ ಕ್ಷೇತ್ರದಿಂದ ಸ್ಪರ್ಧಿಸದೆ ತಿಪಟೂರು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸು­ತ್ತಾರೆ. ಈ ಕ್ಷೇತ್ರದಲ್ಲಿ ವೀರಶೈವ ಮತದಾರರ ಸಂಖ್ಯೆ ಹೆಚ್ಚಿದ್ದರಿಂದ ತಮ್ಮ ಕ್ಷೇತ್ರವನ್ನು ಕೋಲಾರ ಸಂಸದ ಒಕ್ಕಲಿಗ ಸಮುದಾಯದ ಎಂ.ವಿ.ಕೃಷ್ಣಪ್ಪ ಅವರಿಗೆ ಬಿಟ್ಟು ಕೊಟ್ಟು ನೂತನ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ.

ತುಮಕೂರಿನಿಂದ ಒಮ್ಮೆ, ತಿಪಟೂರಿನಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಬಸಪ್ಪ ಹ್ಯಾಟ್ರಿಕ್‌ ವಿಜಯಿಯಾಗು­ತ್ತಾರೆ. ಸಂಸದರಾಗಿದ್ದ ಮೂರು ಅವಧಿಯಲ್ಲಿ ಸಂಸತ್‌ನಲ್ಲಿ ನಡೆದ ಪ್ರಮುಖ ಚರ್ಚೆಗಳಲ್ಲಿ ಒಮ್ಮೆಯೂ ಮಾತನಾಡಲಿಲ್ಲ. ಒಂದೇ ಒಂದು ಪ್ರಶ್ನೆ ಕೇಳಲಿಲ್ಲ. ಕ್ಷೇತ್ರದ ಸಮಸ್ಯೆ ಪ್ರಸ್ತಾಪಿಸಲಿಲ್ಲ ಎಂದು ಆಗಿನ ವಿರೋಧ ಪಕ್ಷದ ಮುಖಂಡರು, ಜಿಲ್ಲೆಯ ಪ್ರಮುಖರು, ರಾಜಕಾರಣಿಗಳ ಟೀಕೆಗೆ ಕೊನೆ ಅವಧಿಯಲ್ಲಿ ಗುರಿಯಾದರು.

57ರ ಚುನಾವಣೆಯಲ್ಲಿ ತಿಪಟೂರು ಕ್ಷೇತ್ರ­ದಿಂದ ಪ್ರಜಾ ಸೋಷಿಯಲಿಸ್ಟ್‌ ಪಕ್ಷದ ಅಭ್ಯರ್ಥಿ­ಯಾಗಿ ಸ್ವಾತಂತ್ರ್ಯ ಹೋರಾಟಗಾರ ಬಿ.ಹುಚ್ಚೇ­ಗೌಡ ಸ್ಪರ್ಧಿಸಿದರೂ; ಬಸಪ್ಪ ಅವರಿಗಿದ್ದ ಬಲದ ಮುಂದೆ ಜಿದ್ದಾಜಿದ್ದಿನ ಪೈಪೋಟಿ ನೀಡಲು ಆಗಲಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿ.ಪಿ.ಗೋಪಾಲಕೃಷ್ಣಶೆಟ್ಟಿ ಚಲಾವಣೆಯಾದ ಮತಗಳಲ್ಲಿ ಶೇ 10ರಷ್ಟು ಮತ ಪಡೆದು ಗಮನಾರ್ಹ ಸಾಧನೆ ತೋರಿದರು.

1962ರ ಚುನಾವಣೆಯಲ್ಲಿ ತಿಪಟೂರು ಕ್ಷೇತ್ರ ಜಿದ್ದಾಜಿದ್ದಿನ ಅಖಾಡವಾಗಿತ್ತು. ಪ್ರಜಾ ಸೋಷಿಯಲಿಸ್ಟ್‌ ಪಕ್ಷ ತನ್ನ ಅಭ್ಯರ್ಥಿ ಬದಲಿಸಿ ಸಿ.ಕೆ.ರಾಜಯ್ಯಶೆಟ್ಟಿ ಅವರನ್ನು ಕಣಕ್ಕಿಳಿಸಿತ್ತು. ಪಕ್ಷೇತರರಾಗಲಿ, ಕಾರ್ಮಿಕ ಸಂಘಟನೆಗಳಾಗಲಿ ಚುನಾವಣೆಗೆ ಸ್ಪರ್ಧಿಸದೆ ಪ್ರಮುಖ ಪಕ್ಷಗಳ ನಾಯಕರಿಗೆ ಬೆಂಬಲ ವ್ಯಕ್ತಪಡಿಸಿದ್ದವು.

