ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಂತಹ ದೊಡ್ಡ ರಾಜ್ಯಗಳಲ್ಲಿ ಲೋಕಸಭಾ ಚುನಾವಣಾ ವೆಚ್ಚದ ಮಿತಿಯನ್ನು ರೂ. 40 ಲಕ್ಷದಿಂದ ರೂ. 70 ಲಕ್ಷಕ್ಕೆ ಮತ್ತು ಗೋವಾದಂತಹ ಸಣ್ಣ ರಾಜ್ಯಗಳು, ಈಶಾನ್ಯ ರಾಜ್ಯಗಳು ಹಾಗೂ ಗುಡ್ಡಗಾಡು ಪ್ರದೇಶದ ರಾಜ್ಯಗಳಲ್ಲಿ ಈ ಮಿತಿಯನ್ನು ರೂ. 22 ಲಕ್ಷದಿಂದ ರೂ. 54 ಲಕ್ಷಕ್ಕೆ ಏರಿಸುವ ಚುನಾವಣಾ ಆಯೋಗದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಇತ್ತೀಚೆಗೆ ಸಮ್ಮತಿ ಸೂಚಿಸಿದೆ.
ಇದೇ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆಗಳ ವೆಚ್ಚದ ಮಿತಿಯನ್ನು ದೊಡ್ಡ ರಾಜ್ಯಗಳಲ್ಲಿ ರೂ. 28 ಲಕ್ಷಕ್ಕೆ ಹಾಗೂ ಸಣ್ಣ, ಈಶಾನ್ಯ, ಗುಡ್ಡಗಾಡು ರಾಜ್ಯಗಳಲ್ಲಿ ರೂ. 20ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನೂ ಕೇಂದ್ರ ಸಂಪುಟ ಅನುಮೋದಿಸಿದೆ.
ಕೇಂದ್ರದ ನಿರ್ಧಾರವನ್ನು ರಾಜಕೀಯ ಪಕ್ಷಗಳು ಸ್ವಾಗತಿಸಿವೆಯಾದರೂ, 2009ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮಾಡಿರುವ ವೆಚ್ಚಗಳನ್ನು ವಿಶ್ಲೇಷಣೆ ಮಾಡಿದಾಗ, ಮಿತಿಯನ್ನು ಹೆಚ್ಚಿಸುವ ಅಗತ್ಯವಿರಲಿಲ್ಲ ಎಂಬ ಭಾವನೆ ಮೂಡುತ್ತದೆ.
ಚುನಾವಣಾ ಆಯೋಗ ನಿಗದಿ ಪಡಿಸಿರುವ ವೆಚ್ಚದ ಮಿತಿ ಕಡಿಮೆ ಎಂದು ವಿವಿಧ ಪಕ್ಷಗಳ ಅಭ್ಯರ್ಥಿಗಳು ನಿರಂತರವಾಗಿ ಹೇಳುತ್ತಲೇ ಬಂದಿದ್ದಾರೆ. ಅಚ್ಚರಿಯ ಸಂಗತಿ ಎಂದರೆ, ನಿಗದಿತ ಮಿತಿಯ ಅರ್ಧದಷ್ಟು ಹಣವನ್ನೂ ಅವರು ‘ವೆಚ್ಚ’ ಮಾಡುತ್ತಿಲ್ಲ.
2009ರ ಲೋಕಸಭಾ ಚುನಾವಣೆಯ ಬಳಿಕ ಸಂಸದರು ಘೋಷಿಸಿಕೊಂಡಿರುವ ಚುನಾವಣಾ ವೆಚ್ಚ ಸರಾಸರಿ ರೂ. 14.62 ಲಕ್ಷ. ಅಂದರೆ, ಅವರು ಖರ್ಚು ಮಾಡಿದ್ದು ಆಗ ನಿಗದಿಪಡಿಸಲಾಗಿದ್ದ ವೆಚ್ಚದ ಮಿತಿಯ ಶೇ 59ರಷ್ಟು ಮಾತ್ರ.
ರಾಷ್ಟ್ರೀಯ ಚುನಾವಣಾ ನಿಗಾ ಸಂಸ್ಥೆ (ಎನ್‌ಇಡಬ್ಲ್ಯು) ಮತ್ತು ಪ್ರಜಾಪ್ರಭುತ್ವ ಸುಧಾರಣೆಗಳ ಸಂಸ್ಥೆ (ಎಡಿಆರ್) ಜಂಟಿಯಾಗಿ 2009ರ ಲೋಕಸಭಾ ಚುನಾವಣೆಯ ನಂತರ ಸಂಸತ್ ಸದಸ್ಯರು ಸಲ್ಲಿಸಿದ್ದ ಚುನಾವಣಾ ವೆಚ್ಚಗಳ ವಿವರಗಳನ್ನು ವಿಶ್ಲೇಷಣೆ ಮಾಡಿವೆ. 437 ಸಂಸದರು ತಾವು ಮಾಡಿರುವ ವೆಚ್ಚಗಳನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಉಳಿದವರು ಮಾಡಿರುವ ವೆಚ್ಚದ ವಿವರಗಳು ಲಭ್ಯವಿರದೇ ಇರುವುದ-ರಿಂದ 437 ಸಂಸದರು ಮಾಡಿರುವ ವೆಚ್ಚಗಳನ್ನು ಮಾತ್ರ ಪರಿಗಣಿಸಿ ಎನ್‌ಇಡಬ್ಲ್ಯು ಮತ್ತು ಎಡಿಆರ್ ವರದಿಯೊಂದನ್ನು ತಯಾರಿಸಿದೆ.
ಸಾರ್ವಜನಿಕ ಸಭೆ, ಮೆರವಣಿಗೆಗಳ ಆಯೋಜನೆಗೆ ಮಾಡಿರುವ ಖರ್ಚು, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಮಾಡಿರುವ ಪ್ರಚಾರದ ವೆಚ್ಚ, ಪ್ರಚಾರದ ಸಂದರ್ಭದಲ್ಲಿ ಕಾರ್ಯಕರ್ತರಿಗೆ ನೀಡಿದ ಹಣ, ಪ್ರಚಾರಕ್ಕೆ ಬಳಸಿದ ವಾಹನಗಳ ಖರ್ಚು, ಪ್ರಚಾರ ಸಾಮಗ್ರಿಗಳಿಗೆ ನೀಡಿರುವ ಮೊತ್ತಗಳು ಒಟ್ಟು ವೆಚ್ಚದಲ್ಲಿ ಸೇರಿವೆ.
ವಿಧಾನಸಭಾ ಚುನಾವಣೆಗಳಲ್ಲೂ ಇದೇ ಸ್ಥಿತಿ: ರಾಜಸ್ತಾನ, ಛತ್ತೀಸಗಡ, ಮಿಜೋರಾಂ, ದೆಹಲಿ ಹಾಗೂ ಮಧ್ಯಪ್ರದೇಶಗಳ ವಿಧಾನಸಭೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಗಳಲ್ಲೂ ಶಾಸಕರು ಮಾಡಿರುವ ವೆಚ್ಚ ನಿಗದಿತ ಮಿತಿಗಿಂತ ಸಾಕಷ್ಟು ಕಡಿಮೆಯೇ ಇದೆ. ಈ ಐದು ರಾಜ್ಯಗಳ ಶಾಸಕರು ಪ್ರಕಟಿಸಿರುವ ಚುನಾವಣಾ ವೆಚ್ಚದ ದಾಖಲೆಗಳ ಪ್ರಕಾರ, ಅವರು ಮಾಡಿರುವ ಸರಾಸರಿ ವೆಚ್ಚವು ಗರಿಷ್ಠ ಮಿತಿಯ ಶೇ 50ರಷ್ಟು ಮಾತ್ರ.
ಮಿತಿ ಹೆಚ್ಚಳದಿಂದ ಪ್ರಯೋಜನವಿಲ್ಲ: ಚುನಾವಣಾ ವೆಚ್ಚ ಮಿತಿಯನ್ನು ಹೆಚ್ಚಿಸುವುದರಿಂದ ನಿಜವಾದ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದು ಹೇಳುತ್ತಾರೆ ಪ್ರಜಾಪ್ರಭುತ್ವ ಸುಧಾರಣೆಗಳ ಸಂಸ್ಥೆಯ (ಎಡಿಆರ್) ಸಂಸ್ಥಾಪಕ ಪ್ರೊ. ತ್ರಿಲೋಚನ ಶಾಸ್ತ್ರಿ. ಅವರು ಮೂರು ಸಂಗತಿಗಳನ್ನು ಪಟ್ಟಿ ಮಾಡುತ್ತಾರೆ.
‘ಮೊದಲನೆಯದಾಗಿ, ಜನರ ಸೇವೆ ಮಾಡುವ ತುಡಿತ ಹೊಂದಿರುವ ವ್ಯಕ್ತಿಯೊಬ್ಬರು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುವಂತಹ ವಾತಾವರಣ ನಿರ್ಮಾಣವಾಗಬೇಕು. ಚುನಾವಣಾ ವೆಚ್ಚದ ಮಿತಿ ಹೆಚ್ಚಿಸುವುದರಿಂದ ಇದರ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ.
‘ಎರಡನೆಯದಾಗಿ, ದೇಣಿಗೆ ಮತ್ತು ಅವುಗಳ ಮೂಲಗಳ ಕುರಿತು ಪಾರದರ್ಶಕತೆ ಇರಬೇಕು. ಅಭ್ಯರ್ಥಿಗಳ ಮೇಲೆ ಹಾಕುವ ದಂಡದ ಬಗ್ಗೆಯೂ ಸ್ಪಷ್ಟತೆ ಇರಬೇಕು. ಆದರೆ ಈ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ.
‘ಮೂರನೆಯದಾಗಿ ಚುನಾವಣಾ ವೆಚ್ಚದ ಮಿತಿ ರೂ. 70 ಲಕ್ಷ ದಾಟಿದರೆ ದಂಡ ವಿಧಿಸುವಂತಹ ವ್ಯವಸ್ಥೆ ಇರಬೇಕು. ಆದರೆ, ಈ ಬಗ್ಗೆಯೂ ಕೇಂದ್ರದ ಮುಂದೆ ಯಾವುದೇ ಪ್ರಸ್ತಾಪವಿಲ್ಲ.
‘ಕೊನೆಯದಾಗಿ ಚುನಾವಣೆಯಲ್ಲಿ ಕಪ್ಪು ಹಣ ಭಾರಿ ಪ್ರಮಾಣದಲ್ಲಿ ಚಲಾವಣೆಯಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಗೋಪಿನಾಥ್ ಮುಂಡೆ ಅವರು ಎಂಟು ಕೋಟಿಗೂ ಅಧಿಕ ಖರ್ಚು ಮಾಡಿರುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಕಪ್ಪು ಹಣದ ದುರ್ಬಳಕೆಯನ್ನು ಹತ್ತಿಕ್ಕುವ ಅಗತ್ಯವಿದೆ. ಒಟ್ಟಾರೆ ಹೇಳುವುದಾದರೆ, ಇಂತಹ ಯಾವುದೇ ಪ್ರಮುಖ ವಿಚಾರಗಳನ್ನು ಕೇಂದ್ರ ಸರ್ಕಾರ ಚರ್ಚಿಸಿಲ್ಲ’ ಎಂದು ಪ್ರೊ. ತ್ರಿಲೋಚನ ಶಾಸ್ತ್ರಿ ಹೇಳುತ್ತಾರೆ.
ವರದಿಯ ಪ್ರಮುಖಾಂಶಗಳು...
*ಮಿತಿಯ ಅರ್ಧಕ್ಕೂ ಕಡಿಮೆ ಖರ್ಚು: 2009ರಲ್ಲಿ 437 ಸಂಸದರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವೆಚ್ಚದ ವಿವರಗಳ ಪ್ರಕಾರ, 129 ಸಂಸದರು ತಮ್ಮ ಕ್ಷೇತ್ರಗಳಲ್ಲಿ ವೆಚ್ಚದ ಮಿತಿಯ ಶೇ 50ಕ್ಕೂ ಕಡಿಮೆ ಮೊತ್ತವನ್ನು ಖರ್ಚು ಮಾಡಿದ್ದಾರೆ.
*ಸರಾಸರಿ ವೆಚ್ಚ ರೂ. 14.62 ಲಕ್ಷ: 437 ಸಂಸತ್ ಸದಸ್ಯರು ಮಾಡಿರುವ ಸರಾಸರಿ ಚುನಾವಣಾ ವೆಚ್ಚ ರೂ. 14.62 ಲಕ್ಷ. ಶೇಕಡಾವಾರು ಲೆಕ್ಕದಲ್ಲಿ ಹೇಳುವುದಾದರೆ, ವೆಚ್ಚದ ಮಿತಿಯ ಶೇ 59 ರಷ್ಟು.
*ರಾಜಕೀಯ ಪಕ್ಷಗಳು ನೀಡಿರುವ ದೇಣಿಗೆ: ತಮ್ಮ ಪಕ್ಷದಿಂದ ಯಾವುದೇ ದೇಣಿಗೆ ಬಂದಿಲ್ಲ ಎಂದು 317 ಸಂಸದರು ಹೇಳಿಕೊಂಡಿದ್ದರೆ, ಪಕ್ಷವು ಸ್ವಲ್ಪ ಧನ ಸಹಾಯ ಮಾಡಿದೆ ಎಂದು 120 ಸಂಸದರು ಹೇಳಿದ್ದಾರೆ. 15 ಸಂಸದರು ಮಾತ್ರ ತಮ್ಮ ಎಲ್ಲಾ ಚುನಾವಣಾ ವೆಚ್ಚಗಳನ್ನು ಪಕ್ಷವೇ ಭರಿಸಿದೆ ಎಂದು ಘೋಷಿಸಿದ್ದಾರೆ.
*ಮಿತಿ ಮೀರಿದವರು ಇಬ್ಬರು ಮಾತ್ರ: ನಿಗದಿತ ಮಿತಿಗಿಂತಲೂ ಹೆಚ್ಚು ಖರ್ಚು ಮಾಡಿರುವುದಾಗಿ ಇಬ್ಬರು ಸಂಸದರು ಘೋಷಿಸಿಕೊಂಡಿದ್ದಾರೆ.
*ಪಕ್ಷವಾರು ಚುನಾವಣಾ ವೆಚ್ಚ: ಕಾಂಗ್ರೆಸ್‌ನ 161 ಸಂಸದರು ಸರಾಸರಿ ರೂ. 14.38 ಲಕ್ಷ (ಮಿತಿಯ ಶೇ 59), ಬಿಜೆಪಿಯ 91 ಲೋಕಸಭಾ ಸದಸ್ಯರು ರೂ. 14.43 ಲಕ್ಷ, ಎಸ್‌ಪಿಯ 21 ಸದಸ್ಯರು ರೂ. 19.48 ಲಕ್ಷ (ಮಿತಿಯ ಶೇ 78), ಬಿಎಸ್‌ಪಿಯ 19 ಸಂಸದರು 14.72 ಲಕ್ಷ (ವೆಚ್ಚ ಮಿತಿಯ ಶೇ 59) ಖರ್ಚು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.