ADVERTISEMENT

ಮುಸ್ಲಿಮರ ಮತ ಕಬಳಿಸಲು ಹೊಂಚು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2014, 19:30 IST
Last Updated 10 ಏಪ್ರಿಲ್ 2014, 19:30 IST

ಸಹಪುರ ಕ್ಯಾಂಪ್‌ (ಉತ್ತರ ಪ್ರದೇಶ): ಅವರೆಲ್ಲ ಹುಟ್ಟೂರು ಬಿಟ್ಟು ಬಂದಿ­ದ್ದಾರೆ. ಅಜ್ಜ–ಮುತಜ್ಜನ ಕಾಲ­ದಿಂದ ಬಾಳಿ– ಬದುಕಿದ ಹಳ್ಳಿಗಳಿಗೆ ಮತ್ತೆ ಹಿಂತಿರುಗಬಾರದೆಂಬ ನಿರ್ಧಾರ ಮಾಡಿ­­ದ್ದಾರೆ. ಊರು, ಆಸ್ತಿ–ಪಾಸ್ತಿ ಎಲ್ಲವನ್ನು ಬಿಟ್ಟು ಬರುವವರ ನೋವು­– ಸಂಕಟ, ತಳಮಳಗಳು ಎಲ್ಲರಿಗೂ ಅರ್ಥವಾಗು­ವು­ದಿಲ್ಲ.

ಅದನ್ನು ಅನು­ಭವಿ­ಸಿ­ದವರಿಗೆ ಮಾತ್ರ ಗೊತ್ತಿರುತ್ತದೆ. ಅಣೆಕಟ್ಟೆಗೋ ಅಥವಾ ನೀರಾವರಿ ಯೋಜನೆಗೋ ಹಳ್ಳಿ ಮುಳುಗಿ­ಹೋಗಿ­ದ್ದರೆ ಆ ಜನ ಅಷ್ಟೊಂದು ಕೊರಗು­ತ್ತಿರಲಿಲ್ಲ. ಒಂದು ರೀತಿಯ ಸಾರ್ಥಕ ಭಾವನೆ ಇರುತ್ತಿತ್ತು. ಈಗವರು ಪಡುತ್ತಿ­ರುವ ಯಾತನೆ ಮತ್ತೊಂದು ಬಗೆಯದು.

ಕುರುಡು ಧರ್ಮ ಮನುಷ್ಯನ ನೆತ್ತರ ರುಚಿಗೆ ಹಾತೊರೆದಿದ್ದನ್ನು ಕಣ್ಣಾರೆ ಕಂಡು ಜೀವ ಉಳಿಸಿ­ಕೊಳ್ಳಲು ಊರುಗಳನ್ನು ಬಿಟ್ಟು ಓಡಿ­ಬಂದಿದ್ದಾರೆ. ಪೊಲೀಸ್‌ ಠಾಣೆ, ನೆಂಟರ ಮನೆಗಳು ಒಳಗೊಂಡಂತೆ ಅವಕಾಶ ಸಿಕ್ಕ ಕಡೆಗಳಲ್ಲಿ ಆಸರೆ ಪಡೆದಿ­ದ್ದಾರೆ. ಕತ್ತಲು ಆವರಿಸಿದ ಹಾದಿ ಮೇಲೆ ಬೆಳಕು ಚೆಲ್ಲುವುದೇ ಎಂಬ ನಿರೀಕ್ಷೆಯಲ್ಲಿ ದಿನಗಳನ್ನು ದೂಡುತ್ತಿ­ದ್ದಾರೆ. ಕಳೆದ ವರ್ಷ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ಮುಜಫ್ಫರ್‌­ನಗರ­ದಲ್ಲಿ ನಡೆದ ಮತೀಯ ಗಲಭೆಗೆ ಸಿಕ್ಕಿ ಬದುಕು ಕಳೆದುಕೊಂಡವರ ಕರಳು ಹಿಂಡುವ ಕಥೆಯಿದು.