ಹ್ಯಾಟ್ರಿಕ್‌ ವಿಜಯ ಪಡೆದರೂ; ಬಸಪ್ಪ ಗೆಲು­ವಿನ ಮತಗಳ ಅಂತರ ಇಳಿಮುಖವಾಗಿತ್ತು. ಮೂರನೇ ಲೋಕಸಭೆ ಚುನಾವಣೆಯೇ ತಿಪ­ಟೂರು ಕ್ಷೇತ್ರಕ್ಕೆ ಕೊನೆ. ನಾಲ್ಕನೇ ಚುನಾವಣೆ ವೇಳೆಗೆ ತಿಪಟೂರು ಕ್ಷೇತ್ರ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ವಿಲೀನವಾಯಿತು.

ತುಮಕೂರು ಕ್ಷೇತ್ರ: ಕೋಲಾರ ಲೋಕಸಭಾ ಕ್ಷೇತ್ರದ ಪ್ರಥಮ ಸಂಸದರಾಗಿ ಆಯ್ಕೆಯಾಗಿದ್ದ ಎಂ.ವಿ.ಕೃಷ್ಣಪ್ಪ ತಮ್ಮ ಕ್ಷೇತ್ರವನ್ನು ಕಾಂಗ್ರೆಸ್‌ನ ಪ್ರಮುಖ ಮುಖಂಡ ಕೆ.ಸಿ.ರೆಡ್ಡಿ ಅವರಿಗೆ ಬಿಟ್ಟುಕೊಟ್ಟು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ­ದರು. 1957, 1962ರ ಚುನಾವಣೆಯಲ್ಲಿ ಸತತ ಗೆಲುವು ದಾಖಲಿಸುವ ಮೂಲಕ ಹ್ಯಾಟ್ರಿಕ್‌ ವಿಜಯದ ನಗೆ ಬೀರಿದರು.

1957ರಲ್ಲಿ ತುಮಕೂರು ಕ್ಷೇತ್ರ ಹೊಸತಾ­ದರೂ ಎಂ.ವಿ.ಕೃಷ್ಣಪ್ಪ ಅವರಿಗೆ ಸವಾಲಾಗಲಿಲ್ಲ. ಹಿರಿಯ ನಾಯಕರು ಸಾಥ್‌ ನೀಡಿದರು. ಕಳೆಗುಂದದ ಕಾಂಗ್ರೆಸ್‌ ವರ್ಚಸ್ಸು ಸಹಕಾರಿ­ಯಾ­ಯಿತು. ಬೆಂಬಲಿಗರ ಪಡೆ ಎಲ್ಲೆಡೆ ಬಿರುಸಿನ ಪ್ರಚಾರ ನಡೆಸಿತು. ಇದರ ಪರಿಣಾಮ ಕಾಂಗ್ರೆಸ್‌ ಅಭ್ಯರ್ಥಿ ಹಿಂದಿನ ಚುನಾವಣೆಗಿಂತ ಶೇ 8ರಷ್ಟು ಹೆಚ್ಚಿನ ಮತ ಪಡೆದರು.

ಈ ಚುನಾವಣೆ ವೇಳೆಗೆ ಸೋಷಿಯಲಿಸ್ಟ್‌ ಪಾರ್ಟಿ ಪ್ರಜಾ ಸೋಷಿಯಲಿಸ್ಟ್‌ ಪಕ್ಷವಾಗಿ ಮಾರ್ಪ­­ಟ್ಟಿತ್ತು. ಜಿಲ್ಲೆಯ ಪ್ರಮುಖ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಬಿ.ಪಿ.ಗಂಗಾಧರಯ್ಯ ಅವರನ್ನು ಕಣಕ್ಕಿಳಿಸಿತು. (ಬಿ.ಪಿ.­ಗಂಗಾಧರಯ್ಯ ನಿವೃತ್ತ ಪೊಲೀಸ್‌ ಅಧಿ­ಕಾರಿ ಬಿ.ಜಿ.ಜ್ಯೋತಿ­ಪ್ರಕಾಶ್‌ ಮಿರ್ಜಿ ಅವರ ತಂದೆ.) ಹಿಂದಿನ ಚುನಾವಣೆಗಿಂತ ಪಿಎಸ್‌ಪಿ ಮತ­ಗಳಿಕೆ ಪ್ರಮಾಣ ಹೆಚ್ಚಿಸಿಕೊಂಡಿದ್ದು ಬಿಟ್ಟರೆ ಕಾಂಗ್ರೆಸ್‌ಗೆ ಪೈಪೋಟಿ ನೀಡಲು ಸಾಧ್ಯವಾಗ­ಲಿಲ್ಲ.

ಜನಸಂಘದಿಂದ ಕೆ.ವಿ.ಸುಬ್ರಮಣ್ಯಸ್ವಾಮಿ ಸಹ ಮತ್ತೊಮ್ಮೆ ಸ್ಪರ್ಧಿಸಿ ಮತ ಗಳಿಕೆ ಪ್ರಮಾಣ ಹೆಚ್ಚಿಸಿಕೊಂಡರು. ಮೊದಲ ಚುನಾವಣೆಯಲ್ಲಿ ಶೇ 8.99 ಮತ ಪಡೆದಿದ್ದರೆ, ಈ ಚುನಾ­ವಣೆ­ಯಲ್ಲಿ ಶೇ 12.80 ಮತ ಪಡೆದು ಸಂಘಟನೆ ಜಿಲ್ಲೆಯಲ್ಲಿ ಸಶಕ್ತವಾಗುತ್ತಿರುವುದನ್ನು ಸಾಬೀತು­ಪಡಿಸಿದರು.

