ADVERTISEMENT

ದೊಡ್ಡ ‘ ನಾಯಕ’ ರಿಗೆ ‘ಆಮ್‌ ಆದ್ಮಿ ’ ಸವಾಲು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST
ಗ್ರಾಮದ ತೋಟದಲ್ಲಿ ಎತ್ತುಗಳ ಜತೆ ಭೀಮರಾಯ
ಗ್ರಾಮದ ತೋಟದಲ್ಲಿ ಎತ್ತುಗಳ ಜತೆ ಭೀಮರಾಯ   

ರಾಯಚೂರು: ‘ಭೀಮರಾಯ ವಗದಂಬಳ್ಳಿ ಅವರ ಮನೆ ಎಲ್ಲಿದೆ’– ಹೀಗೆಂದು ದೇವ­ದುರ್ಗ ಮಾರ್ಗದಲ್ಲಿರುವ ಪಿಲಿಗುಂಡ ಗ್ರಾಮದ ರಸ್ತೆ ಪಕ್ಕದಲ್ಲಿ ನಿಂತಿದ್ದವರನ್ನು ಕೇಳಿದೆ. ಅವರು ‘ಅದೇ, ಅಮ್‌ ಆದ್ಮಿ ಪಾರ್ಟಿ ಭೀಮರಾಯ ಅಲ್ವೆ’ ಎಂದು ಕೇಳಿ­ದರು. ‘ಹೌದು’ ಎನ್ನುವಂತೆ ತಲೆ ಆಡಿಸಿದೆ. ಅವರು ಕಚ್ಚಾ ರಸ್ತೆಯತ್ತ ಕೈ ತೋರಿಸಿ, ‘ಇಲ್ಲಿಂದ ಮೂರು ಕಿಲೋಮೀಟರ್‌ ಹೋದರೆ ಅವರ ತೋಟ ಸಿಗುತ್ತದೆ’ ಎಂದು ದಾರಿ ತೋರಿಸಿದರು.

ಹೊಲದ ನಡುವೆ ಪುಟ್ಟ ಮನೆ ಕಾಣಿಸಿತು. ‘ಅದೇ ಮನೆ ಇರಬಹುದಾ?’ ಎಂದುಕೊಳ್ಳು­ವಷ್ಟರಲ್ಲೇ ಬಡಕಲು ದೇಹದ ವ್ಯಕ್ತಿಯೊ­ಬ್ಬರು ತಲೆ ಮೇಲೆ ಟೋಪಿ ಹಾಕಿಕೊಂಡು ನಮ್ಮತ್ತಲೇ ಬರುತ್ತಿದ್ದರು. ಇಷ್ಟರಲ್ಲಿ ಖಾತರಿ ಆಗಿತ್ತು. ಇವರೇ ಭೀಮರಾಯ ಎನ್ನುವುದು.

ಇವರು ದೇವದುರ್ಗ ತಾಲ್ಲೂಕಿನ ಜರದ­ಬಂಡಿ ಗ್ರಾಮದವರು. ಹೊಲದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಈಗ ರಾಯಚೂರು ಲೋಕಸಭಾ (ಎಸ್‌ಟಿ ಮೀಸಲು) ಕ್ಷೇತ್ರದಲ್ಲಿ ‘ಆಮ್‌ ಆದ್ಮಿ ಪಾರ್ಟಿ’ (ಎಎಪಿ) ಅಭ್ಯರ್ಥಿ.

ಚುನಾವಣಾ ಯಾತ್ರೆಯಲ್ಲಿ ಘಟಾನು­ಘಟಿ­ಗಳು, ಶ್ರೀಮಂತರು, ಬಲಾಢ್ಯ ಅಭ್ಯರ್ಥಿ­ಗಳೇ ಸಿಗುತ್ತಿದ್ದರು. ಈ ಕ್ಷೇತ್ರದಲ್ಲಿಯೂ ಮೂವರು ದೊಡ್ಡ ‘ನಾಯಕ’ರು  ಶಿವನ­ಗೌಡ ನಾಯಕ (ಬಿಜೆಪಿ), ಬಿ.ವಿ.ನಾಯಕ (ಕಾಂಗ್ರೆಸ್‌), ಅಮರೇಶ ನಾಯಕ (ಜೆಡಿಎಸ್‌) ಕಣದಲ್ಲಿದ್ದಾರೆ. ಇವರ ಎದುರು ‘ಆಮ್‌ ಆದ್ಮಿ’ ಭೀಮರಾಯನವರೂ ಇದ್ದಾರೆ.  ‘ಅರಮನೆ’ಗಳನ್ನು ಬಿಟ್ಟು ಆಮ್‌ ಆದ್ಮಿ ಯ ‘ತೋಟದ ಮನೆ’ಯಲ್ಲಿದ್ದೆ.

ಭೀಮರಾಯ ಅವರಿಗೆ ಒಂದಾದ ಮೇಲೆ ಒಂದರಂತೆ ಕರೆಗಳು ಬರುತ್ತಲೇ ಇದ್ದವು. ಅವು ‘ಆಮ್‌ ಆದ್ಮಿ ಪಾರ್ಟಿ’ಯ ಅಭಿಮಾನಿ­ಗಳದ್ದಾಗಿದ್ದವು. ‘ನಮ್ಮ ಊರಿಗೆ ಯಾವಾಗ ಬರು­ತ್ತೀರಿ’ ಎನ್ನುವ ಒತ್ತಾಯ ಆ ಕಡೆಯಿಂದ ಇರುತ್ತಿತ್ತು.  ತೋಟ­ದಲ್ಲಿ ಮೇಯಲು ಬಿಟ್ಟಿದ್ದ ಹಸುಗಳು ಎತ್ತಲೋ ಓಡುತ್ತಿದ್ದವು. ಅವುಗಳನ್ನು ಹಿಡಿದು ತಂದು ಕಟ್ಟಿದ ಭೀಮ­ರಾಯ ಅವರು ಮಾತಿಗೆ ಅಣಿ­ಯಾದರು. ಅವರೊಂದಿಗೆ ತುಂಬಾ ಹೊತ್ತು ಮಾತನಾಡಿದ ಮೇಲೆ ಗೊತ್ತಾಗಿದ್ದು ಇಷ್ಟು.

ಹೋರಾಟಗಾರ: ಭೀಮರಾಯ ಬಡ­ಕುಟುಂಬದಲ್ಲಿ ಹುಟ್ಟಿದ­ವರು. ಡಿಪ್ಲೊಮಾ ಓದಿಗೆ ಮೊದಲ ವರ್ಷ­ದಲ್ಲೇ ನಮಸ್ಕಾರ ಹೇಳಿದರು. ಬೆಂಗಳೂರಿಗೆ ಹೋಗಿ ಕೂಲಿ ಕಾರ್ಮಿಕ ಗುತ್ತಿಗೆ­ದಾರರಾಗಿ ಕೆಲಸ ಮಾಡುತ್ತಲೇ ‘ಅಸಂಘಟಿತ ಕೂಲಿ ಕಾರ್ಮಿ­ಕರ ಸಂಘ’ ಕಟ್ಟಿದರು. ಬಳಿಕ ಮರಳಿ ಗ್ರಾಮಕ್ಕೆ  ಬಂದರು.

ಇವರಿಗೆ 11 ಎಕರೆ ಭೂಮಿ ಇದೆ. ಆರು ಮಂದಿ ಮಕ್ಕಳು. 1987 ರಲ್ಲಿ ವಗಡಂಬಳ್ಳಿ ಗ್ರಾಮದಿಂದ ಕರಿಗುಡ್ಡ ಮಂಡಲ ಪಂಚಾಯಿತಿಗೆ ಅವಿರೋಧ­ವಾಗಿ ಆಯ್ಕೆಯಾಗಿ, ಪ್ರಧಾನರೂ ಆಗಿದ್ದರು. 1990 ರಲ್ಲಿ ಪತ್ನಿ ಭೀಮವ್ವ ಗ್ರಾಮ ಪಂಚಾಯಿತಿ ಸದಸ್ಯೆ­ಯಾಗಿದ್ದರು. ಸರ್ಕಾರ, ಬ್ಯಾಂಕುಗಳು ನೀಡುವ ವಿವಿಧ ಸವಲತ್ತುಗಳನ್ನು ಕೊಡಿಸುವ ಮೂಲಕ ರೈತರಿಗೆ ನೆರವಾಗು­ತ್ತಿದ್ದಾರೆ.

ಅಭ್ಯರ್ಥಿಯಾದ ಜಾದು: ಭೀಮ­ರಾಯ ಅವರು ಮಾಹಿತಿ ಹಕ್ಕಿನ ಬಗ್ಗೆ ತಿಳಿದುಕೊಂಡಿದ್ದು, ದೇವದುರ್ಗ ತಾಲ್ಲೂ­ಕಿನಲ್ಲಿ ನಡೆದಿರುವ ಅವ್ಯವ­ಹಾರ, ಹಗರಣಗಳನ್ನು ಹೊರ ತೆಗೆ­ಯುವುದರಲ್ಲಿ ನಿರತರಾಗಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಭ್ರಷ್ಟಾ­ಚಾರ ವಿರುದ್ಧ ಸಮರ ಸಾರಿರುವ ಜನ ಸಂಗ್ರಾಮ ಪರಿಷತ್‌ ಜೊತೆ ನಂಟು ಬೆಳೆಸಿಕೊಂಡಿದ್ದಾರೆ. ಪರಿಷತ್‌ನ ಕಾರ್ಯಾ­ಧ್ಯಕ್ಷ ವಸಂತ ಕುಷ್ಟಗಿ, ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಅವರಿಗೆ ದಾಖಲೆಗಳನ್ನು ಒದಗಿಸುವ ಕೆಲಸವನ್ನು ಇವರೇ ಮಾಡುತ್ತಿದ್ದಾರೆ.

‘ದೇವದುರ್ಗದಲ್ಲಿ ಕೈಗಾರಿಕಾ ಸ್ಥಾಪನೆಗಾಗಿ ಕೆಐಡಿಬಿಯು ರೈತರಿಂದ ಭೂಮಿ ಸ್ವಾಧೀನಪಡಿಸಿ­ಕೊಂಡಿತು. ಏಕಗವಾಕ್ಷಿ ಸಮಿತಿ ಮೂಲಕ ಅಂದಿನ ಸಚಿವ ಶಿವನಗೌಡ ನಾಯಕ ಹಾಗೂ ರಂಗಣ್ಣ ಅಳ್ಳುಂಡಿ ಸಂಬಂಧಿಕರೇ 28 ನಿವೇಶನಗಳನ್ನು ಹಂಚಿಕೊಂಡರು. ಇದು ನನಗೆ ಗೊತ್ತಾಯಿತು. ಭೀಮರಾಯ ಅವರಿಂದ ದಾಖಲೆ ಪಡೆದು ಹೋರಾಟ ರೂಪಿಸಿದೆ. ಈಗಿನ ಜಿಲ್ಲಾಧಿಕಾರಿ ನಿವೇಶನ ಹಂಚಿಕೆಯನ್ನು ರದ್ದುಪಡಿಸಿ­ದರು’ ಎಂದು ಜನ ಸಂಗ್ರಾಮ ಪರಿಷತ್‌ನ ಕಾರ್ಯಾ­ಧ್ಯಕ್ಷ ವಸಂತ ಕುಷ್ಟಗಿ ರಾಯಚೂರಿನಲ್ಲಿ ಸಿಕ್ಕಾಗ ನೆನಪಿಸಿದರು.

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಂಗ್ರಹಿಸಿರುವ ಕಂತೆ ಕಂತೆ ದಾಖಲೆ­ಗಳನ್ನು ಜೋಪಾನವಾಗಿ ಕಾಪಾಡಿ­ಕೊಂಡಿದ್ದಾರೆ.
ಅಲ್ಲಿಂದ ನಾನು ರಾಯಚೂರಿನತ್ತ ಹೊರಡಲು ಅಣಿ­ಯಾದೆ. ಭೀಮರಾಯ  ಓಡಾಡುವುದು ಬಸ್ಸಿನಲ್ಲೇ. ಇದು ಗೊತ್ತಾಗಿ ನಮ್ಮ ಕಾರಿನಲ್ಲೇ ಅವರನ್ನು ಕೂರಿಸಿಕೊಂಡೆ. ಇವರ ತೋಟದ ಮನೆಯಿಂದ ಹೋಗುವ ರಸ್ತೆ, ಚೆಕ್‌ ಡ್ಯಾಂ,  ನಮ್ಮ ಗ್ರಾಮ, ನಮ್ಮ ರಸ್ತೆ, ಜಲ ನಿರ್ಮಲ ಯೋಜನೆಗಳ ಅಡಿಯಲ್ಲಿ ನಡೆದಿರುವ ಅವ್ಯವಹಾರಗಳಿಗೆ ಪುರಾವೆಗಳನ್ನು ದಾರಿ­ಯುದ್ದಕ್ಕೂ ತೋರಿಸುತ್ತಲೇ ಇದ್ದರು.

ಭೀಮರಾಯ ಅವರ ಜತೆಗಿದ್ದ ಕೋತಿಗುಡ್ಡದ ರೈತ ಚಿದಾನಂದ ಬಲ್ಲಿದವರ್‌, ‘ನಾನು ಶಿವನಗೌಡ ನಾಯಕರ ಬೆಂಬಲಿಗನಾಗಿದ್ದೆ. ಅವರ ಭ್ರಷ್ಟಾಚಾರವನ್ನು ನೋಡಿ ರೋಸಿ ಹೋಗಿ ಆಮ್‌ ಆದ್ಮಿ ಪಕ್ಷವನ್ನು ಬೆಂಬಲಿಸುತ್ತಿದ್ದೇನೆ’ ಎಂದು ಹೇಳಿಕೊಂಡರು.

ಕಾಕರಕಲ್‌ ರಸ್ತೆಯಲ್ಲಿ ನಿಂತಿದ್ದ ಹಿರಿಯರೊಬ್ಬರು ಭೀಮರಾಯ ಅವರನ್ನು ಕಂಡು ‘ಪ್ರಚಾರಕ್ಕೆ ಹೊರಟಿರಾ?’ ಎಂದು ವಿಚಾರಿಸಿಕೊಂಡರು. ಮೊಬೈಲ್‌ಗೆ ಬಿಡುವೇ ಇರಲಿಲ್ಲ. ಕೆಲವು ವಿದ್ಯಾರ್ಥಿಗಳು ಕರೆ ಮಾಡಿ ‘ನೀವು ನಮ್ಮ ಹಾಸ್ಟೆಲ್‌ಗೆ ಬನ್ನಿ’ ಎಂದು ಆಹ್ವಾನಿಸಿದರು.

‘ಮುತ್ಯಾ (ವೆಂಕಟೇಶ ನಾಯಕ) ಮಗ (ಬಿ.ವಿ.ನಾಯಕ) ಮೊಮ್ಮಗ (ಶಿವನಗೌಡ ನಾಯಕ) ಇವರೇ ಯಾಕೆ ನಿರಂತರವಾಗಿ ಅಧಿಕಾರದಲ್ಲಿ ಇರಬೇಕು. ಇವರಿಗೆ ಪರ್ಯಾಯವಾಗಿ ಯಾರು ಇಲ್ಲವೇ ಎನ್ನುವ ಪ್ರಶ್ನೆ ಕಾಡುತ್ತಿತ್ತು. ಅಷ್ಟರಲ್ಲಿ ಆಮ್‌ ಆದ್ಮಿ  ನನಗೆ ಟಿಕೆಟ್‌ ಕೊಟ್ಟಿತು. ಶಿವನಗೌಡ ನಾಯಕ, ಬಿ.ವಿ.ನಾಯಕ,  ಅಮರೇಶ ನಾಯಕ ಅವರ ಎದುರು  ಪ್ರತಿಭಟನೆ ಎಂಬಂತೆ ನಿಂತಿದ್ದೇನೆ’ ಎಂದು ತಮ್ಮ ಸ್ಪರ್ಧೆಗೆ ಕಾರಣವನ್ನು ಕೊಟ್ಟರು.

‘ವೋಟು–ನೋಟು’ ಘೋಷಣೆಯೊಂದಿಗೆ ‘ಆಮ್‌ ಆದ್ಮಿ ಪಕ್ಷ’ವು ಮತದಾರರ ಮುಂದೆ ಹೋಗುತ್ತಿದೆ. ಭೀಮರಾಯ ಅವರ ಹೆಗಲಲ್ಲಿ ಚೀಲ ನೇತಾಡುತ್ತಿತ್ತು. ಇವರು ಅದನ್ನು ಜೋಪಾನ ಮಾಡುತ್ತಿದ್ದರು. ‘ಅದರಲ್ಲಿ ಏನಾದರೂ ದಾಖಲೆಗಳು ಇವೆಯೇ?’ ಎಂದು ಕೇಳಿದೆ. ‘ಜೋಡಿ ಅರವಿ ಅದಾವ್ರಿ. ಪ್ರಚಾರ ಮಾಡುವಾಗ ರಾತ್ರಿ ಯಾವುದಾದರೂ ಊರಲ್ಲಿ ವಸ್ತಿ ಮಾಡ್ತೀನಿ. ಮುಂಜಾನೆ ಮುಂದಿನ ಊರಿಗೆ ಹೋಗತೀನಿ’ ಎಂದು ನಕ್ಕರು.

ಮಧ್ಯಾಹ್ನದ ಊಟದ ಹೊತ್ತು ಮೀರಿತ್ತು. ಆದರೂ ಒತ್ತಾಯ ಮಾಡಿ  ಖಾನಾವಳಿಗೆ ಕರೆದುಕೊಂಡು ಹೋದರು. ಅಲ್ಲಿ ಊಟಕ್ಕೆ ಕುಳಿತಿದ್ದವರು ಒಬ್ಬೊಬ್ಬರಾಗಿ ತಲೆ ಎತ್ತಿ ಇವರನ್ನೇ ನೋಡುತ್ತಿದ್ದರು. ಭೀಮರಾಯ ಅವರತ್ತ ಕೈ ಮುಗಿದು ಊಟಕ್ಕೆ ಕುಳಿತರು. ಇವರ ತಲೆ ಮೇಲೆ ‘ಆಮ್‌ ಆದ್ಮಿ ಟೋಪಿ’ ಇತ್ತು. ಇದನ್ನು ಗಮನಿಸಿದ ಕೆಲವರು ತಮ್ಮಲ್ಲಿಯೇ ಪರಸ್ಪರ ‘ಆಮ್‌ ಆದ್ಮಿ ಪಕ್ಷ’ದ ಬಗ್ಗೆ ಚರ್ಚೆ ಆರಂಭಿಸಿದರು.

‘ನಮ್ಮ ಧರ್ಮ ಪಾಲಿಸಿದ್ದೇವೆ ಇನ್ನು ಅವರದು’
‘ನಾವು (ಮತದಾರರು) ನಮ್ಮ ಧರ್ಮ­ವನ್ನು ಪಾಲಿಸಿದ್ದೇವೆ. ಇನ್ನು ಅವರು (ಶಾಸಕ ಹಂಪಯ್ಯ ನಾಯಕ) ತಮ್ಮ ಧರ್ಮವನ್ನು ಪಾಲಿ­ಸಬೇಕು’–ಮಾನ್ವಿ ತಾಲ್ಲೂಕಿನ ನೀರಮಾನ್ವಿ ಕಡೆ­ಯಿಂದ ಸಿರವಾರ ರಸ್ತೆಯಲ್ಲಿ ಸಾಗುತ್ತಿದ್ದಾಗ ಸಿಕ್ಕ ದನಗಾಹಿ ಅಮರೇಶ ಭೂಮಿತೂಕದ ಮಾತು ಹೇಳಿದರು.

ಸಿರವಾರ ರಸ್ತೆ ಹಳ್ಳದಲ್ಲಿದೆಯೋ ಅಥವಾ ಹಳ್ಳವೇ ರಸ್ತೆಯಾಗಿದೆಯೋ ಎನ್ನುವುದು ತಿಳಿಯುವುದೇ ಕಷ್ಟ. 20 ಕಿಲೋಮೀಟರ್‌ ರಸ್ತೆಯನ್ನು ಕ್ರಮಿಸಲು 1 ಗಂಟೆ ಹಿಡಿಯಿತು. ‘ರಸ್ತೆ ಇಷ್ಟೊಂದು ಅಧ್ವಾನವಾಗಿದೆ. ನೀವು ಶಾಸಕರನ್ನು ಕೇಳುವುದಿಲ್ಲವೇ?’ ಎಂದಾಗ ‘ಧರ್ಮ’ದ ಮಾತು ಹೇಳಿ ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT