ADVERTISEMENT

ಕಿರಣ್‌ ರೆಡ್ಡಿ ಪಕ್ಷಕ್ಕೆ ಪಾದರಕ್ಷೆ ಚಿಹ್ನೆ

ಮತ ಮೆಲುಕು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ಹೈದರಾಬಾದ್‌ (ಪಿಟಿಐ): ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌. ಕಿರಣ್‌ ಕುಮಾರ್‌ ರೆಡ್ಡಿ ಅವರ ನೂತನ ‘ಜೈ ಸಮೈಕ್ಯ ಆಂಧ್ರ’ ಪಕ್ಷದ ಚಿಹ್ನೆ ಪಾದರಕ್ಷೆ ಎಂದು ಘೋಷಿಸಲಾಗಿದೆ.

ವಿಶಾಖಪಟ್ಟಣದಲ್ಲಿ ಭಾನುವಾರ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ರೆಡ್ಡಿ ಅವರು ಈ ವಿಷಯವನ್ನು ಘೋಷಿಸಿದರು.

‘ಪಾದರಕ್ಷೆ ಚಿಹ್ನೆಗೆ ಚುನಾವಣಾ ಆಯೋಗ ಒಪ್ಪಿಗೆ ನೀಡಿದೆ’ ಎಂದು ಜೈ ಸಮೈಕ್ಯ ಆಂಧ್ರ ಪಕ್ಷದ ಮುಖಂಡರು ತಿಳಿಸಿದ್ದಾರೆ.
‘ಪಾದರಕ್ಷೆ ಸಮಾನತೆಯ ಸಂಕೇತವಾಗಿದೆ. ಧರ್ಮ, ಜಾತಿ, ವರ್ಗ ಎಂಬ ಭೇದವಿಲ್ಲದೇ ಎಲ್ಲರಿಗೂ ಸಮಾನವಾದ ರಕ್ಷಣೆ ಒದಗಿಸುತ್ತದೆ’ ಎಂದು ಹೇಳಿಕೊಂಡಿದ್ದಾರೆ.

ರೆಡ್ಡಿ ಅವರು ಶನಿವಾರ ಇಲ್ಲಿ ಐ.ಟಿ ಉದ್ಯೋಗಿಗಳೊಂದಿಗೆ ಸಭೆ ನಡೆಸಿದರು. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಅವರು ವಿವಿಧ ವರ್ಗಗಳೊಂದಿಗೆ ಸಮಾಲೋಚಿಸುತ್ತಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಏಪ್ರಿಲ್‌ 30 ಮತ್ತು ಮೇ 7ರಂದು ಲೋಕಸಭೆ ಮತ್ತು ವಿಧಾನಸಭೆಗೆ ಜೊತೆಯಲ್ಲೇ  ಚುನಾವಣೆ ನಡೆಯಲಿದೆ.

ಮತಪತ್ರ ಬಳಸಲು ಆಗ್ರಹ
ಭೋಪಾಲ್‌ (ಪಿಟಿಐ): ಮುಂಬರುವ ಲೋಕಸಭೆ ಚುನಾವಣೆ­ಯಲ್ಲಿ ಎಲೆಕ್ಟ್ರಾನಿಕ್‌ ಮತಯಂತ್ರಗಳ  (ಇವಿಎಮ್‌) ಬದಲು ಮತಪತ್ರಗಳನ್ನು ಬಳಸ­ಬೇಕೆಂದು ಕಾಂಗ್ರೆಸ್‌ ಸಂಸದ ಸಜ್ಜನ್‌ ಸಿಂಗ್‌ ವರ್ಮಾ ಅವರು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.

‘ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇವಿಎಮ್‌ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರಿಂದ ಜನ ಮತದಾನ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ಮರು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದ್ದರಿಂದ ಮತಪತ್ರಗಳನ್ನು ಬಳಸುವುದು ಒಳಿತು’ ಎಂದು ಶನಿವಾರ ಸಂಜೆ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

‘ಪ್ರಣಾಳಿಕೆಗೆ ಮಕ್ಕಳ ಹಕ್ಕು ಸೇರಿಸಿ
ನವದೆಹಲಿ (ಪಿಟಿಐ): ಚುನಾವಣಾ ಪ್ರಣಾಳಿಕೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಪ್ರತ್ಯೇಕ ಅಧ್ಯಾಯವನ್ನು ಅಳವಡಿಸು­ವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌) ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದೆ.