ಬಹುಸಂಖ್ಯಾತ ಸಮಾಜಕ್ಕೆ ಸೇರಿದ ಹುಡುಗಿಯೊಬ್ಬಳನ್ನು ಅಲ್ಪಸಂಖ್ಯಾತ ಸಮುದಾಯದ ಹುಡುಗರಿಬ್ಬರು ಚುಡಾಯಿಸಿ ಪ್ರಾಣ ಕಳೆದುಕೊಂಡ ಬೆನ್ನ ಹಿಂದೆಯೇ ಭುಗಿಲೆದ್ದ ಕೋಮು ದಳ್ಳುರಿ 63 ಜೀವಗಳನ್ನು ಬಲಿ ತೆಗೆದು­ಕೊಂಡಿದೆ. ಮಚ್ಚು, ಲಾಂಗುಗಳ ಹೊಡೆ­ತಕ್ಕೆ ಸಿಕ್ಕಿ ರಸ್ತೆಗಳ ಮೇಲೆ ಚೆಲ್ಲಾಡಿದ ‘ಚೆಂಡು’ಗಳಿಂದ ಚಿಮ್ಮಿದ ರಕ್ತದ ಕಲೆಗಳು ಮಾಸಿವೆ. ಗಲಭೆ ನಡೆದು ಏಳೆಂಟು ತಿಂಗಳಾದರೂ ಇನ್ನೂ ಸಾವಿರಾರು ಜನರು ಸರ್ಕಾರಿ ಕ್ಯಾಂಪುಗಳಲ್ಲೇ ಇದ್ದಾರೆ. ಮತೀಯ ಕ್ರೌರ್ಯಕ್ಕೆ ಸಿಕ್ಕಿದ ಅಮಾಯಕರು ಬೀದಿ ಪಾಲಾಗಿರುವ ಬದುಕನ್ನು ಕಟ್ಟಿಕೊಳ್ಳಲು ಹೋರಾಡುತ್ತಿದ್ದಾರೆ.

ರಾಜ್ಯ ಸರ್ಕಾರ ಮಲಕಾಪುರ, ಅಕ್ಬರ್‌­ಪುರ, ಸೊನೇಲಿ, ಮಂಜೂರ ಸೇರಿದಂತೆ ಮುಜಫ್ಫರ್‌ನಗರದ ಸುತ್ತ­ಮುತ್ತ ಆರಂಭಿಸಿರುವ ಕ್ಯಾಂಪುಗಳಲ್ಲಿ 50 ಸಾವಿರಕ್ಕೂ ಹೆಚ್ಚು ಸಂತ್ರಸ್ತರು ಆಶ್ರಯ ಪಡೆದಿದ್ದಾರೆಂದು ‘ಮಾಹಿತಿ ಹಕ್ಕು ಕಾರ್ಯಕರ್ತ’ ಶಾಹಿದ್‌ ಹುಸೇನ್‌ ಅಂಕಿಸಂಖ್ಯೆ ಕೊಡು­ತ್ತಾರೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಕೋಮು ಗಲಭೆ ನಡೆದಿರುವುದು ಇದೇ ಮೊದಲಲ್ಲ. ಹಿಂದೆಯೂ ಅನೇಕ ಸಲ ನಡೆದಿದೆ ಎಂದು ವಿವರಿಸುತ್ತಾರೆ.

‘ಪರಡ’ ಮುಜಫ್ಫರ್‌ ನಗರದಿಂದ 25 ಕಿ.ಮೀ ದೂರದಲ್ಲಿದೆ. ಗಲಭೆ ಸಂತ್ರ­ಸ್ತರೇ ತಾತ್ಕಾಲಿಕವಾಗಿ ನಿರ್ಮಿಸಿ­ಕೊಂಡಿರುವ ಕ್ಯಾಂಪಿದು. ಸಹಪುರ ಕ್ಯಾಂಪ್‌ ಎಂದೂ ಕರೆಯಲಾಗುತ್ತದೆ. ಸುಮಾರು 150 ಕುಟುಂಬಗಳಿವೆ. ಡಿಸೆಂಬರ್‌ 8ರಿಂದ ಇಲ್ಲಿದ್ದಾರೆ. ಹಳ್ಳಿ­­ದಿಂದ ಎಲ್ಲರೂ ಓಡಿ ಬಂದಿದ್ದಾರೆ.

