ADVERTISEMENT

ಆಂಧ್ರ ಪಕ್ಷಗಳಿಗೆ ನಡುಕ ಹುಟ್ಟಿಸಿದ ‘ಜನ ಸೇನಾ’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST
ಆಂಧ್ರ ಪಕ್ಷಗಳಿಗೆ ನಡುಕ ಹುಟ್ಟಿಸಿದ ‘ಜನ ಸೇನಾ’
ಆಂಧ್ರ ಪಕ್ಷಗಳಿಗೆ ನಡುಕ ಹುಟ್ಟಿಸಿದ ‘ಜನ ಸೇನಾ’   

ಹೈದರಾಬಾದ್‌ (ಪಿಟಿಐ): ತೆಲುಗು ಚಿತ್ರನಟ ಪವನ್‌ ಕಲ್ಯಾಣ್‌ ಅವರ ನೂತನ ಜನ ಸೇನಾ ಪಕ್ಷ ಆಂಧ್ರ ಪ್ರದೇಶ ರಾಜಕೀಯ ಸಮೀಕರಣ ಬದಲಿಸಬಲ್ಲದೇ?

ಹೌದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಆಂಧ್ರ­ದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಒಟ್ಟೊಟ್ಟಿಗೆ ಚುನಾ­ವಣೆ ನಡೆಯಲಿದೆ. ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಕರಾವಳಿ ಮತ್ತು ರಾಯಲಸೀಮೆ ಪ್ರಾಂತ್ಯದಲ್ಲಿ ಹೊಸ ಪಕ್ಷವು ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದಿದ್ದಾರೆ.

ಪವನ್‌ ಕಲ್ಯಾಣ್‌ ಅವರು ಮಾರ್ಚ್‌ 14ರಂದು ಪಕ್ಷವನ್ನು ಘೋಷಿಸಿದ ನಂತರ, ಅವರು ಮಾಡಿದ ಎರಡು ಗಂಟೆ ಭಾಷಣ ಜನಸಾಮಾನ್ಯರ ಭಾವನೆ­ಯನ್ನು ಒಳಗೊಂಡಿತ್ತು ಎಂದು ಈಗಾಗಲೇ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ವಿಶ್ಲೇಷಕರ ಪ್ರಕಾರ, ಸೀಮಾಂಧ್ರದಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ ಇದೆ. ಆದರೆ, ಕಲ್ಯಾಣ್‌ ಅವರ ಜನಸೇನಾ ಪಕ್ಷ ಇವೆರಡರಲ್ಲಿ ಯಾರಿಗೆ ಹೊಡೆತ ನೀಡಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ.  ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ನಿರೀಕ್ಷೆಗೂ ಪವನ್‌ ಅಡ್ಡಿಯಾಗುವ ಸಾಧ್ಯತೆ ಇದೆ.

ಅಖಂಡ ಆಂಧ್ರ ಪ್ರದೇಶದ ಮಂತ್ರ ಜಪಿಸುತ್ತ ಮಾಜಿ ಮುಖ್ಯಮಂತ್ರಿ ಎನ್‌. ಕಿರಣ್‌ ಕುಮಾರ್‌ ರೆಡ್ಡಿ ಅವರು ಹುಟ್ಟುಹಾಕಿರುವ ‘ಜೈ ಸಮೈಕ್ಯ ಆಂಧ್ರ’ ಪಕ್ಷ ಹೆಚ್ಚಿನ ಪ್ರಭಾವ ಉಂಟು ಮಾಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಹೊಸ ಪಕ್ಷ ಆರಂಭಿಸಿದ ದಿನದಿಂದಲೂ ಎಲ್ಲರ ಗಮನ ಪವನ್‌ ಅವರತ್ತ ಕೇಂದ್ರೀಕೃತವಾಗಿದೆ. 2008ರಲ್ಲಿ ಚಿರಂಜೀವಿ ಅವರು ಪ್ರಜಾರಾಜ್ಯಂ ಪಕ್ಷ ಪ್ರಾರಂಭಿಸಿದ್ದ ಸಂದರ್ಭದಲ್ಲೂ ಈ ರೀತಿಯ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಪವನ್‌ ಕಲ್ಯಾಣ್‌ಗೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ನೋಡಿದರೆ ಟಿಡಿಪಿ ಹಾಗೂ ವೈಎಸ್‌ಆರ್‌ಸಿಗೆ ಚುನಾವಣೆಯಲ್ಲಿ ಹಾನಿಯಾಗಬಹುದು ಮತ್ತು ಜೈ ಸಮೈಕ್ಯ ಆಂಧ್ರ ಪಕ್ಷದ ಅಸ್ತಿತ್ವನ್ನೇ ಅಲುಗಾಡಿಸಬಹುದು ಎಂಬ  ಅಭಿಪ್ರಾಯವಿದೆ.
‘ಪವರ್‌ ಸ್ಟಾರ್‌’ ಇಲ್ಲಿಯವರೆಗೆ  ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೂಪುರೇಷೆ ಬಹಿರಂಗಪಡಿಸಿಲ್ಲ. ಆದರೆ, ರಾಜ್ಯದ ಹೆಚ್ಚಿನ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವ ಸಾಧ್ಯತೆ ದಟ್ಟವಾಗಿದೆ.

ಸೀಮಾಂಧ್ರ ಹಾಗೂ ತೆಲಂಗಾಣದ ಅಭಿವೃದ್ಧಿಗೆ ಪವನ್‌ ಕೈಜೋಡಿಸುವಂತೆ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಆಹ್ವಾನ ನೀಡಿದ್ದಾರೆ. ಕಾಂಗ್ರೆಸ್‌ ಹೊರತುಪಡಿಸಿ ಯಾರೊಂದಿಗೂ ಕೈಜೋಡಿಸಲು ಸಿದ್ಧ ಎಂದು ಪವನ್‌ ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಮೈತ್ರಿಯ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಪವನ್‌ ಕಲ್ಯಾಣ್‌ ಅವರು ಆಂಧ್ರ ಪ್ರದೇಶದಲ್ಲಿ ದೊಡ್ಡ ಅಭಿಮಾನಿಗಳ ಬಳಗವನ್ನೆ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.