ADVERTISEMENT

ರೈತ ವಿರೋಧಿ ಬಿಜೆಪಿ ಸೋಲಿಸಿ: ಮಾರುತಿ ಮಾನ್ಪಡೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 13:12 IST
Last Updated 16 ಏಪ್ರಿಲ್ 2019, 13:12 IST

ಹುಬ್ಬಳ್ಳಿ: ರೈತರ ಏಳಿಗೆಗೆ ದುಡಿಯುವುದಾಗಿ ಆಶ್ವಾಸನೆ ನೀಡಿ 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಐದು ವರ್ಷಗಳಲ್ಲಿ ರೈತರ ಸಂಕಷ್ಟ ಹೆಚ್ಚಿಸಿದೆ. ಆದ್ದರಿಂದ ಈ ಬಾರಿ ಬಿಜೆಪಿಯನ್ನು ಸೋಲಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಕರೆ ನೀಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಕೃಷಿ ಕ್ಷೇತ್ರದ ಬಿಕ್ಕಟ್ಟು ಹೆಚ್ಚಾಗಿದೆ. ಸ್ವಾಮಿನಾಥನ್‌ ವರದಿಯಲ್ಲಿ ಉಲ್ಲೇಖಿಸಿದ್ದ ಉತ್ಪಾದನೆ ವೆಚ್ಚದ ಮೂಲ ಶಿಫಾರಸನ್ನು ಅವರು ತಿರುಚಿದ್ದಾರೆ. ಮೋದಿ 15 ಕುಟುಂಬಗಳ ₹ 3 ಲಕ್ಷ 49 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಾರೆ. ಐದು ವರ್ಷದಲ್ಲಿ ಭಿಕ್ಷಕರು ಗಳಿಸುವಷ್ಟು ಹಣ ಕೂಡ ರೈತರಿಗೆ ಸಿಕ್ಕಿಲ್ಲ’ ಎಂದರು.

‘ಬಿಜೆಪಿಗೆ ರೈತರ ಸಮಸ್ಯೆ ಪರಿಹರಿಸುವುದು ಬೇಕಿಲ್ಲ. ಮಹದಾಯಿ ನೀರನ್ನು ಬಳಸಿಕೊಳ್ಳಲು ಯೋಜನೆ ರೂಪಿಸುವುದರ ಬಗ್ಗೆ ಆಸಕ್ತಿಯಿಲ್ಲ. ಕೇಂದ್ರ ಸರ್ಕಾರ 2015–16ರಲ್ಲಿ 68 ಲಕ್ಷ ಟನ್‌, 2016–17ರಲ್ಲಿ 56 ಲಕ್ಷ ಟನ್‌ ಮತ್ತು 2017–18ರಲ್ಲಿ 27 ಲಕ್ಷ ಟನ್‌ ತೊಗರಿ ಆಮದು ಮಾಡಿಕೊಂಡು ಬೆಳಗಾರರ ಸಂಕಷ್ಟ ಹೆಚ್ಚಿಸಿದೆ. ಕಬ್ಬು ಬೆಳೆಗಾರರ ಬದುಕು ದುರ್ಬರವಾಗಿದೆ’ ಎಂದು ದೂರಿದರು.

ADVERTISEMENT

‘ಹಿಂದೆ ಆಡಳಿತದಲ್ಲಿದ್ದ ಕಾಂಗ್ರೆಸ್‌ ಕೂಡ ರೈತ ವಿರೋಧಿಯಾಗಿಯೇ ನಡೆದುಕೊಂಡಿತ್ತು. ಬಿಜೆಪಿ ಕೂಡ ಅದೇ ಹಾದಿಯಲ್ಲಿ ಸಾಗಿದೆ. ಆದರೆ, ಒಂದು ಹೆಜ್ಜೆ ಮಂದೆ ಹೋಗಿರುವ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಸೇನೆಯ ಹೆಸರು ಬಳಸಿಕೊಂಡಿದ್ದು ಈಗಿನ ರಾಜಕೀಯ ತಲುಪಿರುವ ದುಸ್ಥಿತಿಗೆ ಸಾಕ್ಷಿ. ಆದ್ದರಿಂದ ಬಿಜೆಪಿ ವಿರುದ್ಧ ಮತ ಚಲಾಯಿಸಿ ಎಂದು ಜನಜಾಗೃತಿ ಮೂಡಿಸುತ್ತಿದ್ದೇವೆ’ ಎಂದರು.

ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಪಿ.ಎಸ್‌. ಉಪ್ಪಿನ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಎಲ್‌.ಎಸ್. ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.