‘ನಮ್ಮ ಮನೆ, ಮಠಗಳು ಲೂಟಿ­ಯಾಗಿವೆ. ಕರುಳ ಬಳ್ಳಿಗಳನ್ನು ಕೊಲ್ಲ­­ಲಾಗಿದೆ. ಊರುಗಳಿಗೆ ಹಿಂತಿರುಗುವ ಮನಸ್ಸಿಲ್ಲ. ಹೋದರೂ ದುಃಸ್ವಪ್ನ ಕಾಡುತ್ತದೆ. ಹೇಗೋ ಆ ಕಹಿ ನೆನಪು­ಗಳನ್ನು ಮರೆಯಬಹು­ದೆಂದು­ಕೊಂಡರೂ ಆ ಜನ (ಜಾಟರು) ನಮ್ಮನ್ನು ಬದುಕಲು ಬಿಡುವುದಿಲ್ಲ’ ಎಂದು 75 ವರ್ಷದ ವೃದ್ಧ ಮಹ­ಮ್ಮದ್‌ ಯಾಸಿನ್‌ ಅಳಲು ತೋಡಿ­ಕೊಳ್ಳು­ತ್ತಾರೆ. ಟಾರ್ಪಾಲ್‌ ಬಳಸಿ­ಕೊಂಡು ಹಾಕಿರುವ ಡೇರೆ ಮುಂದಿನ ಮಂಚದ ಮೇಲೆ ಕೂತು ಯಾಸಿನ್‌ ಕೋಮು ಗಲಭೆ ಕ್ರೌರ್ಯವನ್ನು ಬಿಚ್ಚಿ­ಡುತ್ತಾರೆ. ಪಕ್ಕದಲ್ಲಿದ್ದ ಸನಾಹ್‌ ಶರ್ಪು­ದ್ದೀನ್‌ ತಮ್ಮ ಗೆಳೆಯ ಮರೆತು­ಹೋದ ಅಂಶಗಳ ಮೇಲೆ ಬೆಳಕು ಚೆಲ್ಲುತ್ತಾರೆ.

‘ಕುಟುಂಬ ಹತ್ತು ಸಾವಿರ ಜನ­ಸಂಖ್ಯೆ ಹೊಂದಿರುವ ಗ್ರಾಮ. ಹಿಂದು, ಮುಸ್ಲಿ­ಮರು ಒಟ್ಟಾಗಿಯೇ ಬದುಕಿ­ದ್ದವರು. ಹಿಂದೆ ಯಾವಾಗಲೂ ಹೀಗೆ ಗಲಾಟೆ ನಡೆದಿರಲಿಲ್ಲ. ಎಲ್ಲ ಹಬ್ಬ­ಗಳನ್ನು ಒಟ್ಟಿಗೆ ಆಚ­ರಿಸುತ್ತಿದ್ದೆವು. ನಾನು ನೋಡಿದ ಮೊದಲ ಗಲಭೆ ಇದು. ಮೊದಲಿಗೆ ಜಾಟರು ಜಗಳ ತೆಗೆದರು. ಗಲಾಟೆ ಆರಂಭವಾಯಿತು. ಕಣ್ಣ ಮುಂದೆಯೇ 8 ಜನ ಸತ್ತರು. ಪ್ರಾಣ ಉಳಿಸಿ­ಕೊಳ್ಳಲು ಓಡಿ ಬಂದು ಪೊಲೀಸ್‌ ಠಾಣೆಯಲ್ಲಿ ಆಶ್ರಯ ಪಡೆದೆವು’ ಎಂದು ಇಬ್ಬರೂ ವೃದ್ಧರು ಕಣ್ಮರೆ­ಯಾದ ಹಿಂದೂ– ಮುಸ್ಲಿಂ ಸಮುದಾಯ­ಗಳ ಸಹಬಾಳ್ವೆ ಬದುಕನ್ನು ವಿವರಿಸುತ್ತಾರೆ.

‘ನಾವೆಲ್ಲ ಕೂಲಿ ಕಾರ್ಮಿಕರು. ಕೆಲ­ವರಿಗೆ ಅಲ್ಪಸ್ವಲ್ಪ ಜಮೀನಿದೆ. ಬಹು­ತೇಕರು ಜಾಟರ  ಜಮೀನಿನಲ್ಲಿ ಕೂಲಿ­ನಾಲಿ ಮಾಡಿ ಬದುಕುವವರು. ದುಡಿಮೆ ಇಲ್ಲದೆ ಬದುಕುವುದು ಕಷ್ಟ­ವಾಗಿದೆ. ನಾವು ಊರುಗಳನ್ನು ಬಿಟ್ಟಿ­ರು­ವುದರಿಂದ ಅವರಿಗೂ ಕೂಲಿ ಕಾರ್ಮಿ­ಕರು ಸಿಗುವುದಿಲ್ಲ. ಬಡವನ ಸಿಟ್ಟು ದವಡೆಗೆ ಮೂಲ ಎನ್ನುವಂತೆ... ಜಾಟರ ಮೇಲೆ ನಮಗೆ ಯಾವುದೇ ಸಿಟ್ಟಿಲ್ಲ. ಎಲ್ಲವನ್ನು ಮರೆಯಲು ಸಿದ್ಧ­ರಿದ್ದೇವೆ. ಆದರೆ, ಅವರು ಅದಕ್ಕೆ ಸಿದ್ಧ­ರಿಲ್ಲ’ ಎಂದು ಮಧ್ಯ ವಯಸ್ಸಿನ ಮಹ­ಮ್ಮದ್‌ ಯಾಕೂಬ್‌ ಹೇಳುತ್ತಾರೆ.

‘ಅಖಿಲೇಶ್‌ ಯಾದವ್‌ ಅವರ ಸರ್ಕಾರ ಗಲಭೆ ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು– ಸಹಕಾರ ಕೊಟ್ಟಿದೆ. ಮನೆ, ಮಠ ಕಳೆದುಕೊಂಡಿರುವ ಪ್ರತಿ  ಕುಟುಂಬಕ್ಕೆ ಐದು ಲಕ್ಷ, ಪ್ರಾಣ ಕಳೆದು­ಕೊಂಡ ಜನರ ಹತ್ತಿರದ ಸಂಬಂಧಿಕರಿಗೆ ₨15 ಲಕ್ಷ ಪರಿಹಾರ ಕೊಟ್ಟಿದೆ. ಸರ್ಕಾ­ರದ ವಿರುದ್ಧ ನಮ್ಮ ದೂರುಗಳೇನು ಇಲ್ಲ. ನಾವು ಬಯಸಿದ್ದ­ಕ್ಕಿಂತ ಹೆಚ್ಚು ಅನುಕೂಲ ಮಾಡಿ­ಕೊಟ್ಟಿದೆ’ ಎಂದು ನೌಷಾದ್ ಖಾನ್‌ ಹೇಳುತ್ತಾರೆ.

‘ಸಮಾಜವಾದಿ ಪಕ್ಷದ ಸರ್ಕಾರ ಅಲ್ಪಸಂಖ್ಯಾತರನ್ನು ರಕ್ಷಿಸಲಿಲ್ಲ. ಗಲಭೆ ತಡೆಗೆ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪಗಳಿವೆ’ ಎಂದು ಸಹಪುರ ಸಂತ್ರಸ್ತರನ್ನು ಕೇಳಿದರೆ. ‘ಅದು ಮುಖ್ಯ­ಮಂತ್ರಿ ಅಥವಾ ಅವರ ಸರ್ಕಾರದ ಸಮಸ್ಯೆಯಲ್ಲ. ಅವರ ಅಧೀನದಲ್ಲಿ­ರುವ ಅಧಿಕಾರಿಗಳ ಧೋರಣೆ. ಅಧಿ­ಕಾರಿ­ಗಳು ಸಕಾಲಕ್ಕೆ ಸರ್ಕಾರದ ಆದೇಶ­ಗಳನ್ನು ಪಾಲಿಸ­ದಿದ್ದರೆ ಮುಖ್ಯ­ಮಂತ್ರಿ ಏನು ಮಾಡುತ್ತಾರೆ’ ಎನ್ನುತ್ತಾರೆ.

‘ಕೋಮು ಗಲಭೆ ಸಮಯದಲ್ಲಿ ರಾಜ್ಯ ಸರ್ಕಾರ ಮಾಡಿರುವ ಅತ್ಯು­ತ್ತಮ­ವಾದ ಕೆಲಸ ಲೋಕಸಭೆ ಚುನಾ­ವಣೆ­ಯಲ್ಲಿ ಸಮಾಜವಾದಿ ಪಕ್ಷಕ್ಕೆ ಹೆಚ್ಚು ಅನುಕೂಲ ಆಗಬಹುದು. ನಾವಂತೂ ಮುಲಾಯಂ ಅವರನ್ನು ಬೆಂಬಲಿಸಲು ಆಲೋಚಿಸಿದ್ದೇವೆ. ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ. ನಮ್ಮ ಸಮುದಾಯದ ನಾಯಕರು ಅಂತಿಮವಾಗಿ ಏನು ಹೇಳುತ್ತಾರೆಂದು ನೋಡಬೇಕು. ಹಿಂದೂಗಳನ್ನು ಒಗ್ಗೂ­ಡಿ­­ಸುತ್ತಿರುವ ಬಿಜೆಪಿ ಸೋಲಿಸುವುದು ನಮ್ಮ ಗುರಿ’ ಎಂದು ಬೀಡಿ ಅಂಗಡಿ­ಯೊಂದರ ಮುಂದೆ ಗುಂಪು ಕಟ್ಟಿ­ಕೊಂಡು ಹರಟೆ ಹೊಡೆಯುತ್ತಿದ್ದ ಅನೇಕ ಯುವಕರು ವಿವರಿಸುತ್ತಾರೆ.

ಈ ಅಭಿಪ್ರಾಯಗಳನ್ನು ಒಪ್ಪದ ಅನೇಕರು ‘ಮಾಯಾವತಿ ಸರ್ಕಾರ ಚೆನ್ನಾಗಿತ್ತು. ಬಿಎಸ್‌ಪಿ ಆಡಳಿತದಲ್ಲಿ ಮತೀಯ ಗಲಭೆ ನಡೆದಿರಲಿಲ್ಲ’ ಎಂದೂ ಹೇಳುತ್ತಾರೆ.ಪಶ್ಚಿಮ ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಕಬಳಿ­ಸಲು ಎಸ್‌ಪಿ ಹಾಗೂ ಬಿಎಸ್‌ಪಿ ತುದಿಗಾಲ ಮೇಲೆ ನಿಂತಿದೆ. ಇವೆರಡೂ ಪಕ್ಷಗಳ ನಡುವೆ ನುಸುಳಲು ಕಾಂಗ್ರೆಸ್‌ ಹವಣಿಸುತ್ತಿದೆ.

ಜಾಟರು ಸೇರಿದಂತೆ ಮೇಲ್ಜಾತಿ ಹಿಂದುಗಳು ಬಿಜೆಪಿ ಪರ ನಿಲ್ಲುವ ಸುಳಿವು ನೀಡಿದ್ದಾರೆ. ಯಾದವರು ಮುಲಾಯಂ ಹಾಗೂ ದಲಿತರು ಮಾಯಾವತಿ ವೋಟ್‌­ಬ್ಯಾಂಕ್‌. ಚುನಾವಣೆಯಲ್ಲಿ ನಿರ್ಣಾ­ಯಕ ಪಾತ್ರ ವಹಿಸುವ ಮುಸ್ಲಿಮರ ಮತಗಳು ಒಂದು ಪಕ್ಷಕ್ಕೆ ಹೋಗುವುದೇ ಅಥವಾ ಮೂರು ಪಕ್ಷಗಳ ನಡುವೆ ಹಂಚಿಕೆ ಆಗುವುದೇ ಎನ್ನುವುದರ ಮೇಲೆ ಪಶ್ಚಿಮ ಉತ್ತರ ಪ್ರದೇಶದ ಅನೇಕ ಕ್ಷೇತ್ರಗಳ ಫಲಿತಾಂಶ ನಿಂತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.