ADVERTISEMENT

ದುಡಿಯಲು ಬಂದವರ ವೋಟು, ನೋಟು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:04 IST
Last Updated 19 ಮಾರ್ಚ್ 2014, 19:04 IST
ದುಡಿಯಲು ಬಂದವರ ವೋಟು, ನೋಟು
ದುಡಿಯಲು ಬಂದವರ ವೋಟು, ನೋಟು   

ಬಾಗಲಕೋಟೆ: ‘ನಾನು ಕಳೆದ ಚುನಾವಣೆ­ಯಲ್ಲಿ ಕೇಸರಿ ಬಾವುಟದ ಪಕ್ಷಕ್ಕೆ ವೋಟ್‌ ಮಾಡಿದ್ದೆ. ಈ ಬಾರಿಯೂ ಅದೇ ಪಕ್ಷಕ್ಕೆ ಮಾಡುತ್ತೇನೆ’ ಎಂದು ದಗರು ಲಕ್ಷ್ಮಣ್‌ ನಾಯಿಕಿಲೆ ನಿರುಮ್ಮಳವಾಗಿಯೇ ಹೇಳಿದರು. ನನಗೆ ಅವರ ಮಾತು ಅರ್ಥವಾಗಿಲ್ಲ. ದಗರು ಹೇಳುತ್ತಿರುವುದು ‘ಯಾವ ಪಕ್ಷ’ ಎನ್ನುವು­ದನ್ನು ಖಚಿತಪಡಿಸಿಕೊಳ್ಳಲು ಮತ್ತಷ್ಟು ಮಾತನಾಡಬೇಕಾಯಿತು.

ದಗರು ಜೊತೆಗಾರರಾದ ತೈಯರ್ ಬೇಗ್‌, ಸಂತೋಷ್ ಸಾಧು ದೇವಕತೆ ನನ್ನ ಕಷ್ಟವನ್ನು ಅರ್ಥ ಮಾಡಿಕೊಂಡ­ವರು ‘ಅದು ಶಿವಸೇನಾ’ ಎಂದು ಹೇಳಿದರು. ದಗರು ಒಲವು ಹೊಂದಿರುವ ‘ಪಕ್ಷ’ ಗೊತ್ತಾದ ಮೇಲೆ ‘ನಿಮ್ಮ ಸಂಸದರು ಯಾರು?’ ಎಂದು ಕೇಳಿದೆ. ಆತ ಸಮ್ಮನೆ ನಕ್ಕ. ನನಗೆ ಅರ್ಥವಾಯಿತು. ಇದೇ ಪ್ರಶ್ನೆಯನ್ನು ತೈಯರ್ ಬೇಗ್‌, ಸಂತೋಷ್‌ ಸಾಧು ದೇವಕತೆಗೆ ಕೇಳ­ಲಿಲ್ಲ. ಏಕೆಂದರೆ ಅವರ ಮುಖದ ಮೇಲೆ ದಗರು ರೀತಿಯ ನಗುವನ್ನು ನೋಡು­ವುದು ಇಷ್ಟವಿರಲಿಲ್ಲ.

ದಗರು, ಬೇಗ್, ದೇವಕತೆ ಇವರೆಲ್ಲ ಮಹಾರಾಷ್ಟ್ರದ ಭೀಡ್ ಜಿಲ್ಲೆಯ ಮಾಜಲ­ಗಾಂನವರು. ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರು. ಬಾಗಲ­ಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಸೋರಗಾವ ಬಯಲಲ್ಲಿ ಬೀಡು­ಬಿಟ್ಟಿದ್ದಾರೆ. ಚಿಕ್ಕೋಡಿ–ಮುಧೋಳ ಮಾರ್ಗ­ದಲ್ಲಿ ಸಿಗುವ ಸೋರಗಾವ ಅಂಗನವಾಡಿ ಕೇಂದ್ರದ ಮುಂದೆ ಟ್ರ್ಯಾಕ್ಟರ್ ಧುತ್ತನೆ ಎದುರಾಯಿತು. ಹೀಗಾಗಿ ನಮ್ಮ ವಾಹ­ನದ ವೇಗ ತಗ್ಗಿತು. ನನ್ನ ಎಡ, ಬಲ ಬದಿ­ಯಲ್ಲಿ ಮೂವತ್ತಕ್ಕೂ ಹೆಚ್ಚು ಜೋಪಡಿ­ಗಳು ಕಾಣಿಸಿದವು. ಅವರನ್ನು ಭೇಟಿ ಮಾಡುವ ಸಲುವಾಗಿ ಹೊರಟೆ. ಮರದ ಕೆಳಗೆ ಕುಳಿತು ಒಂದು ಕೈಯಲ್ಲಿ ಬ್ಲೇಡ್, ಮತ್ತೊಂದು ಕೈಯಲ್ಲಿ ಕನ್ನಡಿ ಹಿಡಿದು ತೈಯರ್‌ ಬೇಗ್‌ ಮುಖಕ್ಷೌರ ಮಾಡಿ­ಕೊ­ಳ್ಳುತ್ತಿದ್ದರು. ಆಗ ಮಧ್ಯಾಹ್ನ 2 ಗಂಟೆ ಆಗಿದ್ದರಿಂದ ಕಬ್ಬು ಕಟಾವು ಮಾಡುವು­ದನ್ನು ನಿಲ್ಲಿಸಿ ಎಲ್ಲರೂ ಜೋಪಡಿಗೆ ಬಂದಿದ್ದರು. ಆಗಲೇ ನಮ್ಮ ಮೇಲಿನ ಮಾತುಕತೆ ನಡೆಯಿತು.

ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿ ವರ್ಷ ದೀಪಾವಳಿ ಮುಗಿದ ಕೂಡಲೇ ಮಹಾರಾಷ್ಟ್ರದ ಭೀಡ್‌, ಔರಂಗಾ­ಬಾದ್‌, ನಾಂದೇಡ್‌ ಸೇರಿದಂತೆ ಹಲವು ಜಿಲ್ಲೆಗಳಿಂದ ಕಬ್ಬು ಕಟಾವು ಮಾಡುವ ‘ಗ್ಯಾಂಗ್’ ಗಳು ಬಂದು ನೆಲಸುತ್ತವೆ.  ಎಂಟು ಜೋಡಿಗೆ (ಗಂಡ–ಹೆಂಡತಿ) ‘ಒಂದು ಗ್ಯಾಂಗ್‌’ ಎಂದು ಕರೆಯಲಾಗು­ತ್ತದೆ. ಈ ಕೆಲವು ಗ್ಯಾಂಗ್‌ಗಳಲ್ಲಿ 16 ಜೋಡಿಗಳೂ ಇರುತ್ತವೆ. ಒಂದು ಅಂದಾ­ಜಿನ ಪ್ರಕಾರ ಈ ಭಾಗದಲ್ಲಿ 4 ಸಾವಿರ ‘ಗ್ಯಾಂಗ್’ ಗಳು ಇವೆ. ಸರಾಸರಿ ಒಂದು ಗ್ಯಾಂಗ್ ನಲ್ಲಿ 10 ಜೋಡಿಯಂತೆ ಲೆಕ್ಕವಿಟ್ಟರೂ 64 ಸಾವಿರ ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೊಂದಿಗೆ ಎಳೆಯ ಮಕ್ಕಳೂ ಇರುತ್ತವೆ.

‘ಚುನಾವಣೆ ಇದೆ, ವೋಟ್‌ ಹಾಕಲು ಹೋಗುವುದಿಲ್ಲವೇ?’ ಕುತೂಹಲ­ದಿಂ­ದಲೇ ಕೇಳಿದೆ. ‘ನಾವು ಎಲ್ಲೇ ಇದ್ದರೂ ವೋಟು ಹಾಕುವುದನ್ನು ತಪ್ಪಿಸಿ­ಕೊಳ್ಳು­ವುದಿಲ್ಲ’ ಎಂದರು ಅವರೆಲ್ಲ. ‘ಸಾವಿ­ರಾರು ರೂಪಾಯಿ ಖರ್ಚು ಮಾಡಿ­ಕೊಂಡು ಹೋಗಿ ವೋಟ್‌ ಹಾಕುತ್ತೀ­ರೇನು’ ಎಂದು ಕೇಳಿದೆ. ಆಗ ಅವರು ಸ್ವಾರಸ್ಯಕರ ಸಂಗತಿಯನ್ನು ಹೇಳಿದರು.

ಗ್ರಾಮದ ಮುಖಂಡರಿಗೆ ತಮ್ಮ ಊರಿನ ಯಾರ್‍ಯಾರು ಎಲ್ಲಿಗೆ ದುಡಿ­ಯಲು  ಹೋಗಿದ್ದಾರೆ ಎನ್ನುವ ಪಕ್ಕಾ ಮಾಹಿತಿ ಇರುತ್ತದೆ. ಹೀಗಾಗಿ ಅವರು ಯಾವುದೇ ಚುನಾವಣೆ ಇದ್ದರೂ ವಾಹನದ ವ್ಯವಸ್ಥೆ ಮಾಡುತ್ತಾರೆ. ಇವರು ಇಲ್ಲಿಂದ ತಮ್ಮ ಊರಿಗೆ ಹೋಗಿ ವೋಟ್‌ ಹಾಕುತ್ತಾರೆ. ಹೋಗಿ ಬರಲು ಮೂರು ದಿನಗಳು ಬೇಕು. ಮೂರು ದಿನದ ಕೂಲಿ, ಊಟ, ತಿಂಡಿ, ಚಹಾ ಪಾನಿ, ಬಸ್‌ ಟಿಕೆಟ್‌ ಜೊತೆಗೆ ‘ಖುಷಿ’ ತಲಾ ₨1000 ಕೊಡುತ್ತಾರೆ. ಇವರು ಅಲ್ಲಿಗೆ ಹೋಗಿ ತಮ್ಮ ಊರಿನ ಮುಖಂಡ ಹೇಳಿದವರಿಗೆ ವೋಟ್‌ ಹಾಕು­ತ್ತಾರೆ. ಮುಂದೆ ಊರಿನ ಮುಖಂಡ­ನಿಂದ ಕರೆ ಬರುವತನಕ ರಾಜಕೀಯವನ್ನೇ ಮರೆತು ಬಿಡುತ್ತಾರೆ.

ಮುಧೋಳ–ಅನಗವಾಡಿ ರಸ್ತೆಯಲ್ಲಿ ಪ್ರಯಾಣ ಮುಂದುವರೆದಿತ್ತು. ಮುಧೋಳ­ದಿಂದ 12 ಕಿಲೋಮೀಟರ್‌ ದಾಟಿದಾಗ ರಸ್ತೆ ಮಗ್ಗುಲಲ್ಲಿ ‘ಇಂಗಳಗಿ’ ಎನ್ನುವ ನಾಮಫಲಕ ಕಾಣಿಸಿತು. ನನಗೆ ಈ ಹೆಸರು ಪರಿಚಿತ ಅನಿಸಿ, ರಸ್ತೆ ಪಕ್ಕದಲ್ಲಿದ್ದವರನ್ನು ವಿಚಾರಿಸಿದೆ. ಹೌದು, ಅದೇ ಇಂಗಳಗಿ. ಎಚ್‌.ಡಿ.­ಕುಮಾರಸ್ವಾಮಿ (2007) ಮುಖ್ಯ­ಮಂತ್ರಿ­ಯಾಗಿದ್ದಾಗ ಇದೇ ಗ್ರಾಮದ ಎಚ್‌ಐವಿ ಬಾಧಿತರ ಮನೆಯಲ್ಲಿ ‘ವಾಸ್ತವ್ಯ’ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆದುಕೊಂಡಿ­ದ್ದರು. ಆ ಕುಟುಂಬವನ್ನು ಮಾತನಾಡಿಸ­ಬೇಕು ಎನ್ನುವ ಪ್ರಯತ್ನ ಫಲ ಕೊಡ­ಲಿಲ್ಲ. ಕುಮಾರಸ್ವಾಮಿಯವರ ವಾಸ್ತವ್ಯ, ನಂತರದಲ್ಲಿ ಮಾಧ್ಯಮಗಳಿಂದ ಅವರ ನೆಮ್ಮದಿ ಹಾಳಾಗಿತ್ತು. ಅವರು ಇಂಗಳಗಿ ಬಿಟ್ಟು ಪಕ್ಕದ ಹಳ್ಳಿಗೆ ಹೋಗಿ ನೆಲೆಸಿದ್ದಾರೆ.

‘ಕುಮಾರಸ್ವಾಮಿ ಗ್ರಾಮ ವಾಸ್ತವ್ಯ­ದಿಂದ ಆ ಕುಟುಂಬಕ್ಕೆ ನಯಾ ಪೈಸೆ ಉಪಯೋಗವಾಗಲಿಲ್ಲ. ಅವರಿಗೆ ದೊಡ್ಡ ಪ್ರಮಾಣದ ಪ್ರಚಾರ ಸಿಕ್ಕಿತು. ಸ್ಥಳೀಯ ಶಾಸಕರಾದ ಗೋವಿಂದ ಕಾರಜೋಳ ₨ 30 ಸಾವಿರ ಕೊಟ್ಟರು’ ಎಂದ ಬಿಜೆಪಿ ಮುಖಂಡ ಲಕ್ಷ್ಮಣ ಚಿನ್ನಣ್ಣವರ್, ‘ಬಾಗಲಕೋಟೆ ಕ್ಷೇತ್ರ­ದಲ್ಲಿ ವಾತಾವರಣ ಹೇಗಿದೆ’ ಎಂದು ವಿಚಾರಿಸಿಕೊಂಡರು. ನಂತರ ‘ನಮ್ಮ ಪಕ್ಷಕ್ಕೆ ವಾತಾವರಣ ಚೆನ್ನಾಗಿದೆ’ ಎಂದು ಹೇಳಿಕೊಂಡು ಸಮಾಧಾನಪಟ್ಟರು. 

ಮುಧೋಳದಿಂದ ಬಾಗಲಕೋಟೆಗೆ ಹೊರಟಾಗ ದಾರಿ ಮಧ್ಯದಲ್ಲಿ ಗುಂಪು ಗುಂಪಾಗಿ ಜನರು ಕಾಲ್ನಡಿಗೆಯಲ್ಲಿ ಸಾಗುವುದು ಕಾಣಿಸುತ್ತಿತ್ತು. ಕಜ್ಜಿ­ಡೋಣಿ ಎನ್ನುವ ಊರಿನ ರಸ್ತೆ ಪಕ್ಕದಲ್ಲಿ ಊಟ ಮಾಡುತ್ತಿದ್ದ ತಂಡದೊಂದಿಗೆ ಸೇರಿಕೊಂಡೆ. ಇವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನವರು. 500 ರಿಂದ 600 ಮಂದಿ ಇದ್ದರು. ಶ್ರೀಶೈಲ ಕ್ಷೇತ್ರಕ್ಕೆ ಪಾದ­ಯಾತ್ರೆ ಹೊರಟಿದ್ದರು.

‘ನಾವು ಯಾತ್ರಿಗ ವೊಂಟೀವ್ರಿ. ಎಲೆಕ್ಷನ್‌ ಮಾತ ಆಡೋದಿಲ್ರಿ. ನಮ್ಮದು ದೇವರ ಸ್ಮರಣ ಅಷ್ಟಾ’ ಎಂದು ಸೌಮ್ಯ­ವಾಗಿಯೇ ಹೇಳಿದರು ಬಾಳಪ್ಪ ಚಂದರಗಿ. ನಾವು ರಾಜಕೀಯ ವಿಷಯಕ್ಕೆ ವಿರಾಮ ಹಾಕಿದೆವು. ಯಾತ್ರಿಗಳಿಗೆ ‘ಅನ್ನ ದಾಸೋಹ’ದ ವ್ಯವಸ್ಥೆ ಮಾಡಿದ್ದ ಕಜ್ಜಿಡೋಣಿಯ ತಿಮ್ಮಪ್ಪ ಅರಕೇರಿ ಸುಮ್ಮನಾಗಲಿಲ್ಲ. ‘ಜಾತಿ ಮೇಲೆ ಎಲೆಕ್ಷನ್ ರ್ರೀ. ಯಾರ್‌ ಕೇಳಿದ್ರೂ ಪಕ್ಷ ನೋಡೋದಿಲ್ರಿ. ಜಾತಿ ನೋಡ್ತಾರ. ನಾನು ರೆಡ್ಡಿ ಅದ್ದೀನಿ. ನಮ್‌ ಜಾತಿ ಅಭ್ಯರ್ಥಿಗೆ ವೋಟ್‌ ಹಾಕ್ತೀನ್ರಿ’ ಎಂದು ಎಲ್ಲರ ಮುಂದೆ ಘೋಷಿಸಿಯೆ ಬಿಟ್ಟರು. ಇವರು ಜಾತಿ ವಿಷಯವನ್ನು ಎತ್ತಿದ ಕೂಡಲೇ ಚರ್ಚೆ ಕಾವೇರಿತು.

‘ಜಾತಿ ನೋಡಿ ವೋಟ್‌ ಮಾಡೋದು ತಪ್ಪು ಅನಿಸುವುದಿಲ್ವೆ?’ ನಾನು ಕೇಳಿದೆ. ‘ರಾಜಕಾರಣಿಗಳೇ ಮೊದಲು ಜಾತಿ ತಂದು ನಮ್ಮನ್ನು ಒಡೆದು ಗೆದ್ದು ತಮ್ಮ ಲಾಭ ಮಾಡಿ­ಕೊಳ್ಳುತ್ತಾರೆ’ ಎಂದು ಮತ್ತೊಬ್ಬರು ಮಾತು ಸೇರಿಸಿದರು.‘ನಮ್ಮ ಕ್ಷೇತ್ರದಲ್ಲಿ ಪಿ.ಸಿ.ಗದ್ದಿಗೌಡರ ಗಾಣಿಗರು, ಅಜಯ್ ಕುಮಾರ್‌ ಸರನಾಯಕ್‌ ರೆಡ್ಡಿ. ಎರಡೂ ಜಾತಿಯ­ವರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಪಕ್ಷಕ್ಕಿಂತ ಜಾತಿ ಮೇಲೆ ಚುನಾವಣೆ ನಡೆಯುತ್ತದೆ’ ಎನ್ನುವ ಮಾತು ಬಂದಿತು. ಅವರ ಮಾತಿಗೆ ಸಾಕ್ಷ್ಯ ಒದಗಿಸುವವರಂತೆ ಆವೇಶದಿಂದ ಮಾತ­ನಾಡಿದ ತಿಮ್ಮಪ್ಪ ಅರಕೇರಿ ‘ನಾನು ಕಾಂಗ್ರೆಸ್‌ನವನು. ನನಗೆ ಪಕ್ಷ ಮುಖ್ಯ­ವಲ್ಲ; ನಮ್ಮ ಜಾತಿಯವನು ಬಿಜೆಪಿ­ಯಿಂದ ನಿಂತಿದ್ದರೆ ಅವನಿಗೇ ವೋಟ್‌ ಹಾಕುತ್ತಿದ್ದೆ’ ಎಂದೂ ಹೇಳಿದರು.

ಪಕ್ಕದ ಬಯಲಲ್ಲಿ ನೂರಾರು  ಯಾತ್ರಿಗಳು ಪ್ರಸಾದ ಸೇವಿಸುತ್ತಿದ್ದರು. ಯಾತ್ರೆಯ ನೇತೃತ್ವ ವಹಿಸಿಕೊಂಡಿದ್ದ ಬಾಳಪ್ಪ ಚಂದರಗಿ ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಕೈಗೆ ತಟ್ಟೆ ಕೊಟ್ಟರು. ಅಲ್ಲಿಂದ ಬಾಗಲಕೋಟೆಗೆ ಹೊರಡು­ವಾಗ ರಾತ್ರಿ 10 ಗಂಟೆಯಾಗಿತ್ತು. ಪ್ರಯಾಣ ಮುಂದುವರೆದಿತ್ತು. ‘ಪಕ್ಷಕ್ಕಿಂತ ಜಾತಿ ಮುಖ್ಯ’ ಎಂದು ತಿಮ್ಮಪ್ಪ ಅರಕೇರಿ ಹೇಳಿದ ಮಾತು ಬಾಗಲಕೋಟೆ ಕ್ಷೇತ್ರದ ತುಂಬ ಪ್ರತಿಧ್ವನಿಸುತ್ತಿದೆಯೋ ಏನೋ ಅನಿಸಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.