ಜಿಲ್ಲೆಯ ಜನರೊಟ್ಟಿಗೆ ಆತ್ಮೀಯ ಒಡನಾಟ­ವಿಟ್ಟು­ಕೊಂಡಿದ್ದ ಎಂ.ವಿ.ಕೃಷ್ಣಪ್ಪ ಅವರಿಗೆ 1962ರ ಚುನಾವಣೆ ಕಷ್ಟವಾಗಲಿಲ್ಲ. ಆದರೂ ಹಿಂದಿನ ಚುನಾವಣೆಗಿಂತ ಶೇ 12.7 ಕಡಿಮೆ ಮತ ಪಡೆದು ಜಿಲ್ಲೆಯಿಂದ ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾದರು.

1967ರ ಚುನಾವಣೆಯಲ್ಲಿ ತಿಪಟೂರು ಲೋಕಸಭಾ ಕ್ಷೇತ್ರ ರದ್ದಾಗಿದ್ದರಿಂದ ಸಿ.ಆರ್.­ಬಸಪ್ಪ ಮತ್ತೆ ತುಮಕೂರು ಕ್ಷೇತ್ರಕ್ಕೆ ಮರಳಿದರು. ತುಮಕೂರು ಕ್ಷೇತ್ರದಿಂದ ಎಂ.ವಿ.ಕೃಷ್ಣಪ್ಪ ಅವರಿಗೆ 1962ರ ಚುನಾವಣೆಯೇ ಕೊನೆ. ಬಸಪ್ಪ ಅವರಿಗಾಗಿ ಕ್ಷೇತ್ರ ಬಿಟ್ಟುಕೊಟ್ಟ ಕೃಷ್ಣಪ್ಪ ನೂತನ­ವಾಗಿ ರೂಪುಗೊಂಡ ಹೊಸಕೋಟೆ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸತತ ನಾಲ್ಕನೇ ಬಾರಿಗೂ ಸಂಸದರಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದರು.

ಕೃಷ್ಣಪ್ಪ ನಾಲ್ಕು ಅವಧಿಯಲ್ಲಿ ಮೂರು ಬಾರಿ ಬೇರೆ ಕ್ಷೇತ್ರಗಳಿಂದ ಆಯ್ಕೆಯಾಗಿದ್ದರು ಎನ್ನುವುದು ಇಲ್ಲಿ ವಿಶೇಷ.
ಪ್ರಜಾ ಸೋಷಿಯಲಿಸ್ಟ್‌ ಪಕ್ಷ ಪ್ರತಿ ಚುನಾ­ವಣೆ­ಯಲ್ಲೂ ತನ್ನ ಅಭ್ಯರ್ಥಿ ಬದಲಿಸುತ್ತಿತ್ತು. 62ರಲ್ಲಿ ಕೆ.ಎನ್‌.ಶಂಕರಲಿಂಗಪ್ಪ ಅವರನ್ನು ಅಖಾಡ­ಕ್ಕಿಳಿಸಿತು. ಅಭ್ಯರ್ಥಿ ಬದಲಾದರೂ; ಮತದಾರರು ಮಾತ್ರ ಚುನಾವಣೆಯಿಂದ ಚುನಾ­ವಣೆಗೆ ಹೆಚ್ಚಿನ ಪ್ರಮಾಣದ ಮತ ನೀಡಿದರು.

ಈ ಚುನಾವಣೆಯಲ್ಲಿ ಭಾರತೀಯ ಜನಸಂಘ ತನ್ನ ಮತಬ್ಯಾಂಕ್‌ ಉಳಿಸಿಕೊಳ್ಳುವಲ್ಲಿ ವಿಫಲ­ವಾಯಿತು. ಕೆ.ವಿ.ಸುಬ್ರಮಣ್ಯಸ್ವಾಮಿ ಮೂರನೇ ಬಾರಿ ಸ್ಪರ್ಧಿಸಿದರೂ; ಮತದಾರರು ಬೆಂಬಲಿಸ­ಲಿಲ್ಲ. ಹಿಂದಿನ ಚುನಾವಣೆಯಲ್ಲಿ ಗಳಿಸಿದ್ದ ಮತ­ಗಳಿಗಿಂತ ಅರ್ಧದಷ್ಟು ಕಡಿಮೆ ಮತ ಪಡೆದರು. ಆದರೆ ಪಕ್ಷೇತರರಾಗಿ ಸ್ಪರ್ಧಿಸಿದ್ದ ರಾಮಪ್ಪ 45040 (ಶೇ.17.88) ಮತಗಳನ್ನು ಪಡೆ­ಯುವ ಮೂಲಕ ಎಲ್ಲರ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.