ಈ ಸಂಬಂಧ, ಎನ್‌ಸಿಪಿಸಿಆರ್‌ ಅಧ್ಯಕ್ಷರಾದ ಕುಶಾಲ್‌ ಸಿಂಗ್‌ ಅವರು ಸೋನಿಯಾ ಗಾಂಧಿ (ಕಾಂಗ್ರೆಸ್‌), ರಾಜ­ನಾಥ್‌ ಸಿಂಗ್‌ (ಬಿಜೆಪಿ), ಮಾಯಾವತಿ (ಬಿಎಸ್‌ಪಿ), ಪ್ರಕಾಶ್ ಕಾರಟ್‌ (ಸಿಪಿಎಂ) ಸೇರಿದಂತೆ ಎಲ್ಲಾ ಪಕ್ಷಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

‘ತೃತೀಯ ರಂಗ ಮರೀಚಿಕೆ’
ಚೆನ್ನೈ(ಪಿಟಿಐ): ರಾಷ್ಟ್ರೀಯ ಮಟ್ಟದಲ್ಲಿ ತೃತೀಯ ರಂಗವನ್ನು ‘ಮರೀಚಿಕೆ’ ಎಂದು ಬಣ್ಣಿಸಿರುವ ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು, ಅದು ಈ ಹಿಂದೆ ‘ಯತ್ನಿಸಿ’ ‘ವಿಫಲ’­ಗೊಂಡಿ­ರುವ ಪ್ರಯೋಗ ಎಂದು ಹೇಳಿದ್ದಾರೆ.

‘ಅವರು ತೃತೀಯ ರಂಗದ ಬಗ್ಗೆ ಮಾತನಾಡುತ್ತಾರೆ. ಆದರೆ, ಅದು ಪ್ರಯತ್ನಿಸಿ ವಿಫಲವಾದ ಯತ್ನ. ಕೇವಲ ಮರೀಚಿಕೆ. ಈ ಹಿಂದೆಯೂ ತೃತೀಯ ರಂಗ ಇತ್ತು. ಐ.ಕೆ. ಗುಜ್ರಾಲ್‌, ಚಂದ್ರಶೇಖರ್‌ ಅವರು ಪ್ರಧಾನಿ­ಯಾ­ಗಿದ್ದರು. ಆದರೆ ದೀರ್ಘ ಅವಧಿಗೆ ಆಡಳಿತ ನಡೆಸಲು ಅವರಿಗೆ ಸಾಧ್ಯ­ವಾ­ಗಿಲ್ಲ. ಯಾಕೆಂದರೆ ಎಲ್ಲರನ್ನೂ ನಿಯಂತ್ರಿಸುವ ಸಾಮರ್ಥ್ಯ ಅವರಿಗೆ ಇರಲಿಲ್ಲ’ ಎಂದು ನಾಯ್ಡು ಹೇಳಿದ್ದಾರೆ.

ಮತದಾರರ ತಲುಪಲು ಹೋಳಿ ರಹದಾರಿ
ಕೋಲ್ಕತ್ತ (ಪಿಟಿಐ):
ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ, ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಬಣ್ಣಗಳ ಹಬ್ಬ ಹೋಳಿ­ಯನ್ನು ಮತದಾರರ ಜೊತೆ ಸಂಪರ್ಕ ಸಾಧಿಸಲು ಬಳಸಿಕೊಂಡರು.

ಪಶ್ಚಿಮ ಬಂಗಾಳದಲ್ಲಿ ಹೋಳಿ­ಯನ್ನು ‘ದೋಲಿಜಾತ್ರೆ’ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಹಬ್ಬದ ಅಂಗವಾಗಿ ಹಾಡು, ನೃತ್ಯಗಳೂ ನಡೆಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.