ADVERTISEMENT

ಚುನಾವಣಾ ಆಯೋಗ ಮತ್ತೆ ಮನವಿ

ಜನಮತ ಸಮೀಕ್ಷೆಗೆ ನಿರ್ಬಂಧ: ಕಾನೂನು ಸಚಿವಾಲಯಕ್ಕೆ ಪತ್ರ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 19:30 IST
Last Updated 8 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಂತೆಯೇ, ಜನಮತ ಸಮೀಕ್ಷೆ­ಗಳನ್ನು ನಿರ್ಬಂಧಿಸುವಂತೆ ಕೋರಿ ಚುನಾವಣಾ ಆಯೋಗ ಕಾನೂನು ಸಚಿವಾಲಯಕ್ಕೆ ಮತ್ತೆ ಪತ್ರ ಬರೆದಿದೆ. ಆದರೆ, ಈ ಬಗ್ಗೆ ನಿರ್ಧಾರ ಕೈ­ಗೊಳ್ಳುವ ವಿಚಾರದಲ್ಲಿ ಕೇಂದ್ರ ಸರ್ಕಾರ ಉತ್ಸುಕತೆ ತೋರಿದಂತೆ ಕಾಣುತ್ತಿಲ್ಲ.

ಜನಮತ ಸಮೀಕ್ಷೆಯ ವಿವರಗಳನ್ನು ಪ್ರಕಟಿಸುವುದಕ್ಕೆ ನಿರ್ಬಂಧ ಹೇರುವ ಉದ್ದೇಶದಿಂದ ಕಾನೂನಿಗೆ ತಿದ್ದುಪಡಿ ತರುವಂತೆ ಕೋರಿ ಚುನಾವಣಾ ಆಯೋಗವು ಕಳೆದ ವಾರ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದೆ. ಅಲ್ಲದೇ, ಈ ಸಂಬಂಧ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದಕ್ಕೆ ವಿಷಾದವನ್ನೂ ವ್ಯಕ್ತಪಡಿಸಿದೆ.

‘ಜನಮತ ಸಮೀಕ್ಷೆ ಫಲಿತಾಂಶಗಳನ್ನು ಪ್ರಕಟಿಸುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾನೂನಿಗೆ ತಿದ್ದುಪಡಿ ತರುವ ಪ್ರಸ್ತಾವವನ್ನು ಆಯೋಗ 2004ರಲ್ಲಿ ಮಾಡಿದೆ. ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ’ ಎಂದು ಪತ್ರದಲ್ಲಿ ಹೇಳಲಾಗಿದೆ.
‘ಜನಮತ ಸಮೀಕ್ಷೆ ಕುರಿತಂತೆ   ಕಾಂಗ್ರೆಸ್‌  ಎತ್ತಿರುವ ವಿಚಾರಗಳ ಹಿನ್ನೆಲೆಯಲ್ಲಿ, ಈ ಹಿಂದೆ ಮಾಡಿರುವ ಪ್ರಸ್ತಾವದ ಸಂಬಂಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವುದನ್ನು ಆಯೋಗ ನಿರೀಕ್ಷಿಸುತ್ತದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಆತುರ ಪಡದ ಸರ್ಕಾರ
ಈ ಕುರಿತು ನಿರ್ಧಾರ ಕೈಗೊಳ್ಳುವ ವಿಚಾರದಲ್ಲಿ ಸರ್ಕಾರ ಉತ್ಸಾಹ ತೋರಿದಂತೆ ಕಾಣುತ್ತಿಲ್ಲ.
‘ಕಾನೂನು ಆಯೋಗವು ಈಗಾಗಲೇ ಚುನಾ­ವಣಾ ಸುಧಾರಣೆಗಳ ಬಗ್ಗೆ ಪರಿಶೀಲನೆ ನಡೆಸು­ತ್ತಿದೆ. ಜನಮತ ಸಮೀಕ್ಷೆ ವಿಚಾರವು ಈ ಸುಧಾ­ರಣೆ­ಗಳ ಭಾಗ­ವಾಗಿದೆ. ಹಾಗಾಗಿ, ಇದನ್ನು ಆಯೋಗದ ಪರಿಶೀಲನೆಗಾಗಿ ಶಿಫಾರಸು ಮಾಡ­ಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸ್ತುತ ಜಾರಿಯಲ್ಲಿರುವ ಕಾನೂನು ಪ್ರಕಾರ,  ಮತದಾನದ ಎರಡು ದಿನಗಳ ಹಿಂದಿನವರೆಗೆ  ಜನಮತ ಸಮೀಕ್ಷೆ ನಡೆಸಬಹುದಾಗಿದೆ.
ಚುನಾವಣಾ ಅಧಿಸೂಚನೆ ಹೊರಡಿ­ಸಿದ ನಂತರ, ಕೊನೆ ಹಂತದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ನಡೆಯುವವರೆಗೆ ಜನಾಭಿಪ್ರಾಯ ಸಂಗ್ರಹದ ಫಲಿತಾಂಶಗಳ ಪ್ರಸಾರ, ಪ್ರಕಟಣೆಗೆ ನಿಷೇಧ ಹೇರಬೇಕು ಎಂಬ ಪ್ರಸ್ತಾವವನ್ನು ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಂದಿಟ್ಟಿದೆ. ಜನಮತ ಸಮೀಕ್ಷೆ ಮೇಲೆ ನಿಷೇಧ ಹೇರಬೇಕಾದರೆ,  